Friday, January 30, 2009

ಸಮಸ್ಯೆಗಳ ಸುನಾಮಿ ಮಾನೋಮಿಯಲ್ಲಿ ಜಗಳದ ಸುದ್ದಿ...

ಸಮಸ್ಯೆಗಳಲ್ಲಿ ಹಳ್ಳಿ ಇದೆಯೋ, ಈ ಹಳ್ಳಿನೇ ಸಮಸ್ಯೆ ಆಗಿದೆಯೋ ಗೊತ್ತಿಲ್ಲ. ಆದರೆ ಈ ಊರಿನಲ್ಲಿ ಭರ್ಜರಿಯಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ನಿಂತಿಲ್ಲ...?ಎಂಬಿತ್ಯಾದಿಯಾಗಿ ಕ್ಯಾಮೆರಾ ಮುಂದೆ ನಿಂತ ಟಿವಿ 9 ವರದಿಗಾರ ಮಿತ್ರ ರೆಹಮತ್ ಕಂಚಿಗಾರ ಅವರು ತಮ್ಮ ವಿಶೇಷ ವಿಶಿಷ್ಟ ಶೈಲಿಯಲ್ಲಿ ವರದಿ ಒಪ್ಪಿಸುತ್ತಿದ್ದರು.
ಅವರ ಒಂದು ಕೈ ಮೈಕ್ ಹಿಡಿದಿದ್ದರೆ ಮತ್ತೊಂದು ಕೈ ಪ್ಯಾಂಟು ನೀರಿನಲ್ಲಿ ತೋಯ್ದೀತು ಎಂದು ಪ್ಯಾಂಟು ಹಿಡಿದುಕೊಂಡಿದ್ದರು. ಅವರು ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ನಿಂತಿದ್ದರು.
ಅವರ ಎಡ ಬದಿಗೆ ಪ್ರತಿ ಮಳೆಗಾಲದಲ್ಲಿ ದ್ವೀಪವಾಗುವ, ರಸ್ತೆ ಇಲ್ಲದ ಸಮಸ್ಯೆಗಳ ಸುನಾಮಿಯಲ್ಲೇ ಇರುವ ಮಾನೋಮಿ?ಗ್ರಾಮ ಅಚ್ಚರಿಯಿಂದ ನೋಡುತಿತ್ತು. ಇನ್ನಾದರೂ ರಾಜಕಾರಣಿಗಳು ನಮ್ಮ ಸಮಸ್ಯೆಗೆ ಧಾವಿಸುವರೆ ಎಂದು ಆಸೆಯನ್ನು ಕಣ್ಣುಗಳಲ್ಲಿ ತುಂಬಿ ನಿಂತು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಟಿವಿ ಛಾನಲ್ ವರದಿಗಾರರನ್ನು ತದೇಕ ಚಿತ್ತದಿಂದ ಗ್ರಾಮಸ್ಥರು ನೋಡುತ್ತಿದ್ದರು.
ಆರು ಕಿಮೀ ನಡೆಯಬೇಕು..,
ಅದು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕು ಅರಬಾವಿ ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮ. ಆ ಗ್ರಾಮಕ್ಕೆ ನೀವು ಹೋಗಬೇಕು ಅಂದರೆ ಬರೋಬ್ಬರಿ 6 ಕಿಮೀ ನಡೆಯಬೇಕು. ಮೂರು ಕಿಮೀ ನಡೆಯಲು ಕಚ್ಚಾ ಹಾದಿ ನಿಮ್ಮ ನೆರವಿಗೆ ಬಂದರೆ, ಇನ್ನು 3 ಕಿಮೀ ಸಾಗಲು ನೀವು ಹೊಲದ ಬದಿಯ ಕಾಲು ಹಾದಿಯನ್ನೇ ಆಶ್ರಯಿಸಬೇಕು. ಇಷ್ಟೆಲ್ಲಾ ಸಾಗಿ ಬಂದ ಮೇಲೆ ಹೊಳೆಯಂತಹ ಹಳ್ಳ ನಿಮ್ಮನ್ನು ಅಡ್ಡಗಟ್ಟುತ್ತದೆ. ಆ ಹೊಳೆಯನ್ನು ದಾಟಿದರೆ ಊರು ಸಿಗುತ್ತದೆ. ಮಳೆಗಾಲದಲ್ಲಿ ಈ ಹಳ್ಳ ನಾಲ್ಕು ಆಳು ಎತ್ತರಕ್ಕೆ ಹರಿಯಲು ತೊಡಗುತ್ತದೆ. ಆಗ ಈ ಊರು ಅಕ್ಷರಶಃ ದ್ವೀಪವಾಗುತ್ತದೆ. ಸರಿ ಸುಮಾರು ಒಂದೂವರೆಯಿಂದ ಎರಡು ತಿಂಗಳು ಇಲ್ಲಿನವರಿಗೆ ಹೊರಗಿನ ಸಂಪರ್ಕ ಕಟ್ ಆಗುತ್ತದೆ. ಈ ಊರಿನಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರು ಬರಲಾಗುವುದಿಲ್ಲ. ಹೀಗಾಗಿ ಈ ಶಾಲೆಗೆ ಅಘೋಷಿತ ರಜೆ. ಇನ್ನು ಊರ ಹೊರಗೆ ಶಾಲೆ ಕಾಲೇಜಿಗೆ ಹೋಗುವ ಹುಡುಗರಿಗೂ ರಜೆ. ಇದರಿಂದಾಗಿಯೇ ಈ ಊರಿನಲ್ಲಿ ಹೆಚ್ಚು ಓದಿದವರು ಇಲ್ಲ.
ಇಷ್ಟೆಲ್ಲಾ ಸಮಸ್ಯೆ ಇರುವ ಈ ಊರಿನಲ್ಲಿ 400 ಮತಗಳಿವೆ. ಸರಿಸುಮಾರು 1200ರಷ್ಟು ಜನಸಂಖ್ಯೆ ಇದೆ. ಆದರೂ ಇಲ್ಲಿಗೆ ವೋಟು ಕೇಳಲು ಅಭ್ಯರ್ಥಿ ಬರುವುದಿಲ್ಲ. ಅವನ ಬಂಟರು ಬಂದು ಆಶ್ವಾಸನೆಯ ಮಳೆ ಸುರಿಸಿ, ಮತ ಯಾಚಿಸಿ ಹೋಗುತ್ತಾರೆ. ಅದನ್ನೇ ನಂಬಿದಂತೆ ಮಾಡಿ ಇವರು ವೋಟು ಹಾಕುತ್ತಾರೆ.
ಕೈ ತಪ್ಪಿತ್ತು..
ಈ ಗ್ರಾಮದ ಸಮಸ್ಯೆ, ಪಡಿಪಾಟಲನ್ನು ನಾನು ಅರಬಾವಿ ಕ್ಷೇತ್ರಕ್ಕೆ ಹೋಗುವ ಮುನ್ನಾ ದಿನವೇ ನಮ್ಮ ಬೆಳಗಾವಿಯ ಹಿರಿಯ ವರದಿಗಾರ ಎಂ.ಕೆ. ಹೆಗಡೆ ವಿಶೇಷ ವರದಿ ಬರೆದಿದ್ದರು. ನಾನು ಹೋಗಿ ಈ ಸುದ್ದಿ ನೋಡಿ, ನನ್ನ ಕೈಯಿಂದ ತಪ್ಪಿತಲ್ಲ. ವಾಪಸ್ ಹೋಗುವುದರೊಳಗೆ ಆ ಊರಿಗೆ ಹೋಗಿ ಬರಬೇಕು. ಎಂದುಕೊಂಡಿದೆ. ನನಗಿಂತ ಮುಂಚಿತವಾಗಿ ಹೋಗಿದ್ದರೂ ಆ ಸುದ್ದಿ ಮೊದಲು ತನಗೆ ಸಿಗಲಿಲ್ಲವಲ್ಲ ಎಂದು ಕಸ್ತೂರಿ ಟಿವಿಯ ಮುಸ್ತಫಾ, ಶಿವಾಜಿ ಕೈ ಕೈ ಹಿಸುಕಿಕೊಂಡಿದ್ದರು. ತಾವೂ ಅಲ್ಲಿಗೆ ಹೋಗು ಬರುವ ಇರಾದೆ ವ್ಯಕ್ತಪಡಿಸಿದ್ದರು. ಆದರೆ, ಸುದ್ದಿಯ ಒತ್ತಡಗಳಿಂದಾಗಿ ತಾಸು ಗಟ್ಟಲೆ ನಡೆದು ಹೋಗಿ ಸುದ್ದಿ ಮಾಡುವ ಸಮಯ ಯಾರಿಗೂ ಸಿಕ್ಕಿರಲಿಲ್ಲ.
ಜಗಳ ಎಂದೂ...
ಅರಬಾವಿ ಉಪ ಚುನಾವಣೆ ದಿನ ಇಂತಿಪ್ಪ ಮಾನೋಮಿ ಗ್ರಾಮದಲ್ಲಿ ಮತಗಟ್ಟೆಯಲ್ಲಿ ಅಧಿಕಾರಿಗಳು ಪಕ್ಷವೊಂದರ ಪರ ಮತ ಹಾಕುವಂತೆ ಹೇಳುತ್ತಿದ್ದರು. ಇದರಿಂದಾಗಿ ಜಗಳ ಶುರುವಾಗಿ ಮತದಾನ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಸುದ್ದಿಗಾರರಿಗೆ ದೊರೆಯಿತು. ಈ ಜಗಳದ ಸುದ್ದಿಗಾಗಿ ಟಿವಿ೯ನೇ ರೆಹಮತ್ ಕಂಚಿಗಾರ, ಅವರ ಕ್ಯಾಮೆರಾ ಕಣ್ಣು ಸ್ಟೀಫನ್, ಈಟಿವಿಯ ಗುರುಲಿಂಗಸ್ವಾಮಿ, ರಾಕೇಶ್, ಕಸ್ತೂರಿ ಟಿವಿಯ ಮುಸ್ತಫಾ, ಶಿವಾಜಿ, ಝೀ ಟಿವಿಯ ನಾಗರಾಜ್ ಕಿರಣಗಿ, ನಮ್ಮೆಲ್ಲರ ಪಾಲಿನ ಗೈಡ್ ಮುನ್ನಾ ಬಾಗವಾನ್ ಜೊತೆಯಲ್ಲಿ ಮಾನೋಮಿಗೆ ಹೋದೆವು.
ಆ ಊರಿಗೆ ಮಾಧ್ಯಮ ತಂಡವು ಕಾಲಿಡುತ್ತಿದ್ದಂತೆ ಆ ಊರಿನ ಮಂದಿ ರಾಜಕೀಯ ಜಗಳ ಮರೆತರು. (ರಾಜಕಾರಣಿಗಳು ಬಂದಾಗಲೂ ಗ್ರಾಮಸ್ಥರು ಹೀಗೆ ವರ್ತಿಸಿದರೆ ಚೆನ್ನಾಗಿರುತ್ತೆ.) ಅದು ಸಣ್ಣ ಜಗಳ ಬಿಡಿ. ಈ ವೋಟಿಂಗು ಶುರು ಆಗ್ಯದ. ನಮ್ಮೂರು ಸಮಸ್ಯೆ ಹಿಂಗಿಂಗ ಅದ ಎಂದು ಅಲವತ್ತುಕೊಳ್ಳಲು ತೊಡಗಿದರು. ಎಲ್ಲವೂ ಕ್ಯಾಮೆರಾಗಳ ಕಣ್ಣು ತುಂಬಿಕೊಳ್ಳ ತೊಡಗಿತು. ಆ ಊರಿನ ಸಮಸ್ಯೆ ಎಲ್ಲವೂ ದಾಖಲಾಯಿತು. ಅಲ್ಲಿಗೆ ನಮ್ಮಂತೆಯೇ ಚುನಾವಣಾ ಕರ್ತವ್ಯಕ್ಕಾಗಿ ನಮ್ಮ ಧಾರವಾಡದ ಪಿಎಸೈ ಒಬ್ಬರನ್ನು ಹಾಕಿದ್ದರು. ಅವರು ಊರಿನ ಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿ, ರಾಜಕೀಯ ಬಿಡಿ ಅಭಿವೃದ್ಧಿ ಕೇಳಿ ಎಂಬ ಕಿವಿಮಾತನ್ನು ಗ್ರಾಮಸ್ಥರಿಗೆ ಹೇಳುತ್ತಿದ್ದರು. ಎಲ್ಲವನ್ನೂ ಕೇಳಿಕೊಂಡಂತೆ ಗ್ರಾಮಸ್ಥರು ಮಾಡಿದರು. ಆದರೆ, ವಾಪಸ್ ನಾವು ಹೋಗುವಾಗ ದಾರಿ ಜೊತೆಗೆ ಸಿಕ್ಕ ಮಹಿಳೆ ಪಾರವ್ವ, ಹೇಳಿದ್ದು - ಎಲ್ಲಾ ನಮ್ಮೂರಿನವರದೇ ತಪ್ಪು. ರಸ್ತೆ ಮಾಡಿಸಿಕೊಡಿ ಎಂದು ಎಲ್ಲಾ ಒಗ್ಗಟ್ಟಾಗಿ ಕೇಳದ್ರ ಆಗುತ್ತೆ. ಆ ಪಾರ್ಟಿ, ಈ ಪಾರ್ಟಿ ಮಾಡಿಕೊಂಡು ಏನೂ ಆಗದಂಗೆ ಆಗೈತಿ. ರಸ್ತೆಗೆ ಜಾಗ ಬಿಡಿಸೋದು ಕಷ್ಟ ಆಗೈತೆ. ಈ ಕಷ್ಟ ಎಲ್ಲಾ ಗೆದ್ದವರೆಗೆ ಯಾಕೆ ಬೇಕು? ಎಂಬ ಪ್ರಶ್ನೆ, ವಿಷಾದವನ್ನು ವ್ಯಕ್ತಪಡಿಸಿ ಹಳ್ಳ ದಾಟಲಾಗದೆ ಸತ್ತ ಗರ್ಭಿಣಿಯರು, ಅಂಗವಿಕಲರ ಕಥೆಗಳನ್ನು ಹೇಳಿದರು. ಎಲ್ಲವೂ ಎಲ್ಲದರಲ್ಲೂ ಪ್ರಸಾರವಾಯಿತು. ಆದರೆ, ಆ ಹಳ್ಳಿಯತ್ತ ಚುನಾವಣೆ ನಂತರ ಗೆದ್ದವರು ಹೋಗಿಲ್ಲ, ಸೋತವರು ಹೋಗಿಲ್ಲ. ವೋಟು ಕೇಳಾಕೆ ಅವರು ಹೋಗಿರಲಿಲ್ಲ.
ಪಂಚಿಂಗ್ ಪಿಟಿಸಿ ಕೊಡುವ ರೆಹಮತ್ ಹೇಳುತ್ತಿದ್ದ - ಹಳ್ಳಿಗಳಲ್ಲಿ ಸಮಸ್ಯೆ ಇದೆಯೋ, ಈ ಹಳ್ಳಿನೇ ಸಮಸ್ಯೆ ಆಗಿದೆಯೋ...............ಅಭಿವೃದ್ಧಿಯ ಪಂಚಮಿ ಈ ಮಾನೋಮಿಗೆ ಯಾವಾಗ ಬರುತ್ತೋ ಎಂಬ ಮಾತು ಮಾತ್ರ ಈಗಲೂ ನೆನಪಾಗುತ್ತಿದೆ...,

ಮಾನೋಮಿ ಚಿತ್ರಗಳು...,
















Tuesday, January 13, 2009

ಆ ಮನೆಯಲ್ಲೇ ಎಲ್ಲರ ಫಸ್ಟ್ ನೈಟ್ ನಡೆಯುತಿತ್ತು...!


ಘಟಪ್ರಭ ನೀರಿನ ನಾಲೆ ಅಲ್ಲೇ ಮಗುಲಲ್ಲೇ ಹರಿಯುತಿತ್ತು. ಹೆಣ್ಣು ಮಕ್ಕಳು ಯಾವುದರ ಪರಿವೇ ಇಲ್ಲದೆ ಬಟ್ಟೆ ತೊಳೆಯುತ್ತಿದ್ದರು. ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುವವರಿಗೂ ಯಾವುದೇ ಅರಿವಿರಲಿಲ್ಲ. ಅಂತಹ ಹೊತ್ತಿನಲ್ಲೇ ನಮ್ಮ ಕಾರು ಅಲ್ಲಿಗೆ ಪ್ರವೇಶಿಸಿತು. ಪ್ರವೇಶದಲ್ಲೇ ಧೂಳು ಹೊದ್ದುಕೊಂಡಂತೆ ಇದ್ದ ಆ ಮನೆಯತ್ತಲೇ ನನ್ನ ದೃಷ್ಟಿ ನೇರವಾಗಿ ಬಿತ್ತು.
ನೀವು ಅಷ್ಟೇ ಗೋಕಾಕದಿಂದ ಕೊಟ್ಟೂರು ಬಸವೇಶ್ವರ ಸನ್ನಿಧಾನ ಇರುವ ಅರಬಾವಿಗೆ ಹೋದರೆ ಮೊದಲು ಸ್ವಾಗತಿಸುವುದೇ ಆ ಮನೆ. ಛೇ ಛೇ ಅದನ್ನು ಮನೆ ಎನ್ನುವುದಕ್ಕಿಂತ ಹಳೆಯ ಬಂಗಲೆ ಎನ್ನಲು ಅಡ್ಡಿ ಇಲ್ಲ. ಆ ಭಾರಿ ಮನೆಯತ್ತಲೇ ನನ್ನ ನೋಟ ನೆಟ್ಟಿತ್ತು. ಏನಿದು ಮನೆಯಾ? ಅರಮನೆಯಾ? ಕಾರು ನಿಲ್ಲಿಸಿ ಫೋಟೋ ತೆಗೆಯುವ ಎಂದು ನಾನು ಮಾತು ಆರಂಭಿಸುವ ಮುನ್ನವೇ ಗೆಳೆಯ ಮುನ್ನಾ ಮಾತನಾಡಲು ಶುರು ಮಾಡಿದ್ದರು.
ಒಂದು ಕಾಲದಲ್ಲಿ ಇದೇ ಮನೆಯಲ್ಲೇ ಸುತ್ತಲ ಹತ್ತು ಹಳ್ಳಿಯ ಹೆಣ್ಣು ಮಕ್ಕಳ ಫಸ್ಟ್ ನೈಟ್ ನಡೆಯುತಿತ್ತು ಎಂದರು.
ಓಹೋ..ಓಹೋ.. ಅಂತ ವಿಶೇಷ ಏನ್ ಗುರುವೇ ಈ ಮನೆಯಲ್ಲಿ, ನಿಲ್ಲಿಸು ಈಗ ಡೇನಲ್ಲಿ ಏನು ನಡೆಯುತ್ತೆ ನೋಡೋಣ ಅಂದೆ ಗೇಲಿಯಿಂದ.
ಕಾರು ನಿಲ್ಲಿಸಬೇಡಿ. ನಡೆಯಿರಿ. ಹತ್ತೂ ಊರಿನ ಹೆಣ್ಣು ಮಕ್ಕಳ ಫಸ್ಟ್ ನೈಟ್ ನಡೆಯುತ್ತಿದ್ದದ್ದು ಇಲ್ಲೇ. ಆದರೆ, ಎಲ್ಲಾ ಹೆಣ್ಣು ಮಕ್ಕಳ ಜೊತೆ ಮಲಗುತ್ತಿದ್ದದ್ದು ಮಾತ್ರ ಒಬ್ಬನೇ. ಅವನೇ ಸತ್ಯಪ್ಪ ವಡ್ಡರ ಎಂದು ಪ್ರಥಮ ರಾತ್ರಿಗಳ ಕಥೆಯ ಹಾಳೆಗಳು ತಿರುಗತೊಡಗಿದವು.
ಅದು ಸುಮಾರು 1935 - 1960ರ ನಡುವೆ ನಡೆದ ದರ್ಬಾರಿನ ದಿನಗಳು. ಈ ಸತ್ಯಪ್ಪ ವಡ್ಡರ ಶ್ರೀಮಂತನೂ ಹೌದು, ದೊಡ್ಡ ಪಾಳೇಗಾರ. ಈಗಿನ ಅರ್ಥದಲ್ಲಿ ಹೇಳಬೇಕು ಅಂದರೆ ರೌಡಿ. ಗೂಂಡಾ ಆಗಿದ್ದ. ಅರಬಾವಿಯಿಂದ ಜಮಖಂಡಿಯವರೆಗೂ ಎಲ್ಲೂ ತಪ್ಪದಂತೆ ಹೊಲವಿತ್ತು ಸತ್ಯಪ್ಪನಿಗೆ ಎಂದು ಹೇಳುತ್ತಾರೆ. ಸುತ್ತಲ ಯಾವುದೇ ಹಳ್ಳಿಯಲ್ಲಿ ಮದುವೆಯಾದರೂ ಆ ಹೆಣ್ಣು ಮಗಳ ಮೊದಲ ರಾತ್ರಿ ಮಾತ್ರ ಸತ್ಯಪ್ಪ ವಡ್ಡರ ಜೊತೆಯೇ ಆಗಬೇಕಿತ್ತು. ಇಲ್ಲವೇ ಜೀವ ಕಳೆದುಕೊಳ್ಳಬೇಕಿತ್ತು.
ಅದೇ ಕಟ್ಟಪ್ಪಣೆಯನ್ನು ತನ್ನ ಹಣಕಾಸಿನ ಲೆಕ್ಕ ನೋಡಿಕೊಳ್ಳುತ್ತಿದ್ದಾತನ ಮಗಳಿಗೂ ಅನ್ವಯಿಸಿದ. ಕೈ ಕೈ ಮುಗಿದು ಕಾಲಿಗೆ ಬಿದ್ದರೂ ಸತ್ಯಪ್ಪನ ಆಸೆ ಮಾತ್ರ ಕರಗಲಿಲ್ಲ. ಲೆಕ್ಕದವನ ಮಗಳೊಂದಿಗೆ ಮಲಗಿ ಆಕೆಯ ಆತ್ಮಹತ್ಯೆಗೆ ಕಾರಣವಾಗಿಬಿಟ್ಟ. ಬಡಪಾಯಿ ಲೆಕ್ಕದವ ಸತ್ಯಪ್ಪನ ಮೇಲೆ ಸೇಡು ತೀರಿಸಿಕೊಳ್ಳುವುದು ದೂರದ ಮಾತಾಗಿತ್ತು. ಆಗ, ಬ್ರಿಟೀಷರು ಆದಾಯ ತೆರಿಗೆಗಾಗಿ ತಪಾಸಣೆ ನಡೆಸ ತೊಡಗಿದರು. ಗುಟ್ಟಾಗಿ ಸತ್ಯಪ್ಪನ ಕಳ್ಳಲೆಕ್ಕದ ಮಾಹಿತಿ, ಅವಿತಿಟ್ಟ ಸಂಪತ್ತಿನ ಮಾಹಿತಿಯನ್ನು ಬ್ರಿಟೀಷರಿಗೆ ಮುಟ್ಟಿಸಿದ. ಬ್ರಿಟೀಷರು ಎಲ್ಲವನ್ನೂ ಜಫ್ತು ಮಾಡಿಕೊಂಡರು.
ಎಲ್ಲಾ ಗೂಂಡಾಗಿರಿಯ ಮೊದಲ ಶಕ್ತಿಯಾದ ಸಂಪತ್ತು ಅವನಿಂದ ದೂರಾಗಲು ತೊಡಗಿತ್ತು. ಅವನ ದರ್ಪವೂ ನಿಧನವಾಗಿ ಕ್ಷೀಣಿಸತೊಡಗಿತು. ಅಷ್ಟರಲ್ಲಿ ಭಾರತಕ್ಕೆ ಸ್ವಾತಂತ್ರ್ಯವೂ ಬಂತು. ಅನೇಕ ಬದಲಾವಣೆಗಳ ಗಾಳಿಗೆ ಗೋಕಾಕ ತಾಲೂಕು ಮೈ ಒಡ್ಡಿಕೊಂಡಿತು. ಆದರೆ, ವಯಸ್ಸಾಗುತ್ತಿದ್ದ ಸತ್ಯಪ್ಪನಿಗೆ ಮತ್ತಷ್ಟು ಹೆಣ್ಣು ಚಪಲ ಹೆಚ್ಚಾಯಿತು. ಮೊದಲಿನಂತೆ ಅಲ್ಲವಾದರೂ ಹೆದರುವವರನ್ನು ಹೆದರಿಸಿ ಚಪಲ ತೀರಿಸಿಕೊಳ್ಳುತ್ತಿದ್ದ. ಸತ್ಯಪ್ಪನ ತೆವಲಿಗೆ ಜೀವ ಕಳೆದುಕೊಂಡಕೆಯ ಸಾವಿನ ಪ್ರಕರಣದ ತನಿಖೆ ಖಡಕ್ ಅಧಿಕಾರಿಗಳು ಮುಂದಾದರು. ಆಗ ಸತ್ಯಪ್ಪನ ಮನೆ ಮೇಲೆ ದಾಳಿ ನಡೆಸಿದರು. ಅವನ ಮನೆ ಹಿಂದೆ ತೆಗ್ಗು ತೆಗೆಯಲು ತೊಡಗಿದರು. ಸುಮಾರು ೨ ಅಡಿಯಷ್ಟು ಆಳ ತೆಗೆಯುತ್ತಿದ್ದಂತೆ ಮೊದಲು ಚಿಮ್ಮಿದ್ದು ತಲೆಬುರುಡೆ. ಹಾಗೆ ಅಗೆಯುತ್ತಾ ಹೋಗುತ್ತಿದ್ದಂತೆ ತಲೆಬುರುಡೆ, ಮೂಳೆಗಳು ಎಷ್ಟು ಎಂಬುದನ್ನು ಲೆಕ್ಕ ಇಟ್ಟವರಾರು ಈಗ ಉಳಿದಿಲ್ಲವಂತೆ. ಅದಾದ ನಂತರ ಸತ್ಯಪ್ಪನ ಅವನತಿ ಆರಂಭವಾಯಿತಂತೆ. ಕೊನೆಗೆ ನಾನಾ ಕಾಯಿಲೆಗಳು ಅಮರಿಕೊಂಡು ಚಿಂತಾಜನಕ ಸಾವು ಕಂಡನಂತೆ. ಆತನ ಅಧಿಕೃತ ಪತ್ನಿಗೆ ಹುಟ್ಟಿದ ಮಕ್ಕಳ ಮಕ್ಕಳು ಈಗ ಆ ಬಂಗಲೆಯಲ್ಲಿ ಇದ್ದಾರೆ. ಆ ಬಂಗಲೆ ಮೇಲಿನ ಧೂಳು ನೋಡಿದರೆ ತಾತನ ಅಬ್ಬರ ಯಾವುದೂ ಆ ಮನೆ, ಮನದಲ್ಲಿ ಉಳಿದಿಲ್ಲ. ಸತ್ಯಪ್ಪ ವಡ್ಡರ ಎಂದರೆ ನಡಗುತ್ತಿದ್ದ ಗೋಕಾಕ ತಾಲೂಕು ಈಗ ಈ ಮನೆ ಕಡೆಗೆ ಅಸಹ್ಯದಿಂದ ನೋಡುತ್ತಾ ತಮಗೆ ತೋಚಿದಂತೆ ಕಥೆ ಹಳಲು ಶುರುವಿಡುತ್ತಾರೆ. ಆ ಮನೆಯಲ್ಲಿ ಇರುವವರನ್ನು ಕರುಣೆಯಿಂದ ನೋಡುತ್ತಾರೆ. ತಾತ ಮಾಡಿದ ಪಾಪ ಮೊಮ್ಮಕ್ಕಳನ್ನು ಕಾಡುತ್ತಿದೆ ಎಂಬುದು ಅರಬಾವಿ ಮಠದ ಪಕ್ಕದ ಗುಡಿಸಲು ಕ್ಯಾಂಟೀನ್‌ನಲ್ಲಿ ಟೀ ಕುಡಿಯುತ್ತಾ ಕುಳಿತಿದ್ದ ಹಿರಿಯರೊಬ್ಬರ ವಾದವಾಗಿತ್ತು.
ಎಲ್ಲಾ ಅನ್ಯಾಯ, ಅಕ್ರಮ ಎಸಗಿದವರೇ ಸುಖದಿಂದಲೇ ಜೀವಿಸುತ್ತಾ, ಜೀವ ಬಿಟ್ಟ ಅನೇಕ ಉದಾಹರಣೆಗಳಿವೆ. ಇನ್ನು ತಾತ ಮಾಡಿದ ಪಾಪ ಮೊಮ್ಮಕ್ಕಳನ್ನು ಕಾಡುವುದೇ ಎಂಬ ನನ್ನ ನಖರ ಪ್ರಶ್ನೆ ತುಟಿಗೆ ಬಂತೇ ಹೊರತು ಶಬ್ದವಾಗಿ ಹೊರ ಹೊಮ್ಮಲಿಲ್ಲ.
ಗೋಕಾಕ ತಾಲೂಕಿಗೆ ಕುಟುಂಬ ರಾಜಕಾರಣ, ಗೂಂಡಾಗಿರಿ ಇತ್ತೀಚಿಗೆ ಅಂಟಿಕೊಂಡ ರೋಗವಲ್ಲ. ಅದಕ್ಕೆ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಜಮೀನುದಾರಿಕೆ, ಪಾಳುದಾರಿಕೆಯ ಗಟ್ಟಿ ಬೇರಿದೆ ಎಂಬುದು ಅರ್ಥವಾಯಿತು. ಆಮೇಲೆ ಆಧುನಿಕ ಪಾಳೇಗಾರರ ಮೇಲೆ ನನಗೆ ಅಷ್ಟಾಗಿ ಸಿಟ್ಟು ಬರಲಿಲ್ಲ. ಶಿಕ್ಷಣ, ಸ್ವಾತಂತ್ರ್ಯ ಜನಪ್ರಿಯ ಆಗಿರುವ ಈ ಕಾಲದಲ್ಲೂ ಜನರನ್ನು ಇನ್ನು ಹಿಡಿದಿಟ್ಟಿದ್ದಾರಲ್ಲ ಎಂದು ಆಶ್ಚರ್ಯವೇ ಆಯಿತು.

Friday, January 2, 2009

ಎಡವಿಬಿದ್ದರೆ ಬಾರ್‌ನಲ್ಲಿ ಎಂಬ ಊರಿನಲ್ಲಿ..,


ನಮ್ಮೂರಿನಲ್ಲಿ ಒಂದು ಮಾತಿದೆ, ಎಡವಿ ಬಿದ್ದರೆ ಬಾರ್‌ನಲ್ಲಿ, ನಗೆದು ಬಿದ್ದರೆ ದವಾಖಾನೆಯಲ್ಲಿ ಎಂದೇ ಮಾತಿಗೆ ಆರಂಭಿಸಿದರು ನನಗೆ ಗೋಕಾಕ ತಾಲೂಕು ಪರಿಚಯಿಸಿದ ಹಿರಿಯ ವರದಿಗಾರ ಮಿತ್ರ ಮುನ್ನಾ ಬಾಗವಾನ್. ಗೋಕಾಕ ನಗರದ ರಸ್ತೆಯೊಂದರಲ್ಲೇ ನಾಲ್ಕಾರು ಬಾರ್ ಅಂಡ್ ರೆಸ್ಟೋರಂಟ್‌ಗಳು, ಅದು ತಾಲೂಕಾದರೂ ಮೆಘಾ ಸಿಟಿಯಲ್ಲಿ ಕಾಣುವಂತಹ ಫೈವ್ ಸ್ಟಾರ್ ಶೈಲಿಯ ಆಸ್ಪತ್ರೆಗಳನ್ನು ಕಂಡು ನಾನು ಅವಕ್ಕಾದಾಗ ಮುನ್ನಾ ಹೇಳಿದ್ದೇ ಹಾಗೆ.
ಕರದಂಟು ಖ್ಯಾತಿಯ ಗೋಕಾಕ ನಗರವು ರಕ್ತಸಿಕ್ತ ರಾಜಕಾರಣಕ್ಕೂ ಹೆಸರು ವಾಸಿ. ಹೆಸರಿಗೆ ಬೆಳಗಾವಿ ಜಿಲ್ಲೆಯ ಒಂದು ತಾಲೂಕು. ಆದರೆ, ಇದು ಒಂದು ಜಿಲ್ಲೆಯಾಗುವಷ್ಟು ಬೆಳೆದಿದೆ. ಈ ತಾಲೂಕಿನ ಒಡಲಲ್ಲಿ ನಾಲ್ಕಾರು ಸಕ್ಕರೆ ಕಾರ್ಖಾನೆ, ಸಿಮೆಂಟು ಕಾರ್ಖಾನೆ ಹಾಗೂ ಕುಟುಂಬ ರಾಜಕಾರಣವಿದೆ.
ಇದೇ ತಾಲೂಕಿನ ಅರಬಾವಿ ವಿಧಾನಸಭಾ ಕ್ಷೇತ್ರವು ಆಪರೇಷನ್ ಕಮಲದಿಂದಾಗಿ ಇತ್ತೀಚೆಗೆ ಉಪ ಚುನಾವಣೆ ಎದುರಿಸಿತು. ಅದಕ್ಕೆ ಸಾಕ್ಷಿಯಾಗುವ ಅವಕಾಶವನ್ನು ನಮ್ಮ ಸಂಪಾದಕರು ನನಗೆ ಕಲ್ಪಿಸಿ ಕಳುಹಿಸಿಕೊಟ್ಟಿದ್ದರು. 10 ದಿನಗಳು ಅಲ್ಲಿ ಕೆಲಸ ಮಾಡಿದ್ದು, ಸಿಕ್ಕ ಗೆಳೆಯರು, ಗಳಿಸಿದ ಅನುಭವ ನನ್ನ ಪಾಲಿಗೆ ಅಮೂಲ್ಯ. 10 ದಿನದ ಉದ್ದಕ್ಕೂ ನನ್ನ ಸಲುಹಿದ ಮುನ್ನಾ ಯಾವಾಗಲೂ ನನೆಪಿನಲ್ಲಿ ಉಳಿಯುತ್ತಾರೆ. ಅವರೊಬ್ಬ ಅದ್ಭುತ ಸ್ಟೋರಿ ಟೆಲ್ಲರ್. ಅದೆಲ್ಲಕ್ಕಿಂತ ಹೆಚ್ಚಾಗಿ ಜೀವನ ಪ್ರೇಮ ಉಳಿಸಿಕೊಂಡಿರುವ ರಸಿಕ. ಅದೇ ತಾಲೂಕಿನ ಮೂಡಲಗಿ ಗ್ರಾಮದ ನಮ್ಮ ಪ್ರತಿನಿಧಿ ಕೃಷ್ಣ ಗಿರಿಯಣ್ಣವರ ತೋರಿಸಿದ ಪ್ರೀತಿ, ಕಳಕಳಿ ನೆನೆದರೆ ಇಂದಿಗೂ ಮನಸ್ಸು ಪ್ರಫುಲ್ಲವಾಗುತ್ತದೆ.
ಈ ತಾಲೂಕಿನಲ್ಲಿ ಜಾರಕಿಹೊಳಿ ಕುಟುಂಬವನ್ನು ಸಾಹುಕಾರರು ಎಂದೇ ಕರೆಯುತ್ತಾರೆ. ಗೋಕಾಕ ತಾಲೂಕಿನ ಬಗ್ಗೆ ಮತಾನಾಡುವಾಗ ಆ ಕುಟುಂಬವನ್ನು ಬಿಟ್ಟು ಮಾತನಾಡುವುದೇ ಕಷ್ಟ. ಅವರ ಬಗ್ಗೆ ಹೆಚ್ಚು ಮಾತನಾಡುವುದು ಕಷ್ಟ. ಇಡೀ ತಾಲೂಕಿನಲ್ಲಿ ಆ ಕುಟುಂಬದ ಬಗ್ಗೆ ಮೆಚ್ಚುವವರು, ಭಕ್ತಿ ತೋರುವವರು, ಭೀತಿಯಿಂದಲೇ ಬಾಯಿ ತೆರೆಯುವವರು, ಅವರ ಕಂಡರೆ ಹಲ್ಲು ಹಲ್ಲು ಕಡಿಯುವವರು ಸಿಗುತ್ತಾರೆ. ಅವರ ರಕ್ತಸಿಕ್ತ ರಾಜಕಾರಣ, ವ್ಯವಹಾರದ ಬಗ್ಗೆ ಮುಂದೆದಾದರೂ ಬರೆದೇನು.
ದಾರಿ ತಪ್ಪುವ ಮುನ್ನ - ಎಡವಿಬಿದ್ದರೆ ಬಾರಿನಲ್ಲಿ ಎಂಬ ಊರಿನಲ್ಲಿ ಸಿಕ್ಕ ಮುನ್ನಾ ಬಾಗವಾನ ಅವರು ಒಂದು ರಾತ್ರಿಯ ತೀರ್ಥಗೋಷ್ಠಿಯ ನಂತರ ಲಾಡ್ಜ್ ಎದುರಿನ ರಸ್ತೆಯಲ್ಲಿ ಏಳೆಂಟು ವರದಿಗಾರ ಮಿತ್ರರು ಮಾತನಾಡುತ್ತಾ ನಿಂತಿದ್ದೆವು. ಅಷ್ಟರಲ್ಲಿ ಅಲ್ಲಿಗೆ ಬಂದ ಪೊಲೀಸರನ್ನು ನೋಡಿದ ಕೂಡಲೇ ಮುನ್ನಾ ಜಾಗೃತರಾದರು. ತಾವು ತೀರ್ಥ ಸೇವನೆ ಶುರು ಮಾಡಿದಕ್ಕೆ ಪೊಲೀಸರೇ ಕಾರಣ ಎಂದು ಹೇಳಿದ ಕಥೆ ಹೀಗಿದೆ...,
ಅದು ಬಾಬ್ರಿ ಮಸೀದಿ ಉರುಳಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಕೋಮು ಗಲಭೆ ನಡೆಯುತ್ತಿದ್ದ ದಿನಗಳು. ಆಗ ಅಲ್ಲಿನ ಸ್ಥಳೀಯ ಪತ್ರಿಕೆಯಾದ ಗೋಕಾಕ ಟೈಮ್ಸ್‌ನಲ್ಲಿ ಮುನ್ನಾ ವರದಿಗಾರರಾಗಿದ್ದರು. ಆಗೆಲ್ಲಾ ಒಂದು ಫೋಟೋ ಬ್ಲಾಕ್ ಮಾಡಿಸಲು ಸಹ ಬೆಳಗಾವಿಗೆ ಹೋಗಬೇಕಿತ್ತು. ಇನ್ನು ಪಿಟಿಐ ಸುದ್ದಿಗಳಿಗೂ ಬೆಳಗಾವಿಗೆ ಹೋಗಿ, ಅಲ್ಲಿಯೇ ಅನುವಾದ ಮುಗಿಸಿ ಹೊತ್ತುಕೊಂಡು ಬರುವ ಕೆಲಸ ಮುನ್ನಾ ಅವರದು. ಹಾಗೆ ಹೊರಟ ಒಂದು ದಿನ ಗೋಕಾಕದಲ್ಲಿ ಕರ್ಫ್ಯೂ.. ವಿಧಿಸಲಾಗಿತ್ತು. ತನ್ನ ಗುರುತಿನ ಚೀಟಿಯನ್ನು ಕೊರಳಿಗೆ ನೇತು ಬಿಟ್ಟುಕೊಂಡು ರಸ್ತೆಗಿಳಿದರು ಮುನ್ನಾ. ಎಲ್ಲಾ ಹೊರಗಿನ ಪೊಲೀಸರೇ ಆದ್ದರಿಂದ ಇವರನ್ನು ವರದಿಗಾರರು ಎಂದು ಗುರುತಿಸಬೇಕಿದ್ದದ್ದು ಕೊರಳಿನಲ್ಲಿದ್ದ ಐಡಿ ಕಾರ್ಡ್‌ನಿಂದಲೇ. ಅವರು ಬಸ್ಸು ನಿಲ್ದಾಣದ ಕಡೆಯಿಂದ ಹಾದು ಹೋಗುವಾಗ ಮಲ್ಲಿಕಾಜನ ಗುಡ್ಡದ ಕಡೆಯಿಂದ ಇಬ್ಬರು ಕಂದಮ್ಮಗಳೊಂದಿಗೆ ಮಹಿಳೆಯೊಬ್ಬರು ಬ್ಯಾಗು, ಬಿದಿರು ಬುಟ್ಟಿ ಹಿಡಿದು ಬರುತ್ತಿದ್ದಳು. ಕೂಡಲೇ ಆಕೆಯನ್ನು ಮುತ್ತಿಕೊಂಡ ಪೊಲೀಸರು ತಪಾಸಣೆಗೆ ಇಳಿದರು. ಮಕ್ಕಳು ಅಳಲಾರಂಭಿಸಿದವು. ಇಬ್ಬರು ಪೊಲೀಸರು ಬುಟ್ಟಿ ಬ್ಯಾಗು ಜಾಲಾಡಿ, ಅದರಲ್ಲಿದ್ದ ಒಂದಷ್ಟು ಅನ್ನ ಚೆಲ್ಲಿದರು. ಬಟ್ಟೆ ಎಳೆದಾಡಿದರು. ಪೊಲೀಸೊಬ್ಬ ಆಕೆಯತ್ತ ಲಾಠಿ ಬೀಸತೊಡಗಿದ. ಬೇಡಿ ತಂದಿದ್ದ ಅನ್ನವನ್ನು ಕಸಿದುಕೊಂಡಿರಲ್ಲಾ. ಇನ್ನು ಯಾವ ಮನೆಯಲ್ಲಿ ಬೇಡಲಿ. ಯಾರೂ ಬಾಗಿಲು ತೆಗೆಯೊಲ್ಲಾ ಎಂದು ಕಣ್ಣೀರಾಗತೊಡಗಿದಳು. ಆದರೂ ಲಾಠಿಗೆ ಕನಿಕರ ಬರಲಿಲ್ಲ.
ಅದನ್ನು ತಡೆಯಲು ಹೋದೆ ಅಷ್ಟೇ. ಹಿಗ್ಗಾ ಮುಗ್ಗಾ ಲಾಠಿಗಳು ಅಬ್ಬರಿಸಿ ಮುಗಿಬಿದ್ದು ನಗ್ಗು ಮಾಡಿದವು ನನ್ನ. ಕಾಲುಗಳು ಸರಿದಾಡಿದವು. ತೋಳಿಗೆ, ಮುಖಕ್ಕೆ ಬ್ಯಾಂಡೇಜ್ ಬಂತು. ಆ ನೋವು ಗೊತ್ತಾಗದೇ ಇರಲು ಕುಡಿ ಎಂದು ಗೆಳೆಯರು ಪ್ರೇರೇಪಿಸಿದರು. ಅಂದಿನಿಂದ ತೀರ್ಥ ಸೇವನೆ ಶುರುವಾಯಿತು ಎಂದು ಅವರದ ಅದ್ಭುತ ಶೈಲಿಯಲ್ಲಿ ಕಥೆ ಹೇಳಿದರು. ನಮ್ಮೊಂದಿಗೆ ಪೊಲೀಸರು ನಕ್ಕರು. ನಾವು ನಕ್ಕೆವು. ಆದರೆ ಮುನ್ನಾ ಮುಖದಲ್ಲಿ ನಗುವಿಗಿಂತ ಹೆಚ್ಚು ವಿಷಾದವೇ ಕಾಣುತಿತ್ತು...,

ಮುಂದಿನ ಘಟನೆ - ಆ ಊರಲ್ಲಿ ಯಾರದೇ ಮದುವೆಯಾದರೂ ಅವರ ಫಸ್ಟ್ ನೈಟ್ ಮಾತ್ರ ಆ ಮನೆಯಲ್ಲೇ ನಡೆಯುತಿತ್ತು...!