Sunday, November 30, 2008

ಆಗ್ಲೇ ಮೊಬೈಲು, ಮೆಸೇಜು ಇಷ್ಟು ಚೀಪ್ ಆಗಿದ್ರೆ...!ಮೈ ಡಿಯರ್ ಬೀದಿ ಬೆಕ್ಕೇ...,
ಪ್ರೇಮ ಪತ್ರ ಅಂದ ಕೂಡಲೇ ನೀನೆ ನೆನಪಾಗ್ತಿ. ಪ್ರೇಮ ಪತ್ರ ಮಾತ್ರವಲ್ಲ ಈಗ ಔಟ್ ಡೇಟ್ ಆಗಿರೋ ಸ್ಟ್ರೀಟ್ ಕ್ಯಾಟ್ ಸೈಕಲ್ಲು, ದೊಗಳೆ ದೊಗಳೆ ಚೂಡಿ ಧರಿಸಿದ ಹುಡುಗೀರು, ಚರ್ಚ್ ಒಳಗಿನ ಮೌನ, ಹಳದಿ ಗುಲಾಬಿ, ಆಯುರ್ವೇದ ವೈದ್ಯರು ಮತ್ತು ತುಟಿಯ ಮೇಲಿನ ಚುಕ್ಕಿ ಕಂಡಾಗಲೆಲ್ಲಾ ನೀನೆ ನೆನಪಾಗ್ತಿ. ಮತ್ತೂ.., ಮೊಬೈಲ್ ಮೂಲಕ ಲವ್ ಕುದುರಿತು, ಮಿಸ್ ಕಾಲ್‌ನಿಂದ ಶುರುವಾದ ಪರಿಚಯ ಲವ್ ಆಯ್ತು, ಮೆಸೇಜ್ ಮೂಲಕ ಪ್ರಪೋಸ್ ಮಾಡಿಬಿಟ್ಟೆ ಎಂದು ಪಿಯುಸಿ ಹುಡುಗರು ಹೇಳಿಕೊಳ್ಳುವಾಗಲೂ ನೀನು ಒಮ್ಮೆ ಕಣ್ಣ ಮುಂದೆ ಬಂದು ನಕ್ಕಂತೆ ಆಗುತ್ತದೆ. ನಾವು ಪಿಯುಸಿ ಓದೋವಾಗ್ಲೂ ಮೊಬೈಲು, ಮೆಸೇಜು ಇಷ್ಟು ಚೀಪ್ ಆಗಿದ್ದಿದ್ರೆ ನೀನು ನನ್ನವಳಾಗ್ತಿದ್ದೇನೋ ಅಂತ ಮನಸ್ಸು ಬಡಬಡಿಸುತ್ತೆ. ಇಲ್ಲಾಂದ್ರೆ ನಮ್ಮಪ್ಪ ಅಟ್ ಲೀಸ್ಟ್ ನನಗೆ ಮೊಬೈಲ್ ಕೊಡಿಸುವಷ್ಟು ಶ್ರೀಮಂತನಾದರು ಆಗಬೇಕಿತ್ತು.
ನಿನಗೆ ನೆನಪಿದೆಯಾ..? ನಾನು ನಿನ್ನ ಪಕ್ಕದ ಬೆಂಚಿನಲ್ಲೇ ಹುಡುಕಿ ಹುಡುಕಿ ಕೂರುತ್ತಿದೆ. ನಿನ್ನ ಪಕ್ಕದ ಜಾಗ ಹಿಡಿದುಕೊಡಲು ಅರುಣ, ಲೋಕೇಶ ಬಹಳವೇ ಕಷ್ಟಪಡುತ್ತಿದ್ದರು. ಆಗಾಗ ಚೀಣ್ಯ ರವಿಯೂ ಹೆಲ್ಪ್ ಮಾಡ್ತಿದ್ದ . ಪುಟ್ಟ ಪುಟ್ಟ ಕವಿತೆ ಬರೆದು, ಅದರ ಕೆಳಗೆ ನನ್ನ ಹೆಸರು ಬರೆದು. ಹೆಸರಿನ ಕೆಳಗೆ ತುಟಿ, ತುಟಿ ಮೇಲೊಂದು ಚುಕ್ಕಿ ಇಡುತ್ತಿದೆ. ನೀನು ನೋಡಲಿ ಅಂತ. ಒಂದು ದಿನ, ನನ್ನ ಮುಂದಿನ ಬೆಂಚಿನಲ್ಲಿ ಕೂತಿದ್ದ ವೆಂಕಟೇಶ ಬಿಡಿಸುತ್ತಿದ್ದ ಕಾರ್ಟೂನ್ ಅನ್ನು ನೀನು ತಲ್ಲೀನಳಾಗಿ ನೋಡುತ್ತಿದ್ದೆ. ಎಷ್ಟು ಕೋಪ ಬಂದಿತ್ತು ಅಂದ್ರೆ ಅವತ್ತು.. ನಾನೂ ಕಾರ್ಟೂನ್ ಬಿಡಿಸಿದ್ದೆ. ಮಾರಿಗುಡಿ ಲೆಕ್ಚರರ್ ಕಾರ್ಟೂನ್ ಬಿಡಿಸಿ ನೀನು ನೋಡಲಿ ಅಂತ ಹರಸಾಹಸ ಮಾಡಿದ್ದೆ. ಅದನ್ನು ನೋಡಿ ನಿನ್ನ ತುಟಿ ಮೇಲಿನ ಚುಕ್ಕಿಯೂ ನಕ್ಕಿತ್ತು! ಅದೇ ಸ್ಫೂರ್ತಿಯಾಗಿ ಶೀಲಾ ಮೇಡಂ, ನಿನ್ನ ಆಪ್ತ ಗೆಳತಿ ಶೈಲಾ, ಶೈನಿ ಹೀಗೆ ಅವರ ಕಾರ್ಟೂನ್‌ಗಳನ್ನು ಬಿಡಿಸಿದ್ದೆ. ಆ ನಗುವಿಗೆ ಏನಿತ್ತೋ ಅರ್ಥ?
ಚಿತ್ರ ಬಿಡಿಸುವುದು ಎಂದರೆ ವಿಚಿತ್ರವಾಗಿ ಆಡುತ್ತಿದ್ದ ನಾನೇನ ಇದನ್ನೆಲ್ಲಾ ಬಿಡಿಸಿದ್ದು ಎಂದು ಅವತ್ತಿಗೂ, ಇವತ್ತಿಗೂ ನನ್ನಲ್ಲಿ ಆಶ್ಚರ್ಯವಿದೆ. ಎಷ್ಟು ಶಕ್ತಿ ಇತ್ತು ನಿನಗೆ. ನನ್ನಿಂದ ದಿನಕ್ಕೆ ೧೦ -೧೨ ಪುಟಗಳ ಪತ್ರ ಬರೆಸುತ್ತಿದ್ದೆ. ಬೆಳಗ್ಗೆ ೪ಕ್ಕೆ ಎದ್ದು ೨ ಕಿ.ಮೀ ಸೈಕಲ್ ತುಳಿದು, ಲಾರಿ ಹಿಡಿದು, ಸಂಜಯ ಟಾಕೀಸ್‌ಬಳಿಯಿಂದ ಕರ್ನಾಟಕ ಬಾರ್ ಸರ್ಕಲ್ ತನಕ ಓಡೋಡಿ ಬರುತ್ತಿದ್ದೆ. ಕ್ಷಣ ಮಿಸ್ಸಾದರೂ ನೀನು, ನಿನ್ನ ಸ್ಮೈಲು ಎರಡು ಮಿಸ್ಸಾಗುತ್ತಿತ್ತು. ಈಗ್ಲೂ ಹಾಗೇ ಟೈಮ್ ಮೇಂಟೇನ್ ಮಾಡ್ತಿಯಾ?, ನೀನಿರೋ ದೇಶದಲ್ಲಿ ಈಗ ಟೈಮೆಷ್ಟು?
ನೆನಪಾಗ್ತೀನಾ..? ಕಡೇ ಪಕ್ಷ ನನ್ನ ಪತ್ರಗಳನ್ನು ಸುಟ್ಟು ನೀನು ಮಾಡಿಕೊಂಡ ಹಿತವಾದ ಸ್ನಾನವಾದರೂ ನೆನಪಿದೆಯಾ?. ಅವ್ನು ಪತ್ರ ಕಳಿಸೋದು ತಡ ಮಾಡ್ಬಿಟ್ಟ ಅಂತ ನೀನು ಹೇಳುತ್ತಿದ್ದದ್ದು ಮೊದಲು ಕೇಳಿಸಿಕೊಂಡಾಗ ನೋವಿನಲ್ಲೂ ಖುಷಿಯಾಗಿತ್ತು. ಅದ್ಕೆ ಈಗ್ಲೂ ನನಗೆ ಈಗಿನ ಮೊಬೈಲು -ಮೆಸೇಜು ಕುದುರಿಸುವ ಲವ್ ನೋಡಿದಾಗ ಹೊಟ್ಟೆ ಕಿಚ್ಚಾಗುತ್ತೆ. ಹೊಟ್ಟೆ ಕಿಚ್ಚಿನಿಂದಲೇ ಅವರಿಗೆ ಹಾರೈಸ್ತೇನೆ. ಅಮ್ಮ ಮದುವೆ ಆಗು ಅಂತಿದ್ದಾಳೆ. ನಾನು ನಿನ್ನ ಕೇಳಬೇಕು ಅಂತ ಕಾಯ್ತಾ ಇದ್ದೀನಿ ಏನಂತಿಯಾ...?
ಇಂದಿಗೂ ನಿನ್ನ
ಆಕಾಂಕ್ಷಿ

Friday, November 28, 2008

ಯಾಹೂ........!

ನಮ್ಮದೇ ಕೀ ಬೋರ್ಡ್‌ನಲ್ಲಿ ಟೈಪಿಸಿ ಬ್ಲಾಗಿಸುವುದನ್ನು ಗೆಳೆಯ ನೇಸರ ಕಲಿಸಿದ್ದಾನೆ. ಬ್ಲಾಗಿಸುವುದು ಈಗ ಸುಲಭ ಎನಿಸಿದೆ. 3ದಿನಕ್ಕೆ ಒಮ್ಮೆಯಾದರೂ ಬ್ಲಾಗಿಸುವ ಇಚ್ಚೆ ಇದೆ. ನಿಮ್ಮ ಪ್ರೆತ್ಸಾಹ, ತಿದ್ದುವಿಕೆ, ಹಾರೈಕೆ ಹೀಗೆ ಇರಲಿ

6ತಿಂಗಳಿಗೆ ಮಗು ಹುಟ್ಟಿದಾಗ...!


ನಿಜ ಹೇಳಯ್ಯಾ... ಮದುವೆಗೆ ಮೊದಲು ಏನು ನಡೆದಿರಲಿಲ್ವಾ...?
ಇಲ್ಲ ಸರ್..... ಎಂದು ದೈನೇಸಿಯಾಗಿ ಕಳಿದವರನ್ನು ನೋಡುತ್ತಾ ಕಥೆ ಹೇಳಲು ಶುರು ಮಾಡಿದ.
ಹುಡುಗಿ ನೋಡಿ ಬಂದ ಕೆಲವೇ ದಿನದಲ್ಲಿ ಮದುವೆ ಆಗಿ ಹೋಯಿತು. ಆದರೆ, ಮದುವೆಯಾಗಿ 6ತಿಂಗಳಿಗೆ ಆಕೆ ತಾಯಿಯಾಗಿದ್ದಾಳೆ. ಹೆಣ್ಣು ಮಗು ಹೆತ್ತಿದ್ದಾಳೆ. ಆ ಮಗು ನನ್ನದಲ್ಲ. ನನ್ನದಲ್ಲದ ಮಗುವಿಗೆ ತಂದೆ ಹೇಗಾಗಲಿ? ನನಗೆ ಡೈವೋರ್ಸ್ ಕೊಡಿಸಿ ಎಂದು ಅಳು ಮುಖ ಮಾಡಿಕೊಂಡ ಆತ.
ಸರಿ ಹೋಗೋಗು. ವಕಾಲತ್ತು ಹಾಕಿ, ನೋಟಿಸ್ ನೀಡಿದ ನಂತರ ನಿನಗೂ ಡೇಟ್ ತಿಳಿಸ್ತೇನೆ ಎಂದು ಮಾತು ಮುಗಿಸಿದರು ರಾಯಚೂರಿನ ವಕೀಲರು.
ಕಕ್ಷಿದಾರನಿಗೆ ಮಾತು ಕೊಟ್ಟಂತೆಯೇ ವಕೀಲರು ಹೊಸಪೇಟೆಯಲ್ಲಿರುವ ಹುಡುಗಿಯ ಮನೆಗೆ ಡೈವೋರ್ಸ್‌ನ ನೋಟಿಸ್ ರವಾನಿಸಿದರು.
ಹೊಸಪೇಟೆಯ ಖ್ಯಾತ ವಕೀಲರ ಬಳಿಗೆ ಹುಡುಗಿಯ ತಂದೆ ಹೋಗಿ ಎಲ್ಲವನ್ನೂ ಹೇಳಿಕೊಂಡರು. ನೀವೇನೂ ಕಾಳಜಿ ಮಾಡಬೇಡಿ ಅವನಿಗೆ ಸರಿಯಾಗಿ ಮಾಡಿಸೋಣ. ಎನ್ನುತ್ತಲೇ ರಾಯಚೂರಿನ ಪರಿಚಯಸ್ಥ ವಕೀಲರ ವಿಳಾಸದೊಂದಿಗೆ ಶಿಫಾರಸ್ಸು ಪತ್ರವನ್ನೂ ಬರೆದು ಬರೆದುಕೊಟ್ಟರು ಖ್ಯಾತ ವಕೀಲರು.
ಕಡಿಮೆ ಫೀಸು ಪಡೆದು ವಾದಿಸುವ ಲಾಯರ್ ಎಂದೇ ಖ್ಯಾತಿ ಪಡೆದಿದ್ದ ವಕೀಲರ ಮನೆಗೆ ಶಿಫಾರಸ್ಸು ಹಿಡಿದು ಬಂದ ಹುಡುಗಿಯ ತಂದೆ, ಅಳಿಯನ ಗುಣಗಾನ ಶುರು ಮಾಡಿದರು.
`ನನ್ನ ಮಗಳನ್ನು ನೋಡಿದ ದಿನವೇ ಒಪ್ಪಿಕೊಂಡ ಅಳಿಮಯ್ಯ ಒಪ್ಪಂದ ಆಗುವ ಮೊದಲೇ ಮಗಳೊಂದಿಗೆ ಮಾತು ಶುರುವಿಟ್ಟುಕೊಂಡ. ಎಂಗೇಜ್ಮೆಂಟ್ ಆದ ಮೇಲೆ ಜೊತೆಗೆ ಕರೆದುಕೊಂಡು ಓಡಾಡಲು ಶುರು ಮಾಡಿದ. ಪಾರ್ಕ್, ಸಿನಿಮಾ ಪಿಕ್ನಿಕ್‌ಗಳು ಆದವು. ಆಗಲೇ ಚಕ್ಕಂದವೂ ನಡೆದು ಹೋಗಿದೆ. ಮದುವೆ ನಿಶ್ಚಯವಾಗಿತ್ತಲ್ಲ ಮಗಳು ತಲೆ ಕೆಡಿಸಿಕೊಂಡಿಲ್ಲ. ಮದುವೆಯಾದ ಆರು ತಿಂಗಳಿಗೆ ನನ್ನ ಮಗಳು ತಾಯಿಯಾಗಿದ್ದಾಳೆ. ಹೆಣ್ಣು ಹೆತ್ತಿದ್ದಾಳೆ ಎಂದು ಅದಕ್ಕೆ ನಾನು ತಂದೆಯೇ ಅಲ್ಲ ಎಂದು ಆಟ ಶುರು ಮಾಡಿದ್ದಾನೆ. ಡೈವೋರ್ಸ್‌ಗಾಗಿ ನೋಟಿಸ್ 'ಎಂದು ಹೊಸಪೇಟೆಯ ಮಾವನ ಕಥೆ ಕೇಳುತ್ತಿದ್ದಂತೆ ರಾಯಚೂರಿನ ವಕೀಲರಿಗೆ ಏನೋ ಹೊಳೆದಂತೆ ಆಯಿತು.
ಎಲ್ಲಿ ನೋಟಿಸ್ ತಾ ಇಲ್ಲಿ ಎಂದು ನೋಡುತ್ತಿದ್ದಂತೆ ಅವರೇ ದಂಗಾದರು. ಕಾರಣ ಅದು ಅವರೇ ಕಳುಹಿಸಿದ ನೋಟಿಸ್ ಆಗಿತ್ತು. ಅವರ ಕಕ್ಷಿದಾರನ ವಿರುದ್ಧವೇ ಹೊಸಪೇಟೆಯ ವಕೀಲ ಮಿತ್ರರು ಶಿಫಾರಸ್ಸು ಕೊಟ್ಟಿದ್ದರು.
ನೀವು ನನ್ನ ಕಕ್ಷಿದಾರನ ವಿರುದ್ಧವೇ ದೂರು ತಂದಿದ್ದೀರಿ. ಈ ಕೇಸು ತಗೆದುಕೊಂಡರೆ ನನ್ನ ಕಕ್ಷಿದಾರನಿಗೆ ಮೋಸ ಮಾಡಿದಂತೆ. ನನ್ನ ಕಕ್ಷಿದಾರನನ್ನು ಸರಿಯಾಗಿ ವಿಚಾರಿಸಿಯೇ ಕೇಸು ಹಾಕಿದ್ದೀನಿ. ನನ್ನ ಕಕ್ಷಿದಾರನನ್ನು ನಂಬುತ್ತೇನೆ ನೀವು ಬೇರೆ ವಕೀಲರನ್ನು ನೋಡಿಕೊಳ್ಳಿ ಎಂಬ ರಾಯಚೂರಿನ ವಕೀಲರ ಮಾತು ಕೇಳುವ ಸ್ಥಿತಿಯಲ್ಲಿ ಹೊಸಪೇಟೆಯ ಮಾವ ಇರಲಿಲ್ಲ. ಅದೇ ವಕೀಲರಿಗೆ ಹೊಸಪೇಟೆ ಮಾವ ಗಂಟು ಬಿದ್ದರು.
ನಂತರ ರಾಯಚೂರಿನ ಮತ್ತೊಬ್ಬ ವಕೀಲರ ಬಳಿ ಹೋಗುವಂತೆ ಹೇಳಿ ಸಾಗಹಾಕುವಲ್ಲಿ ಕಡಿಮೆ ಫೀಸು ಖ್ಯಾತಿಯ ಪ್ರಮಾಣಿಕ ವಕೀಲರು ಯಶಸ್ವಿಯಾದರು.
ನ್ಯಾಯಾಲಯದಲ್ಲಿ ವಿಚಾರಣೆ ಶುರುವಾಯಿತು.
ಕಡಿಮೆ ಫೀಸು ಖ್ಯಾತಿಯ ಪ್ರಮಾಣಿಕ ವಕೀಲರು ತನ್ನ ಕಕ್ಷಿದಾರನ ಪರವಾಗಿ ಸಮರ್ಥವಾಗಿ ವಾದ ಮಾಡಿಸುವ ಕಾಲಕ್ಕೆ ಸರಿಯಾಗಿ, ಹೊಸಪೇಟೆ ಮಾವನ ವಕೀಲರು ಒಂದಷ್ಟು ಪ್ರೇಮ ಪತ್ರಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದರು.
ಮದುವೆಗೆ ಮುಂಚೆ ರಾಯಚೂರು ಅಳಿಮಯ್ಯನು ಹೊಸಪೇಟೆ ಮಾವನ ಮಗಳಿಗೆ ಬರೆದ ಪ್ರೇಮ ಮತ್ತು ಪ್ರಣಯ ಪತ್ರಗಳು ಅವಾಗಿದ್ದವು. ಮದುವೆಗೆ ಮುಂಚೆಯೇ ಪಿಕ್ನಿಕ್ ಮತ್ತು ಪಾರ್ಕ್‌ಗಳಲ್ಲಿ ಇಬ್ಬರೂ ಕಳೆದ ಮಧುರ ಕ್ಷಣಗಳನ್ನು ನೆನಪಿಸಿಕೊಂಡು ಬರೆದ ಪತ್ರ ಅವಾಗಿದ್ದವು. ಪ್ರಮಾಣಿಕರ ಪರವಾಗಿ ಮಾತ್ರ ವಾದಿಸಬೇಕು ಎಂಬ ನಿಯಮ ರೂಢಿಸಿಕೊಂಡು ಬಂದಿದ್ದ ಕಡಿಮೆ ಫೀಸು ಪಡೆಯುವ ವಕೀಲರಿಗೆ ಆಘಾತವಾಯಿತು. ಕೂಡಲೇ ಅವರು ನೋ ಅಬ್ಜೆಕ್ಷನ್ ಮೈ ಲಾರ್ಡ್ ಎಂದು ಹೇಳಿ ಕೇಸನ್ನು ತಾವಾಗಿಯೇ ಸೋಲಿಗೆ ಒಪ್ಪಿಸಿಕೊಂಡರು.
ಹಾಗೆ ಪ್ರಮಾಣಿಕತೆಗಾಗಿ ಸೋಲು ಒಪ್ಪಿಕೊಂಡವರು ಈಗ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳು. ಹೈಕೋರ್ಟ್‌ನಲ್ಲಿ ಪ್ರಪ್ರಥಮ ಬಾರಿಗೆ ಕನ್ನಡದಲ್ಲಿ ತೀರ್ಪು ಬರೆದವರು ಎಂಬ ಖ್ಯಾತಿಯನ್ನೂ ಪಡೆದಿರುವ ಅರಳಿ ನಾಗರಾಜ್ ಅವರೇ ಆ ರಾಯಚೂರಿನ ಕಡಿಮೆ ಫೀಸು ಪಡೆಯುವ ವಕೀಲರು. ಈ ಕಥೆಯನ್ನು ಧಾರವಾಡದಲ್ಲಿ ಅವರೇ ಹೇಳಿಕೊಂಡು, ವಕೀಲರು ಪ್ರಮಾಣಿಕರಾದರೆ ಸಮಾಜ ಸಾಕಷ್ಟು ಸುಧಾರಿಸುತ್ತದೆ ಎಂದು ಉದಾಹರಣೆಯೊಂದಿಗೆ ಪ್ರತಿಪಾದಿಸಿದರು.
ಅನಿವಾರ್ಯವಾಗಿ ಅಪರಾಧಿ ಪರ ವಕಾಲತ್ತು ವಹಿಸಲೇಬೇಕಾಗಿ ಬಂದಾಗ ಇನ್ನೆಂದೂ ಅಂತಹ ಅಪರಾಧ ಮಾಡುವುದಿಲ್ಲ ಎಂಬ ಮಾತು ಪಡೆದುಕೊಂಡಾದರೂ ವಕಲತ್ತು ವಹಿಸಿ. ಪ್ರಮಾಣಿಕತೆ ಕಷ್ಟವಾದರೂ, ನಿಮ್ಮ ಮನಸಾಕ್ಷಿಗೆ ಇಷ್ಟವಾಗುತ್ತದೆ ಎಂದು ಮಾತು ಮುಗಿಸಿದರು.

Wednesday, November 12, 2008

ಇದೇನಾ...?ಯಾರದೋ ನಗುವಿಗೆ ನಗುತೀವಿ..,


ಕೆಲವೊಮ್ಮೆ ಬೀಳ್ತೀವಿ


ಇನ್ನ್ಯಾರದೋ ಕಣ್ಣೀರಿಗೆ ಕರಗುತೀವಿ


ಕಣ್ಣೀರು ಆಗ್ತೀವಿ


ನಮ್ಮನ್ನು ಪ್ರೀತ್ಸೋರು ನೂರು ಜನ ಇದ್ದರೂ,


ಮತ್ತ್ಯಾರನ್ನೋ ಗೊತ್ತಿಲ್ದೆ ಪ್ರೀತಿಸ್ತೀವಿ


ಅದನ್ನು ಹೇಳೋಕೆ ಆಗದೆ ಸಾಯ್ತೀವಿ


ಬದುಕು ಅಂದ್ರೆ ಇದೇನಾ..? ಇಷ್ಟೇನಾ..?
Thursday, November 6, 2008

ಧನ್ಯವಾದಗಳು

ಏನು ಬರಿಯಬೇಕು ಅನ್ನೋ ಐಡಿಯಾ ಇಲ್ಲದೆ ಶುರು ಆದ ಈ ಬ್ಲಾಗ್ ಗೆ ತುಂಬ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತು. ತೆಗಳಿದವರಿಗೆ, ತಿದ್ದಿದವರಿಗೆ, ಹೊಗಳಿದವ್ರಿಗೆ ಧನ್ಯವಾದಗಳು. ಈ ಟೈಪ್ ಲೇಔಟ್ ನಂಗೆ ಅರ್ಥ ಆಗದೆ ಇದ್ದದ್ದು, ಕವನ ರೂಪದ ಅಕ್ಷರ ಬರೆಸಿತ್ತು. ಈಗೀಗ ಇದು ಅಡ್ಜಸ್ಟ್ ಆಗ್ತಾ ಇದೆ. ಒಂದಷ್ಟು ಐಡಿಯಾ ಬಂದಿದೆ. ಒಂದಷ್ಟು ಘಟನೆಗಳನ್ನು ಕಥೆಯ ರೂಪದಲ್ಲಿ ನಿಮ್ಮ ಮುಂದಿಡುತ್ತೇನೆ. ಟೈಮ್ ಕೊಡಿ ಪ್ಲೀಸ್.........

Wednesday, November 5, 2008

ಬಲಿಯಾಗದಿರಲಿ.....

ತಪ್ಪು ಸರಿ ಎಂಬ ಪ್ರತಿಷ್ಟೆಗೆ
ಬಲಿಯಾಗದಿರಲಿ ಪ್ರೀತಿ
ನಂಬಿಕೆ ಎಂಬ ಬೇಸ್ಮೆಂಟ್
ಮೇಲೆ ಪ್ರೀತಿ ಹುಟ್ಟುತ್ತೆ
ಆ ನಂಬಿಕೆ ಅಲುಗದಿರಲಿ
ಪ್ರೀತಿ ಕಡಿಮೆಯಾದರೂ ಬದುಕಬಹುದು
ನಂಬಿಕೆಯೇ ಹೋದರೆ ....?
ನಾಳೆ ಸೂರ್ಯ ಮತ್ತೆ ಬರುವನೇ
ಎಂಬ ಅನುಮಾನ, ಚಿಂತೆಯಲ್ಲಿ
ಇಂದು ಹಳಾದೀತು.....
ಭವಿಷ್ಯವೂ ಬೋಳಾದೀತು...,
ಅನುಮಾನಗಳ ಹುತ್ತ ಹುಟ್ಟದಿರಲಿ
ನಂಬಿಕೆಯ ನಾವೆಯ ಮೇಲೆ ಪ್ರೀತಿ ಪಯಣ ಸಾಗುತಿರಲಿ

ಯಾರಿಂದ ಯಾರು?

ವ್ಯಕ್ತಿಯಿಂದಲೇ ವಿಚಾರ ಹುಟ್ಟೋದು, ವಿಚಾರದಿಂದ ವ್ಯಕ್ತಿ ಅಲ್ಲ. ವ್ಯಕ್ತಿ ಇದ್ರೆ ವಿಚಾರ ತಂತಾನೇ ಬದಲಾಗಬಹುದು ರೌಡಿ ಸಂತನಾದಂತೆ, ಅಂಗುಲಿಮಾಲ ಬಿಕ್ಕು ಆದಂತೆ. ಇದೊಂಥರಾ..., ಸಿಗರೆಟ್ ಇಂದ ಹೊಗೆಯೇ ಹೊರತು, ಹೊಗೆ ಇಂದ ಸಿಗರೆಟ್ ಅಲ್ಲ.