Monday, June 10, 2013

ಬಟ್ಟಲು ಕಣ್ಣು, ಸುಂದರ ಪಾದಗಳು ಹಾಗೂ ಬುರ್ಖಾ ...!


ಮಂಡ್ಯದಿಂದ ಹೊರಟ ಕೆಂಪು ಬಸ್ಸು ಉಸ್ಸೆಂದು ನಿಲ್ಲುತ್ತಾ ಇದ್ದದ್ದು ಶ್ರೀರಂಗಪಟ್ಟಣದ ಬಸ್ ನಿಲ್ದಾಣದಲ್ಲೇ... ವೀರ ಸೇನಾನಿ ಮೈಸೂರು ಹುಲಿ ಟಿಪ್ಪುವಿನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣ ಇವತ್ತಿಗೂ ಅನೇಕ ನಿಗೂಢಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಪ್ರತಿ ಹಳೇ ರಸ್ತೆಯು ಹೊಸ ಇತಿಹಾಸವನ್ನೇ ಹೇಳೋ ಶ್ರೀರಂಗಪಟ್ಟಣದಲ್ಲಿ ನಿಗೂಢ ತುಂಬಿಕೊಂಡ ಸುಂದರಿಯರಿಗೂ ಕೊರತೆ ಇರಲಿಲ್ಲ. ನನಗೂ ಆಗ ಅಂತದ್ದೇ ವಯಸ್ಸು. ಫೇಲಾಗಿದ್ದ ಪಿಯುಸಿಯನ್ನು ಹಾಗೂ - ಹೀಗೂ ಪಾಸು ಮಾಡಿಕೊಂಡು ಮೈಸೂರಿನ ಮಹಾರಾಜ ಕಾಲೇಜಲ್ಲಿ ಬಿಎ ಸೀಟು ಗಿಟ್ಟಿಸಿದ್ದೆ. ಎಲ್ಎಲ್ಬಿ ಮಾಡು ಎನ್ನೋ ಅಪ್ಪನ ಆದೇಶವನ್ನು ಧಿಕ್ಕರಿಸಿ ಜರ್ನಲಿಸಂ ಬಿಎ ಸೇರಿಕೊಂಡು, ಹಾಸ್ಟೆಲ್ನಲ್ಲಿ ಇರಲಾಗದೇ ನಿತ್ಯ ಊರಿಂದಲೇ ಮೈಸೂರಿಗೆ ಓಡಾಡುತ್ತಿದ್ದ ದಿನಗಳವು.
ಶ್ರೀರಂಗಪಟ್ಟಣ ಬಸ್ ನಿಲ್ದಾಣದಲ್ಲಿ ನಿತ್ಯ 8 ಗಂಟೆಯ ಹೊತ್ತಿಗೆ ಕಪ್ಪನೆಯ ಬುರ್ಖಾ ಧರಿಸಿ, ಕಣ್ಣುಗಳನ್ನು ಮಾತ್ರ ಸಾರ್ವಜನಿಕ ದರ್ಶನ - ಪ್ರದರ್ಶನಕ್ಕಿರಿಸಿ ಒಬ್ಬಳು ಬರುತ್ತಿದ್ದಳು. ಅವಳ ಕಣ್ಣು ಸುತ್ತಲ ಆ ಬಿಳುಪು ಚರ್ಮ, ಸುಂದರ ಪಾದಗಳನ್ನ ನೋಡಿದ್ರೆ ಸಾಕು ಅಬ್ಬಾ ಈಕೆ ಅದೆಷ್ಟು ಸುಂದರಿ ಇರಬೇಕು ಅನ್ನಿಸ್ತಿತ್ತು. ಒಂದು ದಿನ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿಯೂ ಬಿಟ್ಟಳು ಆ ಕಣ್ಣು ಮತ್ತು ಮೊಳಕಾಲಿನ ದರ್ಶನ ಮಾತ್ರ ನೀಡುತ್ತಿದ್ದ ಬುರ್ಖಾ  ಸುಂದರಿ.
ಎಲ್ಲೋ ಒಂದು ಹುಡ್ಗಿ ನನ್ಗೂ ಸಿಗಬಹುದು. ನನ್ಗೂ ಲವ್ ಆಗಬಹುದು ಎಂದು ತವಕಿಸುತ್ತಿದ್ದ ಆ ದಿನಗಳಲ್ಲಿ ಆಕೆಯೇ ನನ್ನ ಗೆಳಯಾಗಿ, ಲವ್ವರ್ ಆದಾಳೇನೋ ಅಂತ ಯೋಚಿಸಿದ್ದು ಇತ್ತು. ನಾನೋ ಮಂಡ್ಯದಲ್ಲಿ ಬಸ್ಸು ಹತ್ತಿದ ಮೇಲೆ ಸಾಧ್ಯವಾದಷ್ಟು ಪಕ್ಕದ ಸೀಟು ಖಾಲಿ ಇರುವಂತೆ ನೋಡಿಕೊಳ್ಳುತ್ತಿದೆ. ಶ್ರೀರಂಗಪಟ್ಟಣದಲ್ಲಿ ಆಕೆ ಕಂಡ್ರೆ ಹಾಗೆ ಸೀಟನ್ನು ಅವಳು ಬರೋ ತನಕ ಖಾಲಿ ಇಟ್ಟು ಕೂರಿಸಿಕೊಳ್ತಾ ಇದ್ದೆ. ಅಷ್ಟೇ ಅದರ ಮುಂದಕ್ಕೆ ಒಂದೇ ಒಂದು ಮಾತು ಮುಂದುವರೆಯುತ್ತಿರಲಿಲ್ಲ. ಆಕೆಯೂ ಒಂದು ಥ್ಯಾಂಕ್ಸನ್ನೂ ಎಸೆಯದೇ ಸೇಂಟ್ ಫಿಲೋಮಿನಾ ಕಾಲೇಜು ಸ್ಟಾಪಿನಲ್ಲಿ ಇಳಿದು ಹೋಗಿಬಿಡುತ್ತಿದ್ದಳು. ಆಕೆಯ ಹೆಸರು ಗೊತ್ತಿಲ್ಲದೆ ಹಾಗೆ ಸೀಟು ಹಿಡಿದುಕೊಡ್ತಾ ಇದ್ದೆ.
ಇದ್ದಕ್ಕಿದ್ದಂತೆ ಆಕೆ ಬರೋದು ನಿಂತು ಹೋಯಿತು. ಆದ್ರೆ, ಸೋಮವಾರಗಳಂದು ಮಾತ್ರ ಬರತೊಡಗಿದಳು ಆ ಸುಂದರ ಕಂಗಳ ಚೆಲುವೆ. ಆಕೆ ಮತ್ತೊಬ್ಬಳೊಂದಿಗೆ ಮಾತನಾಡುವಾಗ್ಲೆ ಗೊತ್ತಾಗಿದ್ದು ಆಕೆ ಅಲ್ಲೇ ಕಾಲೇಜು ಹಾಸ್ಟೆಲ್ನಲ್ಲೇ ಸೆಟ್ಲ್ ಆಗಿದ್ದಾಳೆ ಅಂತ. ಒಂದು ಸೋಮವಾರ ಆಕೆ ಎಂದಿನಂತೆ ಬಸ್ಸು ಏರಿದಳು, ಆದರೆ ನನ್ನ ಪಕ್ಕ ಸೀಟು ಖಾಲಿ ಇರಲಿಲ್ಲ. ನನಗ್ಯಾಕೋ ಮಾತನಾಡಿಸ್ಲೇ ಬೇಕು ಅಂತ ಅನ್ನಿಸತೊಡಗಿಬಿಟ್ಟಿತ್ತು. ನನ್ನ ಸೀಟು ಪಕ್ಕದಲ್ಲೇ ನಿಂತಿದ್ರೂ ಒಂದೇ ಒಂದು ಮಾತು ಆಡಲಿಲ್ಲ. ಬಟ್ ಆಕೆ ಇಳಿಯುವಾಗ ಅದೇನೆನ್ನಿಸಿತೋ ಏನೋ ಒಂದು ಸ್ಮೈಲ್ ಎಸೆದು ಇಳಿಯತೊಡಗಿದಳು. ನಾನು ಆಕೆಯನ್ನೇ ಹಿಂಬಾಲಿಸಿ ಬಸ್ಸು ಇಳಿದುಬಿಟ್ಟೆ. ಆಕೆ ನಾನು ಇಳಿದದ್ದನ್ನು ನೋಡಲಿಲ್ಲ, ಇತರ ಗೆಳೆತಿಯರೊಂದಿಗೆ ಮಾತನಾಡುತ್ತಾ ಕಾಲೇಜಿನ ಒಳಗೆ ಕಾಲಿಡತೊಡಗಿದಳು. ನಾನು ಅವಳ ಹಿಂದೆಯೇ ಹೆಜ್ಜೆ ಹಾಕಿದ್ದೆ...
ಕಾಲೇಜು ಕಾಂಪೌಂಡ್ ಎಂಟರ್ ಆಗ್ತಾ ಇದ್ದ ಹಾಗೆ ತಲೆ ಮೇಲಿನ ಬುರ್ಖಾ ಸರಿಸತೊಡಗಿದಳು... ನನಗೋ ಫುಲ್ ಎಕ್ಸೈಟ್ಮೆಂಟ್ ಕ್ಷಣ... ಸರಿ ಸುಮಾರು ನಾಲ್ಕೂವರೆ ತಿಂಗಳು ಕಣ್ಣು - ಪಾದಗಳನ್ನ  ನೋಡಿಯೇ ಫಿದಾ ಆಗಿದ್ದ ನನಗೆ ಆಕೆಯ ಮುಖ ದರ್ಶನ ಆಗೋ ಸಮಯ ಅದು. ಆ ಕಪ್ಪನೆಯ ಬಟ್ಟೆ ತಲೆ, ಮುಖವನ್ನು ತೆರವಾದ ಕೂಡಲೇ ನನ್ನ ಮುಖದಲ್ಲಿ ಇದ್ದ ಕುತೂಹಲದ ಸಂತಸ ಮಂಕಾಯಿತು... ಛೇ.... ಎಂಬ ಉದ್ಗಾರ ನನ್ನ ಬಾಯಿಂದ ಬಂತು. ಕಾರಣ, ಅವಳ ಬಿಳುಪೇ ನಾಚುವಷ್ಟು ಕುರೂಪಳಂತೆ ಆಕೆ ಕಂಡಳು. ಉಬ್ಬಿದ ಹಲ್ಲು ಇಡೀ ಸೌಂದರ್ಯವನ್ನೇ ಹಾಳು ಮಾಡಿದ್ದವು. ಚೂಪು ಮುಖಕ್ಕೆ ಆ ವಿಚಿತ್ರ ಉಬ್ಬು ಹಲ್ಲುಗಳು ಅಕ್ವರ್ಡ್  ಅನ್ನಿಸಿ, ಕುರೂಪಿ ಅನ್ನಿಸುತಿತ್ತು.
ಇದಾಗಿ 12 ವರ್ಷಗಳು ಕಳೆದು ಹೋಗಿದೆ. ಯಾಕೋ ನೆನಪಾದಳು. ಸುಮ್ಮನೆ ಗೀಚಿದೆ...!?