Saturday, March 21, 2009

ಯಾವ ಕಾನ್ಫಿಡೆನ್ಸಿಗಿದೆ...?


ತುಂಬಾ ಪ್ರೀತಿಸಿದ ಗರ್ಲ್ ಫ್ರೆಂಡ್ ಕಳೆದುಕೊಳ್ಳುವುದಕ್ಕಿಂತ ದೊಡ್ಡ ದುರಂತ ಏನಾದರೂ ಇದೆಯಾ? ಯುವಕನೊಬ್ಬ ಸ್ವಾಮಿ ವಿವೇಕಾನಂದರ ಮುಂದೆ ನಿಂತು ಕೇಳಿದ.
ಹೌದು ಖಂಡಿತಾ ಇದೆ. ಮತ್ತೊಬ್ಬ ಹುಡುಗಿ ಸಿಕ್ಕೇ ಸಿಗುತ್ತಾಳೆ ಎಂಬ ಆತ್ಮವಿಶ್ವಾಸ ಕಳೆದುಕೊಳ್ಳವುದು ದೊಡ್ಡ ದುರಂತ. ಆತ್ಮವಿಶ್ವಾಸ ಕಳೆದುಕೊಂಡರೇ ಜೀವನವನ್ನೇ ಕಳೆದುಕೊಂಡಂತೆ ಎಂದು ವಿವೇಕಾನಂದರು ಉತ್ತರಿಸಿದರಂತೆ.
ಈ ಘಟನೆ ಎಸ್‌ಎಂಎಸ್ ರೂಪದಲ್ಲಿ ಒಂದು ತಡರಾತ್ರಿ ವೈದ್ಯ ಮಿತ್ರ ಡಾ. ಮಂಜು ಮೊಬೈಲ್‌ನಿಂದ ಬಂತು. ಮಲಗಿದ್ದರೂ ನಿದ್ದೆ ಬರದೇ ಒದ್ದಾಡುತ್ತಿದ್ದವನು, ವಿವೇಕಾನಂದರಿಗೆ ಗರ್ಲ್ ಫ್ರೆಂಡ್ ಬಗ್ಗೆ ಏನು ಗೊತ್ತು? ಎಂದು ಮೆಸೇಜಿಸಿದ.
ವಿವೇಕಾನಂದರಿಗೆ ಗರ್ಲ್ ಫ್ರೆಂಡ್ ಬಗ್ಗೆ ಗೊತ್ತಿಲ್ಲ. ಕಾನ್ಫಿಡೆನ್ಸ್ ಗೊತ್ತು ಎಂದು ಪಾಠ ಶುರುವಿಟ್ಟ.
ಪಾಠ ಕೇಳಿದ ಮನಸ್ಸು, ‘ಇಡೀ ಜಗತ್ತನ್ನೇ ಗೆಲ್ಲುವ ಆತ್ಮವಿಶ್ವಾಸವನ್ನು ಒಬ್ಬ ಗರ್ಲ್‌ಫ್ರೆಂಡ್ ನೀಡಬಲ್ಲಳು, ನೀಡುತ್ತಾಳೆ. ಯಾವ ಕಾನ್ಫಿಡೆನ್ಸು ಒಬ್ಬ ಗರ್ಲ್‌ಫ್ರಂಡ್ ಅನ್ನು ಗೆದ್ದೇ ಗೆಲ್ಲಬಲ್ಲೇ ಎಂದು ಕಾನ್ಫಿಡೆಂಟ್ ಆಗಿ ಹೇಳುತ್ತದೆ’ ಎಂಬ ಪ್ರಶ್ನೆ ಎಸೆದೆ. ಇನ್ನೂ ಉತ್ತರ ಬಂದಿಲ್ಲ.

Monday, March 2, 2009

ಈ ಊರು ಪ್ರತಿ ಬೇಸಿಗೆಗೂ ಮೊಮ್ಮಕ್ಕಳಿರುವ ವೃದ್ಧಾಶ್ರಮ


ಬಿಸಿಲ ಬೇಗೆ ಶುರುವಾಗಿದೆ. ಮರದಲ್ಲಿ ಎಲೆ ಉದುರುತ್ತಿದೆ. ಗರಿಕೆ ಹುಲ್ಲು ಕಮರಿದೆ. ದನ -ಕರುಗಳಿಗೆ ಮೇವಿನ ಅಭಾವ. ದುಡಿಯುವ ಕೈಗಳಿಗೆ ಕೆಲಸದ ಅಭಾವ. ಹೀಗಾಗಿ ಧಾರವಾಡ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಮಂದಿ ಕೆಲಸ ಅರಸಿ ಊರು ಬಿಡವುದು ಸಾಮಾನ್ಯ. ತಾಲೂಕಿನ ಹುಣಶಿಕುಮರಿ ಮತ್ತು ಉಡವನಾಗಲಾವಿ ಗ್ರಾಮಗಳಂತೂ ವಲಸೆಯಿಂದಾಗಿ ಗ್ರಾಮಗಳು ಮೊಮ್ಮಕ್ಕಳೊಂದಿಗೆ ವೃದ್ಧರಿರುವ ವೃದ್ಧಾಶ್ರಮಗಳಾಗಿ ಬಿಟ್ಟಿವೆ.
ಸರಿಯಾದ ರಸ್ತೆಯನ್ನೂ ಕಾಣದ ಈ ಎರಡು ಹಳ್ಳಿಗಳ ಯುವಕರು, ಮಧ್ಯ ವಯಸ್ಕರು ಪ್ರತಿ ಬೇಸಿಗೆಯಂತೆಯೇ ಈ ಬಾರಿಯೂ ಊರು ಬಿಟ್ಟಿದ್ದಾರೆ. ಕೆಲವರು ಮನೆಯಲ್ಲಿನ ದನಗಳನ್ನು ಮೇವಿರುವ ಕಡೆಗೆ ಮೇಯಿಸಲು ಹೋಗಿಬಿಟ್ಟಿದ್ದಾರೆ. ಇನ್ನು ಕೆಲವರು ಗೋವಾದಲ್ಲಿ ಕೆಲಸ ಅರಸಿ ಗಂಟು ಮೂಟೆ ಕಟ್ಟಿ ತಿಂಗಳಾಗಿದೆ. ಈಗ ಈ ಎರಡೂ ಹಳ್ಳಿಗಳಲ್ಲಿ ಇರುವುದು ವೃದ್ಧರು, ಮಕ್ಕಳು ಮತ್ತು ಹೆಣ್ಣು ಮಕ್ಕಳು ಮಾತ್ರ.
ಇಂತಹ ವಲಸೆ ತಡೆಯಬೇಕು. ಅವರಿರುವ ಊರಿನಲ್ಲೇ ಉದ್ಯೋಗ ದೊರಕಿಸಿಕೊಡಬೇಕು. ದುಡಿಯುವ ಕೈಗೆ ಉದ್ಯೋಗ, ಹಸಿದ ಹೊಟ್ಟೆಗೆ ಅನ್ನ ಎಂಬ ತತ್ವದೊಂದಿಗೆ ಜಾರಿಗೆ ಬಂದಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೂ ಈ ವಲಸೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಎರಡೂ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿಯ ನೋಂದಣಿಯಾಗಿದ್ದರೂ ಯಾರೂ ಆ ಯೋಜನೆಯ ಕೆಲಸಕ್ಕೆ ಹೋಗದೇ, ಊರು ಬಿಟ್ಟಿದ್ದಾರೆ.
ನಿತ್ಯದ ಹಾಲಿಗೆ ಎಂದು ಒಂದೆರಡು ಹಸುಗಳನ್ನು ಕೆಲವರು ಊರಲ್ಲೇ ಉಳಿಸಿಕೊಂಡಿದ್ದಾರೆ. ಎರಡೂ ಗ್ರಾಮದಲ್ಲಿ ಜನಸಂಖ್ಯೆಗಿಂತ ಮೂರು ಪಟ್ಟು ಹಸು -ಕರುಗಳಿವೆ. ಪಶುಸಂಗೋಪನೆಯೇ ಈ ಗ್ರಾಮದ ದೊಡ್ಡ ಉದ್ಯೋಗ. ಇವರ್‍ಯಾರು ಹಾಲು ಮಾರುವುದಿಲ್ಲ. ಹಾಲನ್ನು ಖೋವಾ ಮಾಡಿ, ಧಾರವಾಡದ ಸಿಹಿ ತಯಾರಕರಿಗೆ ಮಾರುತ್ತಾರೆ.
ಆರೋಗ್ಯ ಕೆಟ್ಟರೆ..
ಈ ಎರಡೂ ಗ್ರಾಮಗಳು ಧಾರವಾಡ ತಾಲೂಕಿನಲ್ಲಿದ್ದರೂ ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತವೆ. ಇವು ಧಾರವಾಡದಿಂದ ೧೭ ಕಿಮೀ ದೂರದಲ್ಲಿರುವ ಕಲಕೇರಿ ಗ್ರಾಮ ಪಂಚಾಯ್ತಿಗೆ ವ್ಯಾಪ್ತಿಯಲ್ಲಿವೆ. ಕಲಕೇರಿಯಿಂದ ಕಚ್ಚಾ ಮಣ್ಣಿನ ಹಳ್ಳಕೊಳ್ಳದ ರಸ್ತೆಯಲ್ಲಿ ೫.೫ ಕಿಮೀ ಸಾಗಿದರೆ ಹುಣಶೀಕುಮರಿ ಸಿಗುತ್ತದೆ. ಅಲ್ಲಿಂದ ಇನ್ನೂ ೨.೫ ಕಿಮೀ ಸಾಗಿದರೆ ಉಡವ ನಾಗಲಾವಿ ಗ್ರಾಮ ಸಿಗುತ್ತದೆ. ೪೦೦ ಜನಸಂಖ್ಯೆ ಇರುವ ಉಡವ ನಾಗಲಾವಿಗೆ ಹೋಲಿಸದರೆ ೬೦೦ ರಷ್ಟು ಜನಸಂಖ್ಯೆ ಇರುವ ಹುಣಶೀಕುಮರಿ ಸ್ವಲ್ಪ ಅಭಿವೃದ್ಧಿ ಕಂಡಿದೆ. ಅಂದರೆ ಹೆಂಚಿನ ಮನೆಗಳು ಹೆಚ್ಚಿವೆ ಅಷ್ಟೇ. ರಸ್ತೆಯಂತೂ ಎರಡೂ ಊರಿಗೂ ಇಲ್ಲ.
ಊರಲ್ಲಿ ಶಕ್ತರಾದ ಮಕ್ಕಳು ಇಲ್ಲದ ಹೊತ್ತಿನಲ್ಲಿ ಯಾರಿಗಾದರೂ ಆರೋಗ್ಯ ಕೆಟ್ಟರೆ, ದೇವರೆ ಗತಿ. ಕಾರಣ ಅವರನ್ನು ಆಸ್ಪತ್ರೆಗೆ ಒಯ್ಯಬೇಕು ಅಂದರೆ ಹೊತ್ತುಕೊಂಡೇ ಸಾಗಬೇಕು. ಒಬ್ಬಿಬ್ಬರ ಬಳಿ ಬೈಕ್ ಇದ್ದರೂ ಅದನ್ನು ಆ ಕಲ್ಲಿನ ಹಾದಿಯಲ್ಲಿ ಓಡಿಸುವುದೇ ಒಂದು ಸಾಹಸದ ಕೆಲಸ. ಬೈಕ್ ಓಡಿಸುವ ಮಕ್ಕಳು ಸದ್ಯ ದನ ಅಟ್ಟಿಕೊಂಡು ಊರು ಬಿಟ್ಟಿದ್ದಾರೆ.
ಯಾರಿಗೆ ಬೇಕ್ರಿ ಖಾತ್ರಿ..?
ಉದ್ಯೋಗ ಖಾತ್ರಿ ಯೋಜನೆಗೆ ನಾವೆಲ್ಲಾ ಸೇರಿವಿ. ದಿನಕ್ಕೆ ೮೨ ರೂಪಾಯಿ ಕೊಡ್ತಾರಂತೆ. ಅದೇ ಗೋವಾ, ಬೆಳಗಾವಿ, ಹುಬ್ಬಳ್ಯಾಗ ಹೋದ್ರೆ ೨೦೦ ರು.ವರೆಗೂ ಸಂಪಾದಿಸ್ತಾರೆ. ಅಲ್ಲದೆ, ಇಲ್ಲಿ ಏನ ಕೆಲಸ ಸಲಾಕೆ (ಗುದ್ದಲಿ)ಯಾಗ ರಸ್ತೆ ಅಗೆಯೋದು. ಮಣ್ಣಿನಲ್ಲಿ ರಸ್ತೆ ಮಾಡಿಕೋರಿ ಅಂತ ೧.೪೦ ಲಕ್ಷ ರು.ದ ಕಾಮಗಾರಿ ಹೇಳ್ಯಾರ. ಯಾರೂ ಆ ನೌಕರಿಗೆ ಹೋಗಿಲ್ಲ. ಹೋಗಾದೂ ಇಲ್ಲ. ಎಲ್ಲಾ ದನ ಹೊಡ್ಕಂಡು, ಕೆಲವರು ಗೋವಾಗೆ ಹೋಗ್ಯಾರ ಅಂತ ಅಳಲು ತೋಡಿಕೊಂಡವರು ಹುಣಶಿಕುಮರಿ ಗ್ರಾಪಂ ಮಾಜಿ ಸದಸ್ಯ ತುಕಾರಾಮ.
ಮಳೆಗಾಲಕ್ಕೆ ಬರೋದು..,
ನಮ್ಮ ಹುಡುಗರು ದೇವಗಿರಿ ಕಡೇಗೆ ದನ ಹೊಡ್ಕಂಡು ಹೋಗ್ಯಾರ. ನಮ್ಮ ಪೈಕಿ ಕೆಲವರು ಗೋವಾಗೂ ಹೋಗ್ಯಾರ. ಇದ ಇಲ್ಲಿ ಪ್ರತಿ ಬೇಸಿಗೆಗೂ ಕಾಯಂ ನಡೆಯೋದ್ರಿ. ಮಳೆಗಾಲ ಶುರುವಾದ ಕೂಡ್ಲೆ ಎಲ್ಲಾ ವಾಪಸ್ ಬರ್‍ತಾರೆ. ಉದ್ಯೋಗ ಕಾರ್ಡ್ ಕೊಟ್ಟಾರೆ, ಎಲ್ಲಾ ಮನೆಯಾಗೆ ಅದಾವು. ಅದೇನು ಮಾಡೋದ್ರಿ ಎಂದು ಪ್ರಶ್ನಿಸಿದವರು ಭೈರು.
ಉದ್ಯೋಗ ಖಾತರಿ ಯೋಜನೆ ಎಲ್ಲಿ ವಿಫಲವಾಗಿದೆ? ಏಕೆ ವಿಫಲವಾಗಿದೆ? ಹೇಗೆ ವಿಫಲವಾಗಿದೆ? ಎಂಬ ಪ್ರಶ್ನೆಗಳಿಗೆ ಈ ಊರುಗಳಲ್ಲಿ ಉತ್ತರ ಸಿಗುತ್ತದೆ.

ಹೇಳುವುದು ಏನೋ ಉಳಿದು ಹೋಗಿದೆ............