Friday, May 22, 2009

ಬದಕಿನ ಬಂಡಿ ತಿರುಗಿದೆ ಬೆಂಗಳೂರಿನತ್ತ.......ಕಲಿಸಿ, ಬೆಳೆಸಿದ ಮೈಸೂರು ಬೇಡ ಬೇಡ ಎಂದರೂ ಊರು ಸುತ್ತುವ ಆಸೆಯಿಂದ ಮೈಸೂರು ಬಿಟ್ಟಾಗಲೂ ಕಣ್ಣಲ್ಲಿ ನೀರಿತ್ತು. ಮನಸ್ಸು ಒದ್ದೆ ಮುದ್ದೆ ಮಾಡಿಕೊಂಡು ಧಾರವಾಡಕ್ಕೆ ೨೦೦೭ರ ಮೇ ಒಂದರಂದು ಕಾಲಿರಿಸಿದೆ. ಧಾರವಾಡದಲ್ಲಿ ಆಗಿನ್ನೂ ಬಿಸಿಲು. ಅದು ನಿಗಿ ನಿಗಿ ಉರಿದು ಉತ್ತರ ಕರ್ನಾಟಕದ ಬಿಸಿಲ ಝಲಕ್ ನನಗೆ ಅರಿವಾಗುವ ಹೊತ್ತಿಗೆ ಧಾರವಾಡದ ಮೇಲೆ ಕರಿ ಮೋಡಗಳ ಮೆರವಣಿಗೆ ಶುರುವಾಯಿತು. ಮೋಡಗಳು ಎಂದೂ ಒಂದೊಕ್ಕೊಂದು ಡಿಕ್ಕಿ ಹೊಡೆದು ಸಿಡಾರ್, ಗುಡಾರ್ ಎಂಬ ಸದ್ದು ಹೊರಡಿಸದೇ ಧೋ..ಧೋ... ಎಂದು ಮಳೆ ಸುರಿಸಿತು. ಈ ಊರಲ್ಲಿ ಗುಡುಗು, ಸಿಡಿಲು ಬಾರಿಸುವುದೇ ಇಲ್ಲವಾ ಎಂದನಿಸಿತು.
ಧಾರವಾಡದ ಮಳಿ ನಂಬಬ್ಯಾಡ
ಬೆಳಗಾವಿ ಹುಡುಗಿ ನಂಬಬ್ಯಾಡ
ಎಂಬ ಮಾತುಗಳು ಆಗಾಗ ಮಂದಿ ಆಡತೊಡಗಿದರು. ನಾನು ಮಂಡ್ಯ, ಮೈಸೂರು ಭಾಷೆಯಲ್ಲೇ ಮಾತನಾಡಿದರೆ ಜನ ನನ್ನ ಹೊರಗಿನವ ಎಂದೇ ನೋಡತೊಡಗಿದರು. ನಾನು ಅವರಂತೆಯೇ ಮತಾನಾಡುವುದು ರೂಢಿಸಿಕೊಳ್ಳತೊಡಗಿದೆ. ರೊಟ್ಟಿ ಪಲ್ಲೆ ಇಷ್ಟವಾಯಿತು. ಸಂಜೆ ಹೊತ್ತು ಮಿರ್ಚಿ ಗಿರಮಿಟ್ ಪ್ರಿಯವಾಗತೊಡಗಿತು. ನಾನು ಧಾರವಾಡ ಹಚ್ಚಿಕೊಳ್ಳತೊಡಗಿದೆ.

ಆಗ ತಾನೆ ಹಿಟ್ ಆಗಿದ್ದ ಮುಂಗಾರು ಮಳೆ ಸಿನಿಮಾದ ಅನಿಸುತ್ತಿದೆ ಯಾಕೋ ಇಂದು ಹಾಡಿಗಿಂತ ನನಗೆ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂಬ ಹಾಡೇ ಪ್ರಿಯವಾಗತೊಡಗಿತು. ಕಾರಣ, ಬೆಳಗ್ಗೆ ಕಣ್ಣು ಬಿಡುವ ಹೊತ್ತಿಗೆ ಮಳೆ ಸುರಿಯುತ್ತಿತ್ತು. ಎದ್ದವನೇ ಕಂಪ್ಯೂಟರ್ ಆನ್ ಮಾಡಿ ಮುಂಗಾರು ಮಳೆಯೇ ಹಾಡು ಹಾಕುತ್ತಿದ್ದೆ. ಏಕೋ ಗೊತ್ತಿಲ್ಲ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂಬ ಹಾಡು ಶುರುವಾಗುತ್ತಿದ್ದಂತೆ ಮನೆ ಹಿಂದಿನ ಅಪಾರ್ಟ್‌ಮೆಂಟಿನ ಬಾಲ್ಕನಿಯಲ್ಲಿ ಅವಳು ನಿಂತು ಮಳೆ ನೀರು ಹಿಡಿಯುತ್ತಾ ನಿಲ್ಲುತ್ತಿದ್ದಳು. ಅವಳೂ ಇದೇ ಹಾಡು ಗುನುಗುತ್ತಿದ್ದಳು. ನಾನು ಅದನ್ನು ಮೆರೆಯಲ್ಲೇ ನಿಂತು ನೋಡಬೇಕು. ನಾನು ಕಂಡರೆ ಆಕೆ ಮರೆಯಾಗಿ ಬಿಡುತ್ತಿದ್ದಳು. ಆ ಮಳೆ ಅವಳಿಗೆ ಅದ್ಯಾವ ನೆನಪು ತರಿಸುತಿತ್ತೋ...? ಮಳೆ ಮುಗಿಯುವ ಹೊತ್ತಿಗೆ ಅವಳ ಇಹ ಪರ. ಅವಳ ಇಂಜಿನಿಯರಿಂಗ್ ಕಾಲೇಜಿನ ಹುಡುಗ ಎಲ್ಲರೂ ಗೊತ್ತಾದರು.
ಮಳೆ ತನ್ನ ಬಿರುಸು ಕಳೆದುಕೊಳ್ಳುವ ಹೊತ್ತಿಗೆ ನನ್ನ ನೆರಳಿನಂತೆಯೇ ಕಾಯುವ ಗೆಳೆಯ ಕಲಂದರ್ ನನಗೆ ಮಳೆಯಲ್ಲೇ ಅರ್ಧ ಧಾರವಾಡ ತೋರಿಸಿದ್ದರು. ಊರು ನೋಡು ನೋಡುತ್ತಾ ಕಣ್ಮಣಿಗೂ ತೋರಿಸುತ್ತಾ ಮಳೆಯಲ್ಲೇ ತಿರುಗಾಡಿದೆ. ಮಳೆ ಮುಗಿದು ಚಳಿ ಆವರಿಸುವ ಹೊತ್ತಿಗೆ ಕಣ್ಮಣಿ ಆರೋಗ್ಯ ಸುಧಾರಿಸಿ, ಟಾಟಾ ಹೇಳಿಯಾಗಿತ್ತು. ಆದರೆ, ಬೆಳ ಬೆಳಗ್ಗೆ ಏಳುವ ಚಟ ಹೋಗಿರಲಿಲ್ಲ. ನಮ್ಮ ಹುಬ್ಬಳ್ಳಿ ಆವೃತ್ತಿಯೂ ಶುರುವಾಗಿತ್ತು. ಕೆಲಸದ ಜವಾಬ್ದಾರಿ ಜೊತೆಗೆ, ಅಷ್ಟರಲ್ಲಿ ಸರ್ಕ್ಯೂಲೇಷನ್ ವಿಭಾಗಕ್ಕೆ ನಮ್ಮ ಚಿಕ್ಕಮಠ ಬಂದು ರೂಂ ಮೇಟ್ ಆದ. ಟಾಟಾ ಮರೆತು ಕೆಲಸದಲ್ಲಿ ಸಕ್ರಿಯನಾದೆ. ಧಾರವಾಡದ ಊರೂರು ಸುತ್ತುತ್ತಾ ವಿಶೇಷ ವರದಿಗಳ ಹೆಕ್ಕಿ ತಂದೆ. ಇವ ಸಣ್ಣ ಹುಡುಗ ಅಂದುಕೊಂಡವರು ಮೆಚ್ಚುಗೆಯಿಂದ ನೋಡ ತೊಡಗಿದರು. ಕೆಲವರು ಸಣ್ಣ ಕಿರಿಕಿರಿ ಮಾಡಿದರು. ಅದು ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ಒಂದು ವರ್ಷ ಕಳೆಯುವುದರ ಒಳಗೆ ನಾನು ಧಾರವಾಡಿಗನಾಗಿದ್ದೆ.
ಧಾರವಾಡದ ಸುದ್ದಿಗಾರರ ಪೈಕಿ ನಾನೇ ಅತಿ ಚಿಕ್ಕ ವಯಸ್ಸಿನವನಿದ್ದೆ. ಒಂದು ವರ್ಷ ಕಳೆಯುವುದರೊಳಗೆ ಧಾರವಾಡ ಮೀಡಿಯಾದಲ್ಲಿ ಹೊಸಬರು ಬಂದರು. ನಾನು ಹಳಬನಾಗಿದ್ದೆ. ಪತ್ರಕರ್ತರೆಲ್ಲರ ಮಿತ್ರ ಡಾ. ಶ್ಯಾಮಮೂರ್ತಿ ನಾಯಕ ಅಚ್ಚುಮೆಚ್ಚಾಗಿದ್ದ. ಆವರ ೭೫ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದೆವು. ಎದುರಾದ ಸವಾಲುಗಳೆಲ್ಲಾ ನನ್ನ ಗಟ್ಟಿಯಾಗಿಸಿದವು. ಮಧ್ಯೆ ಬೇರೆಲ್ಲೋ ಅಲೆಯುವ ಆಸೆಯಾಗಿ ಮತ್ತೆ ಧಾರವಾಡಕ್ಕೆ ಮರಳಿದ್ದೆ. ಚುನಾವಣೆ ಕೆಲಸಗಳಿಗಾಗಿ ಬೆಳಗಾವಿ ಜಿಲ್ಲೆ ಸುತ್ತಾಡುವ ಅವಕಾಶ ಸಿಕ್ಕಿತು. ಈಗ ಮತ್ತೆ ಧಾರವಾಡದ ಮೇಲೆ ಕರಿ ಮೋಡಗಳ ಮೆರವಣಿಗೆ ಶುರುವಾಗಿದೆ. ಆದರೆ, ಈ ಬಾರಿ ಸಿಡಿಲು ಗುಡುಗು ಜೋರಾಗಿದೆ. ನನ್ನ ನಿರೀಕ್ಷೆ, ಬೇಡಿಕೆಯಂತೆಯೇ ಬೆಂಗಳೂರಿಗೆ ಬಾ ಎಂದು ಸಂಪಾದಕರು ಸೂಚಿಸಿದ್ದಾರೆ. ನನ್ನ ಬದುಕಿನ ಬಂಡಿ ಬೆಂಗಳೂರಿನತ್ತ ಹೊರಟಿದೆ. ಆದರೆ, ಇಲ್ಲಿ ಸಿಕ್ಕ ಗೆಳೆಯರು ಸಂಖ್ಯೆ, ಅವರು ತೋರಿದ ಪ್ರೀತಿ, ವಿಶ್ವಾಸ ಅಪಾರ. ಅವರ ಹೆಸರು ಬರೆದರೇ ಒಂದು ಪುಟವಾಗುತ್ತೆ. ಆ ಎಲ್ಲ ಗೆಳೆಯರ ಒಡನಾಟ, ಮಾತುಗಳು ಕೈ ಜಗ್ಗುತ್ತಿದೆ. ಕಣ್ಣಲ್ಲಿ ನನಗೇ ಗೊತ್ತಿಲದೆ ಹನಿಗೂಡಿ ವಿದಾಯ ಹೇಳುತ್ತಿವೆ. ನನ್ನೂರಿನ ಗೆಳೆಯರಿಗೆ ನಾನು ಬೆಂಗಳೂರಿಗೆ ಬರುತ್ತಿರುವುದು ಖುಷಿ. ಇಲ್ಲಿನ ಗೆಳೆಯರಿಗೆ ಕಷ್ಟ. ನನಗೆ ಎರಡೂ ಆಗುತ್ತಿದೆ. ಆದರೆ, ಧಾರವಾಡದ ಮೇಲಿನ ಮೂಹ ಎಷ್ಟಿದೆಯೆಂದರೇ.. ಐದು ದಿನಗಳಿಂದ ಯಾಕೋ ಊರಿಗೆ ಫೋನ್ ಮಾಡಿಲ್ಲ. ಅಲ್ಲಿ ಸಂಭ್ರಮದ ಮಾತು ಕೇಳಿ ಬರುತ್ತವೆ. ಯಾಕೋ ಫೋನ್ ಮಾಡಬೇಕು ಅನಿಸುತ್ತಲೂ ಇಲ್ಲ. ಎಮೋಷನಲ್ ಫೂಲ್ ಆಗಬೇಡ ಎಂಬ ಕಣ್ಮಣಿಯ ಮಾತುಗಳು ನೆನಪಾಗುತ್ತವೆ. ಸವಿ ನೆನಪುಗಳ ಹೊತ್ತು ಬೆಂಗಳೂರಿಗೆ ಹೊರಟಿದ್ದೇನೆ. ಮತ್ತೆ ಮಳೆ ಉಯ್ಯುತ್ತಿದೆ, ಎಲ್ಲಾ ನೆನಪಾಗುತ್ತಿದೆ....,

Sunday, May 3, 2009

ಸಂಬಳ ಹೆಚ್ಚು ಅಂತ ಹೆಣ್ಣು ಕೊಡಲಿಲ್ಲ!


ಸಂಬಳ ಕಡಿಮೆ ಅಂತ ಪತ್ರಕರ್ತರಿಗೆ, ಪತ್ರಿಕೆಯಲ್ಲಿ ಕೆಲಸ ಮಾಡುವವರಿಗೆ ಹೆಣ್ಣು ಕೊಡುತ್ತಿರಲಿಲ್ಲ. ಪತ್ರಕರ್ತರೊಬ್ಬರು ಹೆಣ್ಣು ನೋಡಲು ಹೋದಾಗ, ‘ಪತ್ರಿಕೆಯಲ್ಲಿ ಕೆಲಸ ಮಾಡೋದೇನೋ ಸರಿ. ಜೀವನಕ್ಕೆ ಏನು ಮಾಡ್ತೀರಿ’ ಅಂತ ಒಬ್ಬರು ಕೇಳಿದ್ದರಂತೆ ಎಂಬುದು ಪತ್ರಿಕೋದ್ಯಮದಲ್ಲಿ ಚಾಲ್ತಿಯಲ್ಲಿರುವ ಹಳೆಯ ಘಟನೆ.

ಆದರೆ, ನನ್ನ ಗೆಳೆಯನೊಬ್ಬನಿಗೆ ಸಂಬಳ ಹೆಚ್ಚು ಅನ್ನೋ ಕಾರಣಕ್ಕೆ ಹೆಣ್ಣು ಕೊಡಲಿಲ್ಲ. ಅವನಿಗೆ ಮೂವತ್ತು ಸಾವಿರ ಸಂಬಳ ಬರುತ್ತದೆ ಎಂದರೆ ನಂಬಲು ಹೆಣ್ಣಿನ ಕಡೆಯವರಿಗೆ ಸಾಧ್ಯವೇ ಆಗಲಿಲ್ಲ. ಕೊನೆಗೆ ಈ ಪರಿ ಸುಳ್ಳು ಹೇಳೋ ಗಂಡಿಗೆ ಹೆಣ್ಣು ಕೊಡಲ್ಲ ಎಂದು ಬಿಟ್ಟರು!.

ಹೌದು, ನಾನು ಧಾರವಾಡಕ್ಕೆ ಬಂದ ಐದು ತಿಂಗಳಲ್ಲಿ ಸರ್ಕ್ಯೂಲೇಶನ್ ವಿಭಾಗಕ್ಕೆ ಶಿವಾನಂದ ಚಿಕ್ಕಮಠ ನೇಮಕವಾಯಿತು. ಆತ ಬರಿಯ ಸಹೋದ್ಯೋಗಿಯಾಗದೆ ನನ್ನ ರೂಂಮೇಟ್ ಆದ. ಹೋಗಿ -ಬನ್ನಿ ಮಾಯಾವಾಗಿ ಹೋಗಲೇ ಅನ್ನುವಷ್ಟು ಆತ್ಮೀಯರಾದೆವು. ಆತನಿಗೆ ಬರವಣಿಗೆಯ ಮೋಹವೂ ಇದ್ದುದ್ದರಿಂದ ನನ್ನ ಕೆಲಸದಲ್ಲಿ ಅವನು, ನಾನು ಅವನ ಕೆಲಸದಲ್ಲಿ ಕೈ ಜೋಡಿಸುತ್ತಿದ್ದೆವು. ಒಂದು ದಿನ ಧಾರವಾಡ ರೈಲ್ವೆ ಸ್ಟೇಷನ್‌ನಲ್ಲಿ ನಾನು ಟೋಪಿ ಧರಿಸಿ ಪೇಪರ್ ಮಾರುವಂತೆಯೂ ಮಾಡಿದ್ದ. ಕೆಲಸದಲ್ಲಿ ದೈತ್ಯ ಆತ.

ಸುಮಾರು ಒಂದು ವರ್ಷದಲ್ಲಿ ಆತನ ದೈತ್ಯ ಕೆಲಸ ಕೇಂದ್ರ ಸರ್ಕಾರಿ ನೌಕರಿ ಎಂದೇ ಕರೆಯಿಸಿಕೊಳ್ಳುವ ಇಂಗ್ಲಿಷ್‌ನ ದಿ ಹಿಂದು ಪತ್ರಿಕೆಯವರಿಗೆ ಇಷ್ಟವಾಗಿ ನೇಮಿಸಿಕೊಂಡರು. ನಮ್ಮಲ್ಲಿ ಟಿಎ ಡಿಎ ಎಲ್ಲಾ ಸೇರಿ ಹತ್ತು ಸಾವಿರ ರು.ವರೆಗೆ ಸಂಬಳ ಬರುವುದು ಕಷ್ಟವಿತ್ತು. ಆದರೆ, ದಿ ಹಿಂದು ಪತ್ರಿಕೆಯಲ್ಲಿ ಆತ ಟಿಎ ಡಿಎ ಎಲ್ಲಾ ಸೇರಿ ತಿಂಗಳಿಗೆ ಮೂವತ್ತು ಸಾವಿರ ರು.ವರೆಗೂ ಪಡೆಯುತ್ತಾನೆ. ಅದೇ ಸತ್ಯವನ್ನು ಹೆಣ್ಣಿನ ಕಡೆಯವರಿಗೆ ನಂಬಲಾಗಲಿಲ್ಲ. ಒಮ್ಮೆ ನೇರವಾಗಿಯೇ, ತಮಾಷೆ ಬೇಡ ಸರಿಯಾಗಿ ಹೇಳಿ ಎಂದು ಕೇಳಿದ್ದಾರೆ. ಪೇಪರ್ ಕೆಲಸದಲ್ಲಿ ಇಷ್ಟು ಕೊಡುವುದು ಸಾಧ್ಯವೇ ಇಲ್ಲ ಎಂದು ವಾದಿಸಿದ್ದಾರೆ. ಆತ ಕಚೇರಿಯಲ್ಲಿ ಇಲ್ಲದ ಸಮಯ ನೋಡಿ ಅವರ ಮೇಲಿನವರಲ್ಲಿ ವಿಚಾರಿಸಿದ್ದಾರೆ. ಅವರು ಸಂಬಳದ ಮೊತ್ತ ಅಷ್ಟೇ ಹೇಳಿದ್ದಾರೆ. ಕೊನೆಗೆ ಮದುವೆ ದಲ್ಲಾಳಿಯ ಬಳಿ, ‘ಮದುವೆಗೆ ಮೊದಲೆ ಈ ಪರಿ ಸುಳ್ಳು ಹೇಳ್ತಾರಲ್ರಿ. ಅವರ ಆಫೀಸಲ್ಲೂ ಅಡ್ಜಸ್ಟ್ ಮಾಡಿಸ್ಯಾನ. ಹೆಣ್ಣು ಕೊಡಲ್ಲ’ ಅಂದು ಬಿಟ್ಟರಂತೆ.

ನನಗೆ ಫೋನ್ ಮಾಡಿ ಹೇಳಿದಾಗ ಇಬ್ಬರೂ ಜೋರಾಗಿ ನಕ್ಕಿದ್ದೆವು. ಕೈಯಾಗ ರೊಕ್ಕ ಇಲ್ಲದ ಕಾಲದಾಗೂ ಹೆಣ್ಣು ಕೊಡಲಿಲ್ಲ, ರೊಕ್ಕ ಐತಿ ಅಂದ್ರು ಕೊಡ್ತಿಲ್ವಲ್ಲ ಎಂದು ನಗುತ್ತಲೇ ವಿಷಾದ ವ್ಯಕ್ತಪಡಿಸಿದ್ದ. ಆ ಶಿವಾನಂದನಿಗೆ ಕೊನೆಗೂ ಜಮಖಂಡಿ ಬಳಿಯ ಹೆಣ್ಣು ಗೊತ್ತಾಗಿದೆ. ಮೇ 26ರಂದು ಬೆಳಗಾವಿಯಲ್ಲಿ ಮದುವೆ. ಆದರೆ, ನಮ್ಮ ಶಿವಾನಂದನಿಗೆ ಒಂದು ಡೌಟು -‘ಆ ಹುಡುಗಿಗೆ ಟೇಸ್ಟೆ ಇಲ್ಲ ಅನ್ಸುತ್ತಾ ಇದೆ. ಸುಮಾರು ನೂರು ಹುಡುಗಿಯರನ್ನು ನೋಡಿದೆ. ಎಲ್ಲರಿಂದಲೂ ತಿರಸ್ಕೃತನಾದ ನನ್ನನ್ನು ಅಷ್ಟು ಚೆನ್ನಾಗಿ ಇರೋ ಹುಡುಗಿ ಒಪ್ಯಾಳಲ್ಲ. ಕೇಳೇ ಬಿಡ್ಲಾ ಅವಳ್ನಾ..’ಎಂದ. ಬೇಡ ಇರು ಗುರು ಮದುವೆ ಆದ್ಮೇಲೆ ಕೇಳು. ಆಮೇಲೆ ಅವಳು ಬ್ಯಾಡ ಅಂದಾಳು ಎಂದು ನಕ್ಕೆವು. ಇಷ್ಟು ದಿನ ಇಬ್ಬರು ಸೇರಿದರೆ ನಗುವುದೇ ಕಾಯಕವಾಗಿತ್ತು. ಮೇ 26ರಂದು ಕೊನೆಯ ಬಾರಿ ನಕ್ಕು ಬಿಡು ಎಂದಿದ್ದೇನೆ. ನಿನ್ನ ನಗುವಿಗೂ ಕೊನೆ ಹೇಳ್ತೀನಿ ಅಂತ ಶಪಥ ಮಾಡ್ಯಾನ. ಶಪಥ ಸುಳ್ಳಾಗಿ, ಅವನ ಹೊಸ ಜೀವನಕ್ಕೆ ಒಳ್ಳೆಯದಾಗಲಿ. ನಗು ಜಾರಿಯಲ್ಲಿರಲಿ...,