Monday, June 10, 2013

ಬಟ್ಟಲು ಕಣ್ಣು, ಸುಂದರ ಪಾದಗಳು ಹಾಗೂ ಬುರ್ಖಾ ...!


ಮಂಡ್ಯದಿಂದ ಹೊರಟ ಕೆಂಪು ಬಸ್ಸು ಉಸ್ಸೆಂದು ನಿಲ್ಲುತ್ತಾ ಇದ್ದದ್ದು ಶ್ರೀರಂಗಪಟ್ಟಣದ ಬಸ್ ನಿಲ್ದಾಣದಲ್ಲೇ... ವೀರ ಸೇನಾನಿ ಮೈಸೂರು ಹುಲಿ ಟಿಪ್ಪುವಿನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣ ಇವತ್ತಿಗೂ ಅನೇಕ ನಿಗೂಢಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಪ್ರತಿ ಹಳೇ ರಸ್ತೆಯು ಹೊಸ ಇತಿಹಾಸವನ್ನೇ ಹೇಳೋ ಶ್ರೀರಂಗಪಟ್ಟಣದಲ್ಲಿ ನಿಗೂಢ ತುಂಬಿಕೊಂಡ ಸುಂದರಿಯರಿಗೂ ಕೊರತೆ ಇರಲಿಲ್ಲ. ನನಗೂ ಆಗ ಅಂತದ್ದೇ ವಯಸ್ಸು. ಫೇಲಾಗಿದ್ದ ಪಿಯುಸಿಯನ್ನು ಹಾಗೂ - ಹೀಗೂ ಪಾಸು ಮಾಡಿಕೊಂಡು ಮೈಸೂರಿನ ಮಹಾರಾಜ ಕಾಲೇಜಲ್ಲಿ ಬಿಎ ಸೀಟು ಗಿಟ್ಟಿಸಿದ್ದೆ. ಎಲ್ಎಲ್ಬಿ ಮಾಡು ಎನ್ನೋ ಅಪ್ಪನ ಆದೇಶವನ್ನು ಧಿಕ್ಕರಿಸಿ ಜರ್ನಲಿಸಂ ಬಿಎ ಸೇರಿಕೊಂಡು, ಹಾಸ್ಟೆಲ್ನಲ್ಲಿ ಇರಲಾಗದೇ ನಿತ್ಯ ಊರಿಂದಲೇ ಮೈಸೂರಿಗೆ ಓಡಾಡುತ್ತಿದ್ದ ದಿನಗಳವು.
ಶ್ರೀರಂಗಪಟ್ಟಣ ಬಸ್ ನಿಲ್ದಾಣದಲ್ಲಿ ನಿತ್ಯ 8 ಗಂಟೆಯ ಹೊತ್ತಿಗೆ ಕಪ್ಪನೆಯ ಬುರ್ಖಾ ಧರಿಸಿ, ಕಣ್ಣುಗಳನ್ನು ಮಾತ್ರ ಸಾರ್ವಜನಿಕ ದರ್ಶನ - ಪ್ರದರ್ಶನಕ್ಕಿರಿಸಿ ಒಬ್ಬಳು ಬರುತ್ತಿದ್ದಳು. ಅವಳ ಕಣ್ಣು ಸುತ್ತಲ ಆ ಬಿಳುಪು ಚರ್ಮ, ಸುಂದರ ಪಾದಗಳನ್ನ ನೋಡಿದ್ರೆ ಸಾಕು ಅಬ್ಬಾ ಈಕೆ ಅದೆಷ್ಟು ಸುಂದರಿ ಇರಬೇಕು ಅನ್ನಿಸ್ತಿತ್ತು. ಒಂದು ದಿನ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿಯೂ ಬಿಟ್ಟಳು ಆ ಕಣ್ಣು ಮತ್ತು ಮೊಳಕಾಲಿನ ದರ್ಶನ ಮಾತ್ರ ನೀಡುತ್ತಿದ್ದ ಬುರ್ಖಾ  ಸುಂದರಿ.
ಎಲ್ಲೋ ಒಂದು ಹುಡ್ಗಿ ನನ್ಗೂ ಸಿಗಬಹುದು. ನನ್ಗೂ ಲವ್ ಆಗಬಹುದು ಎಂದು ತವಕಿಸುತ್ತಿದ್ದ ಆ ದಿನಗಳಲ್ಲಿ ಆಕೆಯೇ ನನ್ನ ಗೆಳಯಾಗಿ, ಲವ್ವರ್ ಆದಾಳೇನೋ ಅಂತ ಯೋಚಿಸಿದ್ದು ಇತ್ತು. ನಾನೋ ಮಂಡ್ಯದಲ್ಲಿ ಬಸ್ಸು ಹತ್ತಿದ ಮೇಲೆ ಸಾಧ್ಯವಾದಷ್ಟು ಪಕ್ಕದ ಸೀಟು ಖಾಲಿ ಇರುವಂತೆ ನೋಡಿಕೊಳ್ಳುತ್ತಿದೆ. ಶ್ರೀರಂಗಪಟ್ಟಣದಲ್ಲಿ ಆಕೆ ಕಂಡ್ರೆ ಹಾಗೆ ಸೀಟನ್ನು ಅವಳು ಬರೋ ತನಕ ಖಾಲಿ ಇಟ್ಟು ಕೂರಿಸಿಕೊಳ್ತಾ ಇದ್ದೆ. ಅಷ್ಟೇ ಅದರ ಮುಂದಕ್ಕೆ ಒಂದೇ ಒಂದು ಮಾತು ಮುಂದುವರೆಯುತ್ತಿರಲಿಲ್ಲ. ಆಕೆಯೂ ಒಂದು ಥ್ಯಾಂಕ್ಸನ್ನೂ ಎಸೆಯದೇ ಸೇಂಟ್ ಫಿಲೋಮಿನಾ ಕಾಲೇಜು ಸ್ಟಾಪಿನಲ್ಲಿ ಇಳಿದು ಹೋಗಿಬಿಡುತ್ತಿದ್ದಳು. ಆಕೆಯ ಹೆಸರು ಗೊತ್ತಿಲ್ಲದೆ ಹಾಗೆ ಸೀಟು ಹಿಡಿದುಕೊಡ್ತಾ ಇದ್ದೆ.
ಇದ್ದಕ್ಕಿದ್ದಂತೆ ಆಕೆ ಬರೋದು ನಿಂತು ಹೋಯಿತು. ಆದ್ರೆ, ಸೋಮವಾರಗಳಂದು ಮಾತ್ರ ಬರತೊಡಗಿದಳು ಆ ಸುಂದರ ಕಂಗಳ ಚೆಲುವೆ. ಆಕೆ ಮತ್ತೊಬ್ಬಳೊಂದಿಗೆ ಮಾತನಾಡುವಾಗ್ಲೆ ಗೊತ್ತಾಗಿದ್ದು ಆಕೆ ಅಲ್ಲೇ ಕಾಲೇಜು ಹಾಸ್ಟೆಲ್ನಲ್ಲೇ ಸೆಟ್ಲ್ ಆಗಿದ್ದಾಳೆ ಅಂತ. ಒಂದು ಸೋಮವಾರ ಆಕೆ ಎಂದಿನಂತೆ ಬಸ್ಸು ಏರಿದಳು, ಆದರೆ ನನ್ನ ಪಕ್ಕ ಸೀಟು ಖಾಲಿ ಇರಲಿಲ್ಲ. ನನಗ್ಯಾಕೋ ಮಾತನಾಡಿಸ್ಲೇ ಬೇಕು ಅಂತ ಅನ್ನಿಸತೊಡಗಿಬಿಟ್ಟಿತ್ತು. ನನ್ನ ಸೀಟು ಪಕ್ಕದಲ್ಲೇ ನಿಂತಿದ್ರೂ ಒಂದೇ ಒಂದು ಮಾತು ಆಡಲಿಲ್ಲ. ಬಟ್ ಆಕೆ ಇಳಿಯುವಾಗ ಅದೇನೆನ್ನಿಸಿತೋ ಏನೋ ಒಂದು ಸ್ಮೈಲ್ ಎಸೆದು ಇಳಿಯತೊಡಗಿದಳು. ನಾನು ಆಕೆಯನ್ನೇ ಹಿಂಬಾಲಿಸಿ ಬಸ್ಸು ಇಳಿದುಬಿಟ್ಟೆ. ಆಕೆ ನಾನು ಇಳಿದದ್ದನ್ನು ನೋಡಲಿಲ್ಲ, ಇತರ ಗೆಳೆತಿಯರೊಂದಿಗೆ ಮಾತನಾಡುತ್ತಾ ಕಾಲೇಜಿನ ಒಳಗೆ ಕಾಲಿಡತೊಡಗಿದಳು. ನಾನು ಅವಳ ಹಿಂದೆಯೇ ಹೆಜ್ಜೆ ಹಾಕಿದ್ದೆ...
ಕಾಲೇಜು ಕಾಂಪೌಂಡ್ ಎಂಟರ್ ಆಗ್ತಾ ಇದ್ದ ಹಾಗೆ ತಲೆ ಮೇಲಿನ ಬುರ್ಖಾ ಸರಿಸತೊಡಗಿದಳು... ನನಗೋ ಫುಲ್ ಎಕ್ಸೈಟ್ಮೆಂಟ್ ಕ್ಷಣ... ಸರಿ ಸುಮಾರು ನಾಲ್ಕೂವರೆ ತಿಂಗಳು ಕಣ್ಣು - ಪಾದಗಳನ್ನ  ನೋಡಿಯೇ ಫಿದಾ ಆಗಿದ್ದ ನನಗೆ ಆಕೆಯ ಮುಖ ದರ್ಶನ ಆಗೋ ಸಮಯ ಅದು. ಆ ಕಪ್ಪನೆಯ ಬಟ್ಟೆ ತಲೆ, ಮುಖವನ್ನು ತೆರವಾದ ಕೂಡಲೇ ನನ್ನ ಮುಖದಲ್ಲಿ ಇದ್ದ ಕುತೂಹಲದ ಸಂತಸ ಮಂಕಾಯಿತು... ಛೇ.... ಎಂಬ ಉದ್ಗಾರ ನನ್ನ ಬಾಯಿಂದ ಬಂತು. ಕಾರಣ, ಅವಳ ಬಿಳುಪೇ ನಾಚುವಷ್ಟು ಕುರೂಪಳಂತೆ ಆಕೆ ಕಂಡಳು. ಉಬ್ಬಿದ ಹಲ್ಲು ಇಡೀ ಸೌಂದರ್ಯವನ್ನೇ ಹಾಳು ಮಾಡಿದ್ದವು. ಚೂಪು ಮುಖಕ್ಕೆ ಆ ವಿಚಿತ್ರ ಉಬ್ಬು ಹಲ್ಲುಗಳು ಅಕ್ವರ್ಡ್  ಅನ್ನಿಸಿ, ಕುರೂಪಿ ಅನ್ನಿಸುತಿತ್ತು.
ಇದಾಗಿ 12 ವರ್ಷಗಳು ಕಳೆದು ಹೋಗಿದೆ. ಯಾಕೋ ನೆನಪಾದಳು. ಸುಮ್ಮನೆ ಗೀಚಿದೆ...!?

Sunday, February 10, 2013

ಆತ್ಮಸಾಕ್ಷಿ

ಆತ್ಮಸಾಕ್ಷಿ ನೆಚ್ಚಿ ದುಡಿವವರು ನಾವು
ಆತ್ಮಸಾಕ್ಷಿ ಬಿಟ್ಟು ಬೇರಾರಿಗೂ ಹೆದರೆನು
ಆದರೇನು ಮಾಡಲಿ, ಈ ಊರು ಬೇಡುವುದು ಬರಿಯ ಸಾಕ್ಷಿಯನು
ಇವರು ನೀಡುವ ನೋವಿಗೆ,
ಗಾಯ ಆಗೋದಿಲ್ಲ, ರಕ್ತ ಸುರಿಯೋದಿಲ್ಲ
ಆದರೂ ನೋವಾಗುತ್ತದೆ ಪ್ರಾಣವೇ ಬಾಯಿಗೆ ಬಂದಂತೆ
ನೊಂದವನಿಗೆ ಮಾತ್ರ ಗೊತ್ತಾಗುತ್ತದೆ ನೋವು
ಇದಕ್ಕೆಲ್ಲಿಂದ ತರಲಿ ಸಾಕ್ಷಿ...!
ಪ್ರಾಮಾಣಿಕತೆಯೇ ಪಾಶವೇ ಈ ಊರಲಿ...!?
ನನ್ನ ಆತ್ಮಸಾಕ್ಷಿಯ ನಾ ಏನ ಮಾಡಲಿ...!

Sunday, December 30, 2012

ಹಳೇ ಇನ್ಬಾಕ್ಸು ತೆರೆದಾಗ....ಹೈಸ್ಕೂಲ್, ಕಾಲೇಜಿನ ಹಳೇ ನೋಟ್ಬುಕ್ಗಳ ಕೊನೆ ಪೇಜುಗಳು ನೋಡಿದಷ್ಟೆ ಖುಷಿ ಪಟ್ಟೆ. ಜಿಮೇಲ್ ಪಾಪ್ಯುಲರ್ ಆದ್ಮೇಲೆ ನನ್ನ ಮೊಟ್ಟ ಮೊದಲ ಇಮೇಲ್ ಐಡಿ ಆದ ಯಾಹೂ ಬಳಸೋದು ಬಿಟ್ಟಿದ್ದೆ. ಅದಕ್ಕೆ ಮತ್ತೊಂದು ಕಾರಣವೂ ಇತ್ತು ಎನ್ನಿ. 2012 ಮುಗ್ಸಿ 2013 ಶುರು ಮಾಡೋ ಹೊತ್ತಿನಲ್ಲಿ, ಯಾಕೋ ಹಳೇ ಐಡಿ ಇದ್ಯಾ ಚೆಕ್ ಮಾಡ್ಬೇಕು ಅನ್ನಿಸ್ತು. ನಾನು ಡೆಲ್ಲಿಯಲ್ಲಿದ್ದಾಗ ಒಮ್ಮೆ ತೆರೆದು ನೋಡಿದ್ದೆ... ಅದನ್ನು ಬಿಟ್ರೆ ಈಗ ತೆರೆದು ನೋಡಿದೆ. ಭಾನುವಾರ ಅಲ್ವಾ ಪುರಸೊತ್ತಾಗಿದ್ದೆ.. ಹಳೇ ಮೇಲು ಚೆಕ್ ಮಾಡ್ತಾ ಮಾಡ್ತಾ ಸ್ವಲ್ಪ ಎಮೋಷನಲ್ ಆದೆ. ಹಳೇ ಫೋಟೋಗಳು. ಹಳೇ ಮಾತುಗಳು. ನೆನಪಿನ ಪುಟ ತಿರುವತೊಡಗಿದವು.

ಈ ಇಮೇಲ್ ಐಡಿ ಕ್ರಿಯೇಟ್ ಮಾಡೋಕೆ ಇವತ್ತು ಡಾಕ್ಟರ್ ಆಗಿರೋ ಗೆಳೆಯ ಮಂಜು ಮತ್ತು ನಾನು ಸುಮಾರು 12 ವರ್ಷದ ಹಿಂದೆ ಮಂಡ್ಯದ ಆರ್ಪಿ ರಸ್ತೆಯಲ್ಲಿದ್ದ ಆಗಿನ ಏಕೈಕ ಸೈಬರ್ ಸೆಂಟರ್ನಲ್ಲಿ ಹರಸಾಹಸ ಪಟ್ಟಿದ್ದೆವು. ಯಾಹೂ ಅನ್ನೋ ಪದದ ಮೋಹಕ್ಕೆ ಒಳಗಾಗಿಯೇ ಅವತ್ತು ಯಾಹೂನಲ್ಲಿ ಐಡಿ ಕ್ರಿಯೇಟ್ ಮಾಡಿದ್ವು. ಅದಕ್ಕೆ ಗೆಳೆಯ ಮಂಜನೇ ಪಾಸ್ವಡರ್್ ಟೈಪಿಸಿದ್ದ... ಯಾಕೋ ನಾನು ಅದನ್ನು ಈವರೆಗೆ ಚೇಂಜ್ ಮಾಡಿಲ್ಲ. ಯಾಹೂ ಇನ್ಬಾಕ್ಸ್ ನೋಡ್ತಾ ನೋಡ್ತಾ ಅನ್ಸಿದ್ದು. `ನನ್ನ ಈಗಿನ ಜಿಮೇಲ್ನಲ್ಲಿ ಚೂರೂ ಎಮೋಷನ್ ಇಲ್ಲ' ಅಂತ. ಧಾರವಾಡ ಬಿಡೋ ತನಕ ಚಟುವಟಿಕೆಯಿಂದ ಇದ್ದ ಯಾಹೂ. ಬೆಂಗಳೂರಿಗೆ ಬಂದ ಮೇಲೆ ಜಿಮೇಲ್ ಬೇಕಿನಿಸಿಬಿಟ್ಟಿತು. ಬೆಂಗಳೂರಿನಂತೆಯೇ ಜಿಮೇಲ್ ಪಕ್ಕಾ ಪ್ರೊಫೆಷನಲ್ ಮತ್ತು ಬಿಸಿನಸ್ ಮೈಡೆಂಡ್ ಆಗಿಯೇ ನನ್ನಲ್ಲಿ ಉಳಿದುಬಿಟ್ಟಿತು.

ಇದೇ ಯಾಹೂವಿನ ಇನ್ಬಾಕ್ಸ್ಗಳಿಗೆ ಒಂದೂ ಮೇಲ್ ಬಂದಿಲ್ಲವಲ್ಲ ಅಂತ ಎಷ್ಟೋ ಬಾರಿ ಮೈಸೂರಿನ ರಮಾವಿಲಾಸ ರಸ್ತೆಯಲ್ಲಿದ್ದ ಗಲ್ಲಿಯಲ್ಲಿನ ಮೋಹನ್ ಸೈಬರ್ ಸೆಂಟರ್ನಲ್ಲಿ ಕುಳಿತು ಹಳಹಳಿಸಿದ್ದು ಇದೆ. ಅದಕ್ಕೆ ಬಂದು ಬಿಡಬಹುದಾದ ಗೆಳತಿಯರ ಬೆಚ್ಚನೆಯ ಮೇಲ್ಗಳಿಗೆ ಕಾತರಿಸಿದ್ದು, ಆ ಮೇಲ್ಗಳನ್ನು ಪದೇ ಪದೇ ಓದಿಕೊಂಡು ಉತ್ತರಿಸಿದ ನೆನಪುಗಳೆಲ್ಲಾ ಕಣ್ಣ ಮುಂದೆ ಸುಳಿದು ಹೋದವು. ಯಾಹೂ ಇನ್ಬಾಕ್ಸ್ನಲ್ಲಿ ಒಂದು ವರ್ಷದಿಂದ ಜಾಹಿರಾತು ಮೇಲ್ಗಳನ್ನು ಹೊರತುಪಡಿಸಿ ನನಗಾಗಿಯೇ ಬಂದಿದ್ದು ಎರಡು ಮೇಲ್ ಮಾತ್ರ. ನನ್ನ ಗೆಳತಿಯೊಬ್ಬಳ ರೆಫರೆನ್ಸ್ ಇರೋ ರೆಸ್ಯುಮ್ ಮಾತ್ರ. ಪಾಪ ಅವಳ ಬಳಿ ನನ್ನ ಹೊಸ ಐಡಿ ಇಲ್ವೇ ಇಲ್ಲ...!

ನನ್ನ ಹಳೇ ಫೋಟೋಗಳನ್ನು ನನ್ನ ಈಗಿನ ಅವಸ್ಥೆಯನ್ನು ನೋಡಿ ನನ್ಗೇ ನಗು ಬಂತು. 2007 ಮಾಚರ್್ 30ರಂದು ಮೈಸೂರಿನಲ್ಲಿ ನನ್ನ ಕೊನೆಯ ದಿನದ ಕೆಲಸ. ಅವತ್ತೇ ಮೈಸೂರಿನ ಜಯಪುರದ ಬಳಿ ಸಮುದಾಯ ಭವನದ ಶಂಕುಸ್ಥಾಪನೆಗಾಗಿ ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡ್ರಿಗೆ ಜೋರು ಜಗಳ. ಲಾಠಿ ಚಾಜರ್್ ಆಗಿ ಮೂರು ಬಸ್ಸುಗಳಿಗೆ ಬೆಂಕಿ ಬಿತ್ತು. ಅವತ್ತು ಸಿದ್ದರಾಮಯ್ಯ ಅವರನ್ನ ಬಂಧಿಸಿ ಮೈಸೂರು ಪೊಲೀಸ್ ಗ್ರೌಂಡಿನಲ್ಲಿ ಬಂಧಿಸಿಡಲಾಯ್ತು. ಅಲ್ಲಿಂದ ಬಿಡುಗಡೆಯಾದ ಮೇಲೆ ಸಿದ್ದರಾಮಯ್ಯ ಮೈಸೂರು ಡಿಸಿ ಕಚೇರಿ ಬಳಿ ಹೋಗಿ ಕುಳಿತುಬಿಟ್ರು. ಇದೆಲ್ಲಾ ಮುಗಿವಾಗ ಬೆಳಗಿನ ಜಾವ 2 ಗಂಟೆ. ಕೊನೆ ಕ್ಷಣದ ಸುದ್ದಿ ಬರೆದು ಮುಗಿಸುವ ತನಕ ಕಾದು ಕುಳಿತಿದ್ದ ಮೈಸೂರು ಕನ್ನಡಪ್ರಭದ ಸಹದ್ಯೋಗಿಗಳು ನನಗೆ ಶಾಲು ಹೊದೆಸಿ, ಹಣ್ಣು ನೀಡಿ ಆತ್ಮೀಯ ಬೀಳ್ಕೊಡುಗೆ ಕೊಟ್ರು. ನನ್ನ ಗುರು ಅಂಶಿ ಪ್ರಸನ್ನಕುಮಾರ್ ಲೀಡರ್ಶಿಪ್ನಲ್ಲಿ ಇಡೀ ಕಚೇರಿಯೇ ನನಗೆ ಶುಭ ಹಾರೈಸಿತು. ಮೈಸೂರಿನಲ್ಲಿ ನನ್ನಪಾಲಿನ ಕೇರಾಫ್ ಆಗಿದ್ದ ಶ್ರೀಕಾಂತ್, ಸದಾ ಬೈದಾಡುತ್ತಾ ಹೊಗಳುತ್ತಿದ್ದ ಇಂಡಿಯನ್ ಎಕ್ಸಪ್ರೆಸ್ನ ಶಿವಕುಮಾರ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಮೈಸೂರಿನ ನೆನಪಿಗೆ. ಮುಂಜಾವಿನಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಅವತ್ತೇ ಮಧ್ಯಾಹ್ನ ಬೆಂಗಳೂರಿನಲ್ಲಿ ಒಂದು ತಿಂಗಳ ತರಬೇತಿಗಾಗಿ ಜಾಯಿನ್ ಆದೆ. ನಂತ್ರ ಹೊರಟದ್ದು ಧಾರವಾಡಕ್ಕೆ. ಧಾರವಾಡ ನನ್ನ ಪ್ರೊಫೆಷನಲ್ ಹಾಗೂ ಪರ್ಸನಲ್ ಆಗಿ ಬೆಳೆಸಿತು ಮತ್ತು ಉಳಿಸಿತು. ಎಲ್ಲ ಚಿತ್ರಗಳು ಕಣ್ಣ ಮುಂದೆ ಸುಳಿದಾಡತೊಡಗಿತು.

ಅವತ್ತು ಮೈಸೂರು ಬಿಡುವಾಗ ಭಯ ಇದ್ದರೂ, ಅದಕ್ಕಿಂತ ಹೆಚ್ಚಿನ ಆತ್ಮವಿಶ್ವಾಸ, ಕಾತರ, ಹೊಸ ಐಡಿಯಾಗಳು, ಗುರಿ ಮತ್ತು ಅವಳು ನನ್ನ ಮುನ್ನಡೆಸತೊಡಗಿದ್ದರು. ನಾನು ಯಾವತ್ತೂ ಬಯಸಿರದ ಜಾಗದಲ್ಲಿ ಇವತ್ತು ನಿಂತಿದ್ದೇನೆ. ಮೈಸೂರಿನಿಂದ ಟ್ರಾನ್ಸ್ಫರ್ ಕೇಳಿದ್ದೀನಿ ಸರ್ ಅಂದಾಗ, ಯಾಕೆ ಅಂತ ಕಾಳಜಿಯಿಂದ ವಿಚಾರಿಸಿಕೊಂಡಿದ್ರು ಗುರುಗಳಾದ ಅಂಶಿಪ್ರಸನ್ನಕುಮಾರ್, ನನ್ನ ಅಲೆಮಾರಿ ಚಟ ಗೊತ್ತಾಗಿ ಬೆನ್ನುತಟ್ಟಿ ಕಳುಹಿಸಿದ್ರು. ಅವರ ಹೆಸರಿಗೆ ಧಕ್ಕೆ ಬರದ ರೀತಿಯಲ್ಲಿ ಈ ಕ್ಷಣದವರೆಗೆ ಕೆಲಸ ಮಾಡಿದ್ದೇನೆ. ಕಂಪನಿ ಯಾವುದೇ ಇರಲಿ ಯಾವಾಗಲೂ ನನಗೆ ಮಾರ್ಗದರ್ಶನ ಮಾಡಿದವರು. ಈ 6 ವರ್ಷದಲ್ಲಿ ಏನೆಲ್ಲ ಪಡೆದೆ, ಏನೆಲ್ಲಾ ಕಳ್ಕೊಂಡೆನೋ...? ಮೈಸೂರು ಬಿಟ್ಟ ಮೇಲೆ ಚೂರು ಚೂರಾಗಿ ನನ್ನ ಹುಟ್ಟೂರು, ಮನೆಯವರ ಜೊತೆ ಸಂಪರ್ಕ ಕಡಿಮೆಯಾಗತೊಡಗಿತು. ಸದ್ಯಕ್ಕೆ ನಾನು ನಮ್ಮೂರಿಗೆ 6 ತಿಂಗಳಿಗೋ - ವರ್ಷಕ್ಕೋ ಹೋಗುವಂತಾಗಿದ್ದೇನೆ. ಆರೋಗ್ಯ ಕೆಟ್ಟು ಕೆರ ಹಿಡಿಯೋವಷ್ಟು ದಪ್ಪಗಾಗಿದ್ದೇನೆ. ಅನೇಕ ಗೆಳೆಯರನ್ನು ಪಡೆದಿದ್ದರೂ, ಬೆಂಗಳೂರಿಗೆ ಬಂದ ಮೇಲೆ ಹಳೇ ಗೆಳೆಯರನ್ನು ಕಳೆದುಕೊಂಡಿದ್ದೇನೆ ಅನ್ನೋ ಭೀತಿ ಇದೆ. ಮುಂದೆ ಏನು? ನಾನೇನು ಆಗ್ಬೇಕು...? ಅನ್ನೋ ಗೊಂದಲದಲ್ಲೇ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಜೊತೆಗೆ ನಾವಿದ್ದೇವೆ ಅಂತ ಬಾರಿ ಬಾರಿ ಹೇಳ್ತಾ ಇದ್ರೂ ಯಾಕೋ ಒಂಟಿ ಒಂಟಿ ಅನ್ನಿಸ್ತದೆ. ಪ್ಲೀಸ್ ಮದ್ವೆ ಆಗು ಸರಿ ಹೋಗುತ್ತೆ ಅಂತ ಮಾತ್ರ ಹಳಸಲು ಸಜೆಷನ್ ಕೊಡ್ಬೇಡಿ. ಅನುಭವಕ್ಕಿಂತ ದೊಡ್ಡ ಮೇಷ್ಟ್ರು ಇಲ್ಲ. ಆದ್ರೆ ಕಾಸ್ಟ್ಲಿ ಮೇಸ್ಟ್ರು ಅವ್ರು. ಟಿವಿ ಚಾನಲ್ಗಳು ಏನೆಲ್ಲಾ ನನ್ನಿಂದ ಕಿತ್ತುಕೊಂಡಿದ್ರೂ ತುಂಬಾ ರಿಚ್ ಅನ್ನಿಸೋ ಅನುಭವ ಕೊಟ್ಟಿದೆ. ಅಪರೂಪಕ್ಕೆ ಬರೆಯೋಕೆ ಕುಳಿತಿರೋದ್ರಿಂದ ಇನ್ನೂ ಬರೀಬೇಕು ಅನ್ನಿಸ್ತಿದೆ. ಬಟ್ ನಿಮ್ಮ ಮೇಲಿನ ಕರುಣೆಯಿಂದ ಇಲ್ಲಿಗೆ ನಿಲ್ಲಿಸ್ತೀನಿ. ಸರಿ ಎಲ್ರಿಗೂ ಹೊಸ ವರ್ಷದ ಶುಭಾಶಯಗಳು.

(ಫೋಟೋ ವಿವರ - ಮೈಸೂರು ಕನ್ನಡಪ್ರಭ ಕಚೇರಿಯಿಂದ ಧಾರವಾಡಕ್ಕೆ ಹೊರಟಾಗ ನನಗೆ ಸಿಕ್ಕ ಬೀಳ್ಕೊಡುಗೆಯ ಫೋಟೋ)Tuesday, September 18, 2012

ಲೈಫು ಅನ್ನೋದು...ಲೈಫು ಅನ್ನೋದು ಕನ್ನಡ ಫಿಲಂ ಅಲ್ಲ ಕಣ್ರೀ... ಲೈಫು ಅಂದ್ರೆ ತಮಿಳು ಸಿನ್ಮಾ. ಇದ್ದಂಗೆ.... ಕನ್ನಡ ಫಿಲಂನಲ್ಲಿ ಹಾಡು ಬರುತ್ತೆ ಅಂದುಕೊಳ್ತಿದ್ದಂಗೆ ಹಾಡು... ಫೈಟು ಬೇಕು ಅನ್ನಿಸ್ತಾ ಇದ್ದಂಗೆ ಫೈಟು ಶುರು ಆಗ್ಬಿಡುತ್ತೆ... ಆದ್ರೆ, ಈ ಕೊಂಗನಾಡಿನ ಮಂದಿ ಇದ್ದಾರಲ್ಲ ತಮಿಳರು ತೆಗಿಯೋ ಸಿನ್ಮಾ ಥೇಟು ಲೈಫು ಇದ್ದಂಗೆ.. ನಮ್ಮ ನಿರೀಕ್ಷೆಯಲ್ಲಾ ಸುಳ್ಳು ಮಾಡ್ಕೊಂಡು ಅನಿರೀಕ್ಷಿತ ಕ್ಲೈಮ್ಯಾಕ್ಸ್ ಬಂದು ಬಿಡುತ್ತೆ...

Friday, June 22, 2012

ಯಾರೂ ಬಾರದಿರಲಿ...


ನನ್ನ ಪಾಡಿಗೆ ನಾನಿದ್ದೆ
ಗಾಯ, ಅದರ ನೋವು, ನೆನಪೂ ರೂಢಿಯಾಗಿತ್ತು
ಇದ್ದಕ್ಕಿದ್ದಂತೆ ಬಂದೋಳು
ಗಾಯದ ಮೇಲೆ ಬರೆ ಎಳೆದಳು...
ಹೊಸ ಗಾಯ ಮಾಡಿದಳು
ಆ ಗಾಯ ಮಾಯಲು ಬಿಡದೇ
ನನ್ನ ಸಾಯಲು ಬಿಡದೇ ಕಾಡುತಿಹಳು
ಈ ನೋವು ರೂಢಿಯಾಗಲು ಇನ್ನೆಷ್ಟು ದಿನ ಬೇಕೋ....?
ಬಟ್... ಮತ್ತೆ ತಮಾಷೆಗೂ ಯಾರೂ ಬಾರದಿರಲಿ...
ಅವರ ಕೆಲಸ ಮುಗಿಸಿ, ಗಾಯ ಮಾಡಿ ಹೋಗಲು...

Sunday, June 17, 2012

ಕರ್ಚಿಫು

ನಾನು ಕರ್ಚಿಫು ಬಳಸುವುದಿಲ್ಲ
ಕರ್ಚಿಫು ನೋಡಿದರೆ ಕನ್ನಡಿ ನೆನಪಾಗುತ್ತೆ
ಕನ್ನಡಿಯಲಿ ನನ್ನ ಕಂಡಂತೆ ಆಗುತ್ತದೆ
ಕರ್ಚಿಫು ನೋಡಿ ಮರಗುತ್ತೇನೆ,
ನನ್ನ ಸ್ಥಿತಿ ನೆನೆದು ನಗುತ್ತೇನೆ
ನಾನು ಕರ್ಚಿಫು..........

 

Tuesday, August 30, 2011

ಗಲ್ಲಿ ಟು ಡೆಲ್ಲಿ.....ದಿಲ್ಲಿಗೆ ಬಂದು ಒಂದು ತಿಂಗಳಾಗಿ ಹೋಯಿತು. ನನಗೆ ಇನ್ನೂ ಜಾಸ್ತಿ ದಿನ ಆಗಿಬಿಟ್ಟಿದೆ ಅಂತ ಫೀಲ್ ಆಗ್ತಿದೆ. ವಿಚಿತ್ರ ಹವಾಗುಣದ ಈ ಊರನ್ನು ಅರ್ಥ ಮಾಡಿಕೊಳ್ಳೋ ಓಡಾಟದಲ್ಲಿ ದಿನ ಕಳಿತಾ ಇದೆ. ಬರ್ತಾ ಇದ್ದ ಹಾಗೆ ಯಡಿಯೂರಪ್ಪ ರಾಜೀನಾಮೆ ಪ್ರಕರಣ, ಅದಾದ ನಂತರ ಅಣ್ಣಾ ಹಜಾರೆ ಆಂದೋಲನಕ್ಕೆ ಸಾಕ್ಷಿಯಾಗೋ ಅವಕಾಶ ಸಿಕ್ಕಿತು.
ಈ ದಿಲ್ಲಿಯಲ್ಲಿ ಓಡಾಡಬೇಕು, ಕೆಲಸ ಮಾಡಬೇಕು ಅನ್ನೋದು ಇಂದು ನಿನ್ನೆಯ ಆಸೆ ಅಲ್ಲ. ಕಾಲೇಜಿನಲ್ಲಿ ಇದ್ದಾಗಲೇ ದೆಹಲಿಯಲ್ಲಿ ಕೆಲಸ ಮಾಡಬೇಕು ಅನ್ನೋ ಕನಸು ಹಂಚಿಕೊಂಡಿದ್ದೆ. ಅದನ್ನು ಅರಿತಿದ್ದ ಈ ಟಿವಿಯಲ್ಲಿದ್ದ ಗೆಳೆಯ ಚೇತನ್ (ಈಗ ಬೆಂಗಳೂರು ಇಂಡಿಯನ್ ಎಕ್ಸಪ್ರೆಸ್ನಲ್ಲಿ ಇದ್ದಾನೆ) 2008ರಲ್ಲಿ ಈಟಿವಿಯಿಂದ ದೆಹಲಿಗೆ ಬರೋ ಅವಕಾಶ ಕೊಡಿಸಿದ್ದ. ಬಟ್ ಅನಿವಾರ್ಯ ಕಾರಣಗಳಿಂದ ನಾನು ಬಂದಿರಲಿಲ್ಲ. ಆದ್ರೆ, ದೆಹಲಿಯ ಆಸೆ ಮಾತ್ರ ಹಾಗೇ ಇತ್ತು. ಅದಕ್ಕೆ ಮತ್ತೆ ಅವಕಾಶ ನೀಡಿದವರು ಉದಯವಾಣಿಯ ರವಿಹೆಗಡೆ.
ದೆಹಲಿಯ ಫು ಟ್ಪಾತ್ ಮೇಲೆ ಒಬ್ಬನೇ ಓಡಾಡುವಾಗ ಏನೇನೋ ನೆನಪಾಗುತ್ತೆ. ವೆಟರನರಿ ಡಾಕ್ಟರೋ, ಬಿಎಸ್ಸಿ ಅಗ್ರಿ ಮಾಡಬೇಕು ಅನ್ನೋ ಆಸೆಯಿಂದ ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡಿದ್ದೆ. ಆದರೆ ಓದುವಾಗ ಗಮನ ಎಲ್ಲೆಲ್ಲೋ ಹರಿಯಿತು. ಟ್ಯೂಷನ್ಗೆ ಹೋಗದೇ ಪಾಸ್ ಮಾಡಬೇಕು ಅನ್ನೋ ನನ್ನ ನಿಧರ್ಾರವನ್ನು ಬದಲಿಸಿದ್ದು ಗೆಳೆಯ ತಪ್ಲೆ. ಟ್ಯೂಷನ್ಗೆ ಹೋಗಲು ಶುರುಮಾಡಿದವನು ಓದುವುದು ಬಿಟ್ಟೆ. .......... ಹಿಂದೆ ತಿರುಗುವುದು ಕಲಿತೆ. ಅದು ನನ್ನ ಭ್ರಮೆ ಅಂತ ಅರಿವಾಗುವಷ್ಟರಲ್ಲಿ ಮನೆಯಲ್ಲಿ ಅಪ್ಪ - ಚಿಕ್ಕಪ್ಪನ ತಲ್ಲಣ. ನಾನು ಭೂಮಿತಾಯಿ ನಂಬಿದವನಂತೆ ಗದ್ದೆ ಕೆಲಸಕ್ಕೆ ಇಳಿದುಬಿಟ್ಟೆ. ಕನ್ನಡ, ಇಂಗ್ಲಿಷು ಮತ್ತು ಬಯೋಲಾಜಿ ಮಾತ್ರ ಪಾಸಾಯಿತು. ಉಳಿದ ಮೂರರಲ್ಲೂ ಫೇಲು. ಅದನ್ನು ನಂಬಲು ಮನೆಯವರಿರಲಿ, ನನ್ನ ಹಿಂದೆ ಮುಂದೆ ಪರೀಕ್ಷೆಗೆ ಕುಳಿತಿದ್ದ ಹುಡುಗ - ಹುಡುಗಿಯರು ನಂಬಲು ರೆಡಿ ಇರಲಿಲ್ಲ. ಕಾರಣ, ಪರೀಕ್ಷೆ ಬರೆಯುವಾಗ ಅಷ್ಟೊಂದು ಅಡಿಷನಲ್ ಶೀಟ್ ತೆಗೆದುಕೊಂಡಿದ್ದೆ....!
ಆಮೇಲೆ ಸಪ್ಲಿಮೆಂಟರಿ ಪರೀಕ್ಷೆಯನ್ನು ಅಪ್ಪ - ಅಮ್ಮನ ಒತ್ತಾಯಕ್ಕೆ ಕಟ್ಟಿದೆ. ಅಮ್ಮನಿಗೋ ನನ್ನ ಮಗ ಗದ್ದೆ ಕೆಲಸಕ್ಕೆ ಇಳಿದು ಫೇಲ್ ಮಾಡಿಕೊಂಡ ಅಂತ ತಪ್ಪು ತಿಳಿದಳು. ನಾನೋ ಮೊದಲ ಪರೀಕ್ಷೆಯಲ್ಲಿ ತೆಗೆದುಕೊಂಡ ಅಡಿಷನಲ್ ಶೀಟ್ನ ಸಾಲ ತೀರಿಸುವವನಂತೆ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಖಾಲಿ ಹಾಳೆ ಕೊಟ್ಟು ಎದ್ದು ಬರುತ್ತಿದ್ದೆ. ಒಂದು ದಿನ ಫಿಸಿಕ್ಸ್ ಲೆಕ್ಚರರ್ ಹೇಮಲತಾ ಮೇಡಂ ಖಾಲಿ ಯಾಕೋ, ಏನು ಬರೆದಿಲ್ಲ ಅಂತ ಹಾಕಿದ ಪ್ರಶ್ನೆಗೆ, `ವ್ಯಾಲ್ಯೂವೇಷನ್ ಮಾಡೋರಿಗೆ ಕಾಣ್ಸುತ್ತೆ ಬಿಡಿ' ಅಂತ ಉಡಾಫೆ, ಉದ್ದಟತನದ ಮಾತನಾಡಿ ಬಂದಿದ್ದೆ. ಕಾಲೇಜಿನಲ್ಲಿ ನನ್ನ ಇಮೇಜು ಹಾಗೆ ಇದ್ದುದ್ದರಿಂದ ಅವರು ತಿರುಗಿ ಮಾತನಾಡಲು ಹೋಗಿರಲಿಲ್ಲ.
ಅಷ್ಟರಲ್ಲಿ ಅಪ್ಪ - ಚಿಕ್ಕಪ್ಪನ ಜಗಳಗಳಿಂದಾಗಿ ಜಮೀನು ಚಿಕ್ಕದಾಯ್ತು. ಜಮೀನು ಮಾಡಿಸಲು ಇನ್ಯಾರಿಗೋ ಕೊಟ್ಟರು. ಫೇಲಾಗಿದ್ದ ನನಗೆ ನಿತ್ಯ ಬೈಗುಳ, ನಿಂದನೆ ಕಾಮನ್ ಆಗಿತ್ತು. ಅಷ್ಟರಲ್ಲಿ ನನ್ನ ಅಮ್ಮನ ಗೋಳು ನೋಡಲಾಗದೇ ನಾನು ಕಂಪ್ಯೂಟರ್ ಕೋಸರ್್ ಒಂದಕ್ಕೆ ಸೇರಿದೆ. ಮಂಡ್ಯದ ಸುಭಾಷ್ನಗರದ ಗೈಸ್ ಗ್ರಾಫಿಕ್ಸ್ ನನ್ನ ಬದುಕು ಬದಲಾಗಲು ಮುನ್ನುಡಿ ಬರೆಯಲಾರಂಭಿಸಿತು. ಅಲ್ಲಿ ಸ್ಕ್ರೀನ್ ಪ್ರಿಂಟಿಂಗ್ ಕಲಿತು ಅಚ್ಚರಿ ಸ್ಕ್ರೀನ್ ಪ್ರಿಂಟರ್ಸ್ ಅನ್ನು ಶುರುಮಾಡಿದ್ದ ನನಗೆ, ಹಾಯ್ ಬೆಂಗಳೂರಿನ ನಿರಂತರ ಓದು ಪತ್ರಕರ್ತನಾಗುವತ್ತ ಪ್ರೇರೇಪಿಸಲಾರಂಭಿಸಿತ್ತು. ಅಷ್ಟರಲ್ಲಿ ಪ್ರೈವೇಟ್ ಆಗಿ ಪಿಯುಸಿ ಆಟ್ಸರ್್ ಎಕ್ಸಾಮ್ ತೆಗೆದುಕೊಂಡು ಪಾಸ್ ಮಾಡಿದೆ. ಅದರಲ್ಲಿ ನನಗೆ ಶೇ. 74 ರಷ್ಟು ಮಾಕ್ಸರ್್ಗಳು. ಅಷ್ಟು ಮಾಕ್ಸರ್್ ತೆಗೆಯಬಲ್ಲೆ ಅಂತ ಕಾನ್ಫಿಡೆನ್ಸ್ ಕೊಟ್ಟಿದ್ದು ಸಾಹಿತ್ಯದ ಓದು. ಕೆಲವರ ಆತ್ಮಕಥೆಗಳು.
ನನಗೆ ಮೈಸೂರಿನ ಮಹಾರಾಜ ಕಾಲೇಜು ಇದೆ, ಪತ್ರಿಕೋದ್ಯಮ ಕೋಸರ್್ ಇದೆ ಅಂತ ತಿಳಿಸಿದ್ದು, ಆಗ ಮಂಡ್ಯದಿಂದ ಟೈಮ್ಸ್ ಆಫ್ ಇಂಡಿಯಾ ಹಾಗೂ ಈಟಿವಿಗೆ ವರದಿ ಮಾಡುತ್ತಿದ್ದ ಟಿ.ಆರ್. ಸತೀಶ್. ಮಹಾರಾಜ ಕಾಲೇಜಿನ ಆ ಕಟ್ಟಡ, ಹುಡುಗರು ಎಲ್ಲಾ ನೋಡಿ ನನಗೆ ಸೀಟು ಸಿಗದು ಎಂದುಕೊಂಡಿದ್ದೆ. ನನ್ನ ಅಪ್ಪನಿಗೋ ನನ್ನನ್ನು ಲಾಯರ್ ಮಾಡಬೇಕು ಅನ್ನೋ ಹಟ. ನನ್ನ ಅಪ್ಪನ ಮಾತಿಗೆ ಬೆಲೆ ಕೊಡದೇ ಮೈಸೂರು ಬಸ್ಸು ಹತ್ತಿದೆ. ಅಲ್ಲಿಗೆ ರೈತನಾಗುವ ನನ್ನ ಆಸೆ ಮುಗಿದು ಹೊಸದೊಂದು ಗುರಿ ಮುಟ್ಟಲು ಓಡಲು ಶುರುಮಾಡಿದೆ......
ಯಾಕೋ ಏನೇನೋ ನೆನಪು. ದಿಲ್ಲಿಯ ಫುಟ್ಪಾತ್ ತುಂಬಾ ನೇರಳೆ ಹಣ್ಣುಗಳ ಆತ್ಮಹತ್ಯೆ ಆಗಿದೆ. ಅವಳಿಗೆ ನೇರಳೆ ಹಣ್ಣು ಅಂದರೆ ತುಂಬಾ ಇಷ್ಟ. ಯಾಕೋ ಈ ನೇರಳೆ ಹಣ್ಣುಗಳಂತೆಯೇ ನನ್ನ ಅವಳ ಕನಸೂ ಆತ್ಮಹತ್ಯೆ ಮಾಡಿಕೊಂಡಿತೇ.......!?.
ಅದೆಲ್ಲಕ್ಕಿಂತ ಹೆಚ್ಚಾಗಿ ನನ್ನ ವಿದ್ಯಾಥರ್ಿ ದಿನಗಳಿಂದಲೇ ಬಹುವಾಗಿ ಇಷ್ಟ ಪಡುತ್ತಿದ್ದ ಹಿರಿಯ ಪತ್ರಕರ್ತ ಡಿ. ಉಮಾಪತಿ ಅವರ ನೇತೃತ್ವದಲ್ಲಿ ನಾನು ಮತ್ತು ನನ್ನಂತೆಯೇ ದೆಹಲಿಗೆ ಹೊಸಬನಾಗಿರುವ ಟಿವಿ 9 ಗೆಳೆಯ ಚಂದ್ರಮೋಹನ್ಗೆ ಆತ್ಮೀಯ ಸ್ವಾಗತ, ಔತಣ ದೊರೆಯಿತು. ಮನೆ ನೆನಪಿಸುವಂತಹ ಸೊಪ್ಪು - ಮುದ್ದೆ ಊಟ ಹಾಕಿಸಿ ಹಿರಿಯರೆಲ್ಲಾ ಒಂದಷ್ಟು ಸಲಹೆ, ಉತ್ತಮವಾದುದೊಂದು ಪುಸ್ತಕ ಕೊಟ್ಟರು. ಕಷ್ಟ ಬಂದಾಗ ನಮ್ಮ ಹೆಗಲು ಇರುತ್ತೆ ಮರೆಯದಿರಿ, ಚನ್ನಾಗಿ ಕೆಲಸ ಮಾಡಿ ಎನ್ನೋ ಅಭಯವನ್ನೂ ನೀಡಿದರು.
ಆ ಔತಣ ಕೂಟದಲ್ಲಿ ದೆಹಲಿಯಲ್ಲಿರೂ ಕನ್ನಡಿಗ ಪತ್ರಕರ್ತರು ಸೇರಿದ್ದರು. ದಿ ವೀಕ್ ಸಂಪಾದಕ ಸಚ್ಚಿ, ಔಟ್ಲುಕ್ನ ಕೃಷ್ಣಪ್ರಸಾದ್, ಡೆಕ್ಕನ್ ಹೆರಾಲ್ಡ್ನ ಅರುಣ್, ಅಜಿತ್ ಅತ್ರಾಡಿ ಟೈಮ್ಸ್ ನೌನ ಅನೂಪ್ ಅವರು ಇಂಗ್ಲಿಷ್ ಪತ್ರಕರ್ತರಾದರು ಕನ್ನಡಿಗರು. ದೆಹಲಿಗೆ ಕನ್ನಡಿಗ ಪತ್ರಕರ್ತರು ಬಂದರೆ ಇವರು ಆತ್ಮೀಯರಾಗುತ್ತಾರೆ. ಕೈಲಾದ ಸಹಾಯ ಮಾಡುತ್ತಾರೆ. ಇನ್ನು ಕನ್ನಡದ ಎಲ್ಲಾ ಪತ್ರಕರ್ತರು ಒಂದೆಡೆ ಸೇರಿದ್ದೆವು ಅನ್ನೋ ಖುಷಿ ಇತ್ತು. ಎಲ್ಲರಿಂದಲೂ ಸಹಕಾರ ದೊರೆಯುತ್ತಿದೆ. ಕೆಲಸದ ಜೊತೆಗೆ, ಹೊಸದೇನೋ ಕಲಿಯುವ ಹುಮ್ಮಸ್ಸು. ಜೊತೆಗೆ, ಯಾಕೋ ನಾನು ಅಷ್ಟು ಇಷ್ಟ ಪಡದ ಬೆಂಗಳೂರು, ಅನಿವಾರ್ಯವಾಗಿ ಸೇರಿದ್ದ ಟಿವಿ ಕೆಲಸವೂ ಪದೇ ಪದೇ ನೆನಪಾಗುತ್ತೆ.
ನನ್ನ ಗೆಳೆಯರು, ಅಪ್ಪ - ಅಮ್ಮ ಯಾರೂ ನಾನು ಪತ್ರಕರ್ತನಾಗುವೆ ಎಂದು ಊಹಿಸಿರಲಿಲ್ಲ. ನನ್ನೊಳಗಿನ ಪತ್ರಕರ್ತನ ಮೊದಲು ಗುರುತಿಸಿದ್ದು ಎಚ್.ಆರ್. ರಂಗನಾಥ್ ಮತ್ತು ಕೂಡ್ಲಿ ಗುರುರಾಜ್. ಅವರಿಬ್ಬರು ಸೇರಿ ಮೈಸೂರಲ್ಲಿ ಅತ್ಯುತ್ತಮ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಳಿ ಕಳುಹಿಸಿದರು. ಅವರು ನನ್ನ ತಿದ್ದಿತೀಡಿ ಪತ್ರಕರ್ತನಾಗಿಸಿದರು. ಆನಂತರ ರಂಗನಾಥ್ ಮತ್ತು ರವಿಹೆಗಡೆ ಉತ್ತಮ ಅವಕಾಶ ನೀಡುತ್ತಾ ಬಂದರು. ಇದಕ್ಕೆ ನೆರವು ನೀಡಿದ್ದು ನೂರಾರು ಕೈಗಳು. ಇಷ್ಟು ದಿನ ಸಿಕ್ಕಂತೆಯೇ ಇಲ್ಲೂ ನೆರವು ಸಿಗೋ ಲಕ್ಷಣ ಗೋಚರಿಸಿದೆ. ನಾನು ಅದನ್ನು ಬಳಸಿಕೊಳ್ಳುತ್ತೇನಾ? ಬೆಳೆಯುತ್ತೇನಾ? ಗೊತ್ತಿಲ್ಲ. ಮಂಡ್ಯ ತಾಲೂಕು ಹನಕೆರೆ ಗಲ್ಲಿಯಿಂದ ಹೊರಟವನು ದಿಲ್ಲಿಗೆ ಬಂದಿದ್ದೇನೆ. ಯಾಕೋ ನೆನಪುಗಳಿಂದ ತಪ್ಪಿಸಿಕೊಳ್ಳೋದು? ನೆರವು ನೀಡಿದವರನ್ನ ಮರೆಯೋದು ಕಷ್ಟ... ಕಷ್ಟ... ಕಷ್ಟ....

(ಅಣ್ಣಾ ಹಜಾರೆ ಉಪವಾಸ ಮುಗಿಸಿದ ನಂತರ ಜನಶ್ರೀ ಗೆಳೆಯ ರಾಘವಶಮರ್ಾ, ನವೀನ್ ಮತ್ತು ಸಂಡೆ ಇಂಡಿಯನ್ನ ಡಿಸೈನರ್ ಪ್ರಕಾಶ್ ಶೆಟ್ಟಿ ಜೊತೆ ಪೋಸ್ ಕೊಟ್ಟೆವು ಹೀಗೆ...)