Saturday, April 25, 2009

ಸಕ್ಕರೆ ನಾಡಿನ ಕಹಿ ಸತ್ಯಗಳು



‘ಚಿಕ್ಕೋಡಿ’ ಒಂದು ಕಾಲಕ್ಕೆ ರಾಷ್ಟ್ರರಾಜಕಾರಣದಲ್ಲಿ ಹೆಸರು ವಾಸಿ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರವು ಸಮಸ್ಯೆಗಳಿಂದಲೇ ಹೆಚ್ಚು ಸುದ್ದಿಗೆ ಬರುತ್ತಿವೆ. ಸಮಸ್ಯೆಗಳು ಮಾತ್ರವಲ್ಲ ಈ ಕ್ಷೇತ್ರದಲ್ಲಿ ಸಮೃದ್ಧಿಯೂ ಇರುವುದು ವಿಶೇಷ. ಇಲ್ಲಿ ಬೇವೂ ಇದೆ, ಬೆಲ್ಲವೂ ಇದೆ.
ಕ್ಷೇತ್ರದ ಭೌಗೋಳಿಕ ವ್ಯಾಪ್ತಿಯ ವಿಸ್ತಾರದಷ್ಟೇ ವೈಚಿತ್ರದಂತೆಯೇ ಇಲ್ಲಿನ ಸಮಸ್ಯೆಗಳು ಒಂದು ವಿಧಾನಸಭಾ ಕ್ಷೇತ್ರಕ್ಕಿಂತ ಒಂದು ವಿಚಿತ್ರವಾಗಿದೆ. ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ವ್ಯತಿರಿಕ್ತ ಎನ್ನುವಂತಹ ವಾತಾವರಣ ಇದೆ. ಅಥಣಿ, ರಾಯಬಾಗ, ಕಾಗವಾಡ, ಕುಡಚಿ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ಯಮಕನಮರಡಿ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ನೆರೆಯೂ ಉಂಟು, ಬರವೂ ಉಂಟು. ಬರ ಮತ್ತು ನೆರೆಯ ವಿಷಯದಲ್ಲಿ ಇದೊಂದು ೫೦:೫೦ ಕ್ಷೇತ್ರ.
ಸಪ್ತನದಿಗಳಿವೆ..,
- ಸಮೃದ್ಧಿ ತಂದುಕೊಡಬೇಕಾದ ಕೃಷ್ಣಾ ನದಿ ಸಂಕಷ್ಟ ಹಂಚತೊಡಗಿದೆ. ೨೦೦೫ರಿಂದ ಕೃಷ್ಣಾ ನದಿ ಪ್ರವಾಹ ನದಿ ದಂಡೆಯ ಹಳ್ಳಿಗಳನ್ನು ಹಣಿದು ಹಾಕಿದೆ. ಚಿಕ್ಕೋಡಿ ತಾಲೂಕು ಒಂದರಲ್ಲೇ ವೇದಗಂಗಾ, ದೂದಗಂಗಾ, ಚಕಂತ್ರಾ, ಪಂಚಗಂಗಾ ಹಾಗೂ ಕೃಷ್ಣಾ ಸೇರಿದಂತೆ ೫ ನದಿಗಳು ಹರಿಯುತ್ತವೆ. ಆದರೆ, ನಾಲ್ಕು ಸಣ್ಣ ನದಿಗಳೂ ಚಿಕ್ಕೋಡಿ ತಾಲೂಕಿನ ವಿವಿಧೆಡೆ ಕೃಷ್ಣಾ ಜೊತೆ ಸೇರಿಕೊಂಡು ಕೃಷ್ಣಾರ್ಪಣ ಆಗುತ್ತದೆ. ಇನ್ನು ಯಮಕನಮರಡಿ ಕ್ಷೇತ್ರದಲ್ಲಿ ಘಟಪ್ರಭಾದಲ್ಲಿ ಹಿರಣ್ಯಕೇಶಿ ನದಿ ವಿಲೀನಗೊಂಡು ಸಾಗುತ್ತದೆ. ಇದು ಸಪ್ತನದಿಗಳ ಕ್ಷೇತ್ರ.
ಬರ ಥರ..ಥರ..
- ಕುಡಚಿ, ಚಿಕ್ಕೋಡಿ ಹಾಗೂ ರಾಯಬಾಗ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವಲ್ಪ ನೀರಾವರಿ ಪ್ರದೇಶ ಹೆಚ್ಚು. ಆದರೆ, ಅಲ್ಲೂ ಬರಗಾಲ ಎದುರಿಸುವ ಪ್ರದೇಶ ಇದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಉತ್ತರ ದಿಕ್ಕಿಗೆ ಇರುವ ಎಲ್ಲಾ ಹಳ್ಳಿಗಳು ಬರ ಎದುರಿಸುತ್ತಿವೆ. ಕುಡಿಯುವ ನೀರಿನ ಸಮಸ್ಯೆ ಇದೆ. ಎಲ್ಲಕ್ಕಿಂತ ಹೆಚ್ಚು ಬರಗಾಲ ಎದುರಿಸುವುದು ಅಥಣಿ ವಿಧಾನಸಭಾ ಕ್ಷೇತ್ರದ ಹಳ್ಳಿಗಳು.
- ೧೯೭೨ ರಿಂದ ಅಥಣಿ ಪ್ರದೇಶದಲ್ಲಿ ಅತೀ ಕಡಿಮೆ ಮಳೆಯಾಗುತ್ತದೆ. ಇಲ್ಲಿನ ಎಲ್ಲಾ ಜನರು ವರ್ಷದಲ್ಲಿ ಇಲ್ಲೇ ವಾಸಿಸುವುದು ಹೆಚ್ಚೆಂದರೇ ೬ ತಿಂಗಳು ಮಾತ್ರ. ನಂತರ ಕೆಲಸ ಅರಸಿ ಗುಳೇ ಹೋಗುತ್ತಾರೆ. ಈ ಕ್ಷೇತ್ರದ ಹೆಚ್ಚು ಮಂದಿ ಉದ್ಯೋಗಕ್ಕಾಗಿ ಮಹಾರಾಷ್ಟ್ರವನ್ನೇ ನೆಚ್ಚಿಕೊಂಡಿದ್ದಾರೆ. ನೀರಾವರಿ ಪ್ರದೇಶ ಇದ್ದರೂ ರಾಯಬಾಗ, ಕಾಗವಾಡ ಕ್ಷೇತ್ರಗಳಲ್ಲಿ ಜವಳು -ಸವಳು ಭೂಮಿ, ನೀರಿನ ಸಮಸ್ಯೆ ಇದೆ. ಅಥಣಿ ಕ್ಷೇತ್ರದ ೨೨ ಹಳ್ಳಿಗಳಲ್ಲಿ ಫ್ಲೋರೈಡ್ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.
ಗಡಿ -ಬಿಡಿ..,
- ಚಿಕ್ಕೋಡಿ ಲೋಕಸಭಾ ಕ್ಷೇತ್ರದ ೮ ವಿಧಾನಸಭಾ ಕ್ಷೇತ್ರಗಳ ಪೈಕಿ ರಾಯಬಾಗ ಮತ್ತು ಕುಡಚಿ ವಿಧಾನಸಭಾ ಕ್ಷೇತ್ರಗಳು ಮಾತ್ರ ಮಹಾರಾಷ್ಟ್ರದ ಜೊತೆ ಗಡಿ ಹಂಚಿಕೊಂಡಿಲ್ಲ. ಆದರೂ ಈ ಕ್ಷೇತ್ರಗಳಲ್ಲೂ ಮರಾಠಿಯ ಪ್ರಭಾವವಿದೆ. ನಿಪ್ಪಾಣಿ ಹಾಗೂ ಅಥಣಿ ಕ್ಷೇತ್ರದ ಅತಿ ಹೆಚ್ಚು ಪ್ರದೇಶ ಮಹಾರಾಷ್ಟ್ರದ ಜೊತೆ ಗಡಿ ಹಂಚಿಕೊಂಡಿವೆ. ನಿಪ್ಪಾಣಿಯಲ್ಲಂತೂ ಮರಾಠಿಯದ್ದೇ ಪ್ರಾಬಲ್ಯ. ಹೀಗಾಗಿ ಮತ ಕೇಳುವವರು ಇಲ್ಲಿ ಮರಾಠಿಯ ಮೊರೆ ಹೋಗುವುದು ಸಾಮಾನ್ಯ.
ಅತಿ ದೊಡ್ಡ ಗ್ರಾಪಂ..
- ರಾಯಬಾಗ ವಿಧಾನಸಭಾ ಕ್ಷೇತ್ರದ ಹಾರೋಗೇರಿ ಗ್ರಾಮ ಪಂಚಾಯ್ತಿ ರಾಜ್ಯದಲ್ಲೇ ಅತಿ ದೊಡ್ಡ ಗ್ರಾಪಂ ಎಂಬ ಖ್ಯಾತಿ ಪಡೆದಿದೆ. ಹಾರೋಗೇರಿ ಗ್ರಾಮ ಪಂಚಾಯ್ತಿಯಲ್ಲಿ ೭೨ ಸದಸ್ಯರಿದ್ದಾರೆ. ಸುಮಾರು ೨೫ ಸಾವಿರ ಮತದಾರರಿದ್ದಾರೆ. ಒಂದು ಪುರಸಭೆ ಆಗುವ ಲಕ್ಷಣ ಇದ್ದರೂ, ಗ್ರಾಮ ಪಂಚಾಯ್ತಿಯಾಗಿಯೇ ಅದು ಉಳಿದಿದೆ.
೧೫ ಸಕ್ಕರೆ ಕಾರ್ಖಾನೆ..,
- ಚಿಕ್ಕೋಡಿ ಲೋಕಸಭಾ ಕ್ಷೇತ್ರ ಒಂದರಲ್ಲೇ ಒಟ್ಟು ೧೫ ಸಕ್ಕರೆ ಕಾರ್ಖಾನೆಗಳಿವೆ. ಈ ಪೈಕಿ ೯ ಕಾರ್ಖಾನೆಗಳು ಚಾಲ್ತಿಯಲ್ಲಿದ್ದರೆ, ೫ ಕಾರ್ಖಾನೆಗಳು ನಿರ್ಮಾಣದ ಹಂತದಲ್ಲಿವೆ. ೧ ಕಾರ್ಖಾನೆ ರೋಗಗ್ರಸ್ಥವಾಗಿ ಬಂದ್ ಆಗಿದೆ. ಇವುಗಳಲ್ಲಿ ನಾಲ್ಕು ಸಹಕಾರಿ ಸಕ್ಕರೆ ಕಾರ್ಖಾನೆಗಳಾಗಿವೆ. ಅಥಣಿ ವಿಧಾನಸಭಾ ಕ್ಷೇತ್ರ ಒಂದೇ ೬ ಸಕ್ಕರೆ ಕಾರ್ಖಾನೆಗಳಿಗೆ ನೆಲ ನೀಡಿದೆ. ಇಷ್ಟೆಲ್ಲಾ ಕಾರ್ಖಾನೆಗಳಿದ್ದರೂ ಇಲ್ಲಿನ ಬಹುಪಾಲು ಕಬ್ಬು ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗೆ ಹೋಗುತ್ತವೆ.
ವ್ಯಕ್ತಿ ರಾಜಕಾರಣ..,
ಇಷ್ಟೆಲ್ಲಾ ವಿಚಿತ್ರ ವೈರುಧ್ಯ, ಸಮಸ್ಯೆಗಳಿರುವ ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ, ಪ್ರಣಾಳಿಕೆ, ಕಾರ್ಯಕ್ರಮಗಳಿಗಿಂತ ವ್ಯಕ್ತಿಗತ ರಾಜಕಾರಣಕ್ಕೇ ಹೆಚ್ಚು ಬೆಲೆ. ವ್ಯಕ್ತಿಗತ ವರ್ಚಸ್ಸೇ ಇಲ್ಲಿನ ಚುನಾವಣೆ ವಸ್ತು. ಇಷ್ಟು ದಿನ ಮೀಸಲು ಕ್ಷೇತ್ರವಾಗಿದ್ದ ಇದು ಸಾಮಾನ್ಯ ಕ್ಷೇತ್ರವಾಗಿ ಹೊಸದಾಗಿ ಜಾತಿ ಲೆಕ್ಕಾಚಾರಕ್ಕೂ ಎಡೆ ಮಾಡಿದೆ.

Friday, April 17, 2009

ಚಿಕ್ಕೋಡಿ ಎಂಬ ಬೇವು ಬೆಲ್ಲದ ನಾಡಿನಲ್ಲಿ..,


‘ಧಾರವಾಡ’ ಉತ್ತರ ಕರ್ನಾಟಕದಲ್ಲೇ ಇದೆ. ‘ಚಿಕ್ಕೋಡಿ’ ಉತ್ತರ ಕರ್ನಾಟಕದಲ್ಲೇ ಇದೆ.ಆದರೆ, ಧಾರವಾಡಕ್ಕೂ ಚಿಕ್ಕೋಡಿಗೂ ಸಾಮಾನ್ಯ ಎನ್ನುವಂತಹ ಒಂದೇ ಒಂದು ಅಂಶವಿಲ್ಲ.ಅಷ್ಟೇ ಏಕೆ ಬೆಳಗಾವಿ ಜಿಲ್ಲೆಯ ಒಡಲಲ್ಲೇ ಇರುವ ಚಿಕ್ಕೋಡಿಗೆ ಬೆಳಗಾವಿ ಜೊತೆಗೂಹೋಲಿಸಿ ಮಾತನಾಡುವುದು ಸಾಧ್ಯವಿಲ್ಲ. ಅಬ್ಬಬ್ಬಾ ಸಮೃದ್ಧ ನಾಡು ಎಂದುಕೊಳ್ಳುತ್ತಾ ಸಾಗುತ್ತಿದ್ದಂತೆ ನಿಮಗೆ ಬರಗಾಲ ಪ್ರದೇಶಎದುರಾಗುತ್ತದೆ. ಇಲ್ಲಿನ ಬಿಸಿಲು, ಸಮುದ್ರದಂತೆ ಕೊನೆಯಿಲ್ಲದೆ ಚಾಚಿಕೊಂಡಿರುವಬರಭೂಮಿ ಕೆಲಕಾಲ ಆತಂಕ ಮೂಡಿಸುತ್ತದೆ.
ಮತ್ತೆ ಒಂದಿಷ್ಟು ದೂರ ಸಾಗುತ್ತಿದ್ದಂತೆಕೃಷ್ಣಾ ನದಿ ಗಕ್ಕನೆ ಎದುರಾಗುತ್ತದೆ. ಇದು ಥೇಟು ಪುರುಷ ಗಾಂಭೀರ್ಯದಿಂದಲೇಹರಿಯುತ್ತದೆ, ಹಣಿಯುತ್ತದೆ. ಈ ನದಿಗೆ ಕಾವೇರಿ, ಮಲಪ್ರಭಾ, ಘಟಪ್ರಭಾ ನದಿಗಳಂತೆ ನಲಿಯುತ್ತಾ ಸಾಗುವುದು ಒಗ್ಗುವುದೇಇಲ್ಲ ಎಂಬಷ್ಟು ಗಾಂಭೀರ್ಯದಿಂದಲೇ ಹರಿಯುತ್ತದೆ. ತೀರಾ ಕೆಲವೇ ಕೆಲವು ಕಡೆ ಸಾಗುವ ದೃಶ್ಯ ಕಾಣುತ್ತದೆ. ಬರಗಾಲವನ್ನೇ ಹಾಸಿ, ಹೊದ್ದು, ಉಂಡು ಬದುಕುವಪ್ರದೇಶವಿದೆ. ಇಷ್ಟೆಲ್ಲದರ ಜೊತೆಗೆ ದೇವದಾಸಿ, ಗಾಳಿ ಬಿಡಿಸುವುದು ಮತ್ತಿತ್ಯಾದಿ ಕಂದಾಚಾರಗಳು ಇದರ ಒಡಲಲ್ಲಿವೆ.
ಇದೊಂದೇ ಲೋಕಸಭಾ ಕ್ಷೇತ್ರದಲ್ಲಿ ೧೫ ಸಕ್ಕರೆ ಕಾರ್ಖಾನೆಗಳಿವೆ. ಸಕ್ಕರೆ ಕಾರ್ಖಾನೆಗಳಸಮೃದ್ಧಿಯಷ್ಟೇ ರೈತರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ವ್ಯಾಪಕ ತಂತ್ರ,ಕುತಂತ್ರಗಾರಿಕೆಗಳು ಇವೆ. ಹೊಲದಲ್ಲಿ ನಡು ಬಗ್ಗಿಸಿ ದುಡಿಯುವ ರೈತ ಮಾತ್ರಚುನಾವಣೆಯಲ್ಲಿ ಉತ್ತಮನನ್ನು ಆಯ್ಕೆ ಮಾಡುವ ಮೂಲಕ ಸಮಸ್ಯೆಗೆ ಪರಿಹಾರಕಂಡುಕೊಳ್ಳಬಹುದು. ಆದರೆ, ಅಂತುಹುದೆಲ್ಲವನ್ನೂ ಇಡೀ ಭಾರತದಲ್ಲೇ ಕಷ್ಟವಾಗಿರುವುದರಿಂದಇಲ್ಲಿ ನಿರೀಕ್ಷಿಸುವುದು ತಪ್ಪಾಗುತ್ತದೆ. ಅಂತಹುದೊಂದು ಐಡಿಯಾವೇ ಇದ್ದಂತಿಲ್ಲಇವರಿಗೆ.
ಬಡತನ, ಅನಕ್ಷರತೆಯು ಸಲೀಸಾಗಿ ಪಾಳೇಗಾರಿಕೆಗೆ, ಹಣಕ್ಕೆ ಬೆದರಿ ಶರಣಾದಂತೆಯೇಇಲ್ಲಿನ ಕತ್ತಿ ಸಾಹುಕಾರ ಹಾಗೂ ಹುಕ್ಕೇರಿ ಸಾಹುಕಾರರಿಗೆ ಜನ ತಲೆಬಾಗಿದ್ದಾರೆ.ಮರಾಠಿಯ ಪ್ರಾಬಲ್ಯ, ಗಡಿ ಸಮಸ್ಯೆ, ಜಲ ಸಮಸ್ಯೆ, ಸಕ್ಕರೆಯ ಕಣಜದಲ್ಲಿ ಓಡಾಡಿ ಅನುಭವಹೆಚ್ಚಿಸಿಕೊಳ್ಳಲು ನಮ್ಮ ಸಂಪಾದಕರು ಅವಕಾಶ ಮಾಡಿಕೊಟ್ಟಿದ್ದಾರೆ. ಕಳೆದ ೧೪ ದಿನಗಳಿಂದನನ್ನ ಅನುಭವದ ಬುತ್ತಿ ತುಂಬಿದೆ. ಇನ್ನು ಒಂದು ವಾರ ಇಲ್ಲೇ ಓಡಾಡುತ್ತೇನೆ. ಎಲ್ಲಾಅನುಭವಗಳನ್ನು ಹೇಳಿಕೊಳ್ಳುವುದು ಕಷ್ಟ. ಹೇಳಿಕೊಳ್ಳಲೇಬೇಕು ಎಂದು ಕಾಡುವುದನ್ನುಬರೆಯುವ ಯತ್ನ ಮಾಡುತ್ತೇನೆ. ಅಥಣಿ ಎಂಬ ಬರಗಾಲದ ಊರಿನಲ್ಲಿ ಭಗೀರಥನಂತೆಶ್ರಮಿಸುತ್ತಿರುವ ಬಿ.ಎಲ್. ಪಾಟೀಲರು ಬಗ್ಗೆ ಹೇಳಲೇಬೇಕು. ಎಲ್ಲಾ ಸರಿ ನಿಮ್ಮೂರಲ್ಲಿಎಲೆಕ್ಷನ್ ಕಾವು ಹೇಗಿದೆ...?