Wednesday, December 31, 2008

ಕಳೆಯಿತು ಮತ್ತೊಂದು ವರ್ಷ


ಕಳೆಯಿತು ಮತ್ತೊಂದು ವರ್ಷ
ಹರ್ಷವೂ ಇತ್ತು, ಸಮಸ್ಯೆಗಳ ವರ್ಷವೂ ಇತ್ತು ಯುಗಾದಿಯಂತೆ. ಮತ್ತೆ ಗೋಡೆ ಮೇಲಿನ ಕ್ಯಾಲೆಂಡರ್ ಬದಲಿಸಿ ಹೊಸ ವರ್ಷ ಬರಮಾಡಿಕೊಳ್ಳುತ್ತಿದ್ದೇವೆ
ಈ ವರ್ಷವಾದರೂ ಹರ್ಷ ಹೆಚ್ಚಾಗಿರಲಿ. ಬೇವೂ ಇರಲಿ, ಇಲ್ಲದಿದ್ದರೆ ಬೆಲ್ಲದ ಸವಿ ಗೊತ್ತಾದೀತು ಹೇಗೆ?
2008ರ ಅಂತ್ಯದ ತಿಂಗಳು ನನಗೆ ನಾನಾ ಅನುಭವ ನೀಡಿತು. ವಿವಾದಿತ ಸುದ್ದಿಯೊಂದರ ಬೆನ್ನತ್ತಿದ್ದು, ನಂತರ ಅರಬಾವಿ ಚುನಾವಣಾ ವರದಿಗೆ ತೆರಳಿ ಸಾಕಷ್ಟು ಅನುಭವ ಪಡೆದುಕೊಂಡು ಬಂದೆ. ಒಂದಿಷ್ಟು ರೋಚಕ ಕಥೆಗಳನ್ನು ಗೋಕಾಕದಲ್ಲಿ ಕೇಳಿ ಬಂದಿದ್ದೇನೆ. ಅವೆಲ್ಲವನ್ನೂ ಹೇಳಿಕೊಳ್ಳುವ ಆಶಯವಿದ. 2009ರಲ್ಲಿ ನಾನು ನಿಮಗೆ ಕಥೆ ಹಳಿ ಕಾಡುತ್ತೇನೆ. ಸಹಿಸಿಕೊಳ್ಳಿ.
2008ರಲ್ಲಿ ನನ್ನ ಟೀಕಿಸಿ ತಪ್ಪು ತಿದ್ದಿಕೊಳ್ಳುವಂತೆ ಮಾಡಿದವರಿಗೆ, ಸವಾಲು ಹಾಕಿ ನನ್ನ ಶಕ್ತಿ, ದೌರ್ಬಲ್ಯ ತಿಳಿಸಿಕೊಟ್ಟವರಿಗೆ, ನಿಂದಿಸುವವರೆ ಹೆಚ್ಚಿದ್ದಾಗ ಮೆಚ್ಚಿ ಬೆನ್ನು ತಟ್ಟಿದವರಿಗೆ, ನಾನು ಏನೇ ಮಾಡಿದರೂ ಸಲಹುವ, ಪ್ರೀತಿಸುವ ಅವ್ವ, ಅಪ್ಪ, ತರಲೆ ತಮ್ಮ ಹಾಗೂ ಅಸಂಖ್ಯ ಗೆಳೆಯರಿಗೆ ಧನ್ಯವಾದಗಳು. ಇಂಥದಕ್ಕೆಲ್ಲಾ ಕಾರಣವಾಗಿರುವ ನನ್ನ ಸಂಸ್ಥೆಗೆ, ಸಹೋದ್ಯಗಿಗಳಿಗೆ 2009 ಒಳಿತು ಮಾಡಲಿ. ನಿಮ್ಮ ಕನಸುಗಳು ನನಸಾಗಲಿ, ನಿಮ್ಮ ಗುರಿಗಳಿಗೆ ನೀವು ತಲುಪಿಕೊಳ್ಳಿ ಎಂಬ ಹಾರೈಕೆಯೊಂದಿಗೆ...,

Tuesday, December 9, 2008

ಹೋಕೈತ್ರಿ, ಹೋಟೆಲ ಧಾರವಾಡದಲ್ಲೂ ಹೋಗ್ತಾ ಇದೆ ರೀ..,




"ಬಸವೇಶ್ವರ ಹೋಟೆಲ್ದಾಗ ನಾಷ್ಟಾ ಮಾಡಿ ಹೋಕೀನಿ. ನೀನೂ ಹೋಟಲ್ಗಾ ಬಂದ್ಬುಡ್ರಲಾ. ಅಲ್ಲಿ ದೀಡ್ ರೂಪಾಯ್ಗೊಂದು ಇಡ್ಲಿ ಸಿಕ್ತಾವು. ಪೌಣೆ ರುಪಾಯ್ಗೆ ಚಾ ಸಿಕ್ತಾವು. ಹೋಟೆಲ ಬಾಜೂಕ ಬಸ್ ಬರ್‍ತಾವು, ಅಲ್ಲಿಂದಲೇ ಶಾಲಿಗೆ ಹೋಗುವಂತೆ. ನಾ ಎಮ್ಮಿಕೆರಿಗೆ ಹೋಕೀನಿ. ಏನ್ ಮಾಡ್ಲಿಕತ್ತಿ ಲಘುನ ಬಾ"....
ಇದು ಹುಬ್ಬಳ್ಳಿ -ಧಾರವಾಡ ಸೊಗಡಿನ ಭಾಷೆ. ವ್ಯಂಜನಗಳ ಹಂಗಿಲ್ಲ. ಶಬ್ಧಗಳನ್ನು ಅರ್ಧ ಉಚ್ಛರಿಸಿ ಗೊತ್ತಿಲ್ಲ. ಅವರ ಹೃದಯ ವೈಶ್ಯಾಲ್ಯದಂತೆಯೇ ಪದ ಉಚ್ಛಾರದಲ್ಲೂ ಇಲ್ಲಿನವರು ಜಿಪುಣರಲ್ಲ. ಕೆಲವು ನಾಮಪದಗಳನ್ನು ಉಚ್ಛರಿಸುವ ಕೊನೆಯಲ್ಲಿ 'ಇ' 'ಈ' ಕಾರ ಬಳಸುತ್ತಿದ್ದರು. ಮಾತುಕತೆಯ ವೇಳೆ ಹೇರಳವಾಗಿ ಮರಾಠಿ ಹಾಗೂ ಹಿಂದಿ ಪದಗಳು ಬಳಕೆಗೆ ಬರುತ್ತಿದ್ದವು. ಈ ಶೈಲಿ ನಿಧಾನವಾಗಿ ಮಾಯವಾಗುತ್ತಿದೆ.
ಇನ್ನು ಹತ್ತಿಪ್ಪುತ್ತು ವರ್ಷಗಳಿಗೆ ಈ , ಭಾಷೆ , ಈ ಸೊಗಡು ಇತಿಹಾಸ ಆಗುತ್ತದೆ. ಈ ಸೊಗಡಿನಲ್ಲಿ ಬರೆದಿರುವ ಪುಸ್ತಕ, ಕರಪತ್ರ ಸಿಕ್ಕರೆ ಮುಂದಿನ ತಲೆ ಮಾರಿನವರು ನಾವುಗಳು ಈಗ ಹಳಗನ್ನಡದ ಶಾಸನ ಓದಲು ತಡವರಿಸುವಂತೆಯೇ ತಡವರಿಸುವ ಕಾಲ ಬಂದರೂ ಆಶ್ಚರ್ಯವಿಲ್ಲ. ಹಾಗೆ ಇಲ್ಲಿ ಭಾಷೆ ಬದಲಾಗುತ್ತಿದೆ.
ಹಳೇ ಮೈಸೂರು ಭಾಗದ, ರಾಜಧಾನಿ ಬೆಂಗಳೂರಿನಂತೆ ಇಲ್ಲಿನ ಭಾಷೆಯಲ್ಲಿ ಈಗ ಹೇರಳವಾಗಿ ಇಂಗ್ಲಿಷ್ ಬಳಕೆಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಫ್ಲೆಕ್ಸ್ ಬೋರ್ಡುಗಳು ಬಂದು ಇಲ್ಲಿನವರನ್ನು ವ್ಯಂಜನ ಬಳಸುವಂತೆ, ಪದ ಬಳಕೆಯಲ್ಲಿ ಜಿಪುಣರಾಗುವಂತೆ ಮಾಡಿದೆ.
ವೋಡಾಫೋನ್, ಏರ್‌ಟೆಲ್ ಕಂಪನಿಯ ಬೋರ್ಡುಗಳನ್ನು ಇಲ್ಲಿಯ ಪ್ರಕಾರ ಬರೆದರೆ ವೋಡಾಫೋನ, ಏರಟೆಲ ಎಂದು ಬರೆಯಬೇಕಿತ್ತು. ಆ ರೀತಿಯ ಒಂದೇ ಒಂದು ಬೋರ್ಡು ಕಾಣ ಸಿಗುವುದಿಲ್ಲ. ಇದು ಉದಾಹರಣೆ ಮಾತ್ರ. ಹೋಟೆಲ್, ರೆಸ್ಟೋರಂಟ್, ಕ್ಲಿನಿಕ್ ಎಂಬ ಪದಗಳು ಚಾಲ್ತಿಗೆ ಬಂದಿವೆ. ಇದಕ್ಕೆ ಮೊದಲ ಕಾರಣ ಬೆಂಗಳೂರಲ್ಲೇ ತಯಾರಿಗೆ ಬರುವ ಫ್ಲೆಕ್ಸ್ ಬೋರ್ಡು.
ಇನ್ನು ಭಾಷೆಯಲ್ಲಿನ ಬದಲಾವಣಗೆ ಮೊದಲ ಕೊಡುಗೆ ಟಿವಿ ಮತ್ತು ಸಿನಿಮಾದ್ದು. ನಂತರದ್ದು ಇಲ್ಲಿನವರು ನೌಕರಿಗಾಗಿ ಬೆಂಗಳೂರಿಗೆ ಹೋಗಿ ನೆಲೆಸಿದ್ದು. ಇಲ್ಲಿನ ಸೊಗಡಿನ ಭಾಷೆಗೆ ಅಲ್ಲಿನ ಮಂದಿ ನಕ್ಕಿದ್ದರಿಂದ ಅನಿವಾರ್ಯವಾಗಿ ಬೆಂಗಳೂರಿನ ಭಾಷೆ ವಾತಾವರಣಕ್ಕೆ ಒಗ್ಗಿಕೊಂಡಿದ್ದು ಎನ್ನುತ್ತಾರೆ .
?ಹೋಟೆಲ, ವೋಲಸೇಲ, ಗಜಾನನ ಟ್ರೇಡರ್ಸ, ಮೊಬೈಲ ಪಾಯಿಂಟ, ಎಲೆಕ್ಟ್ರಾನಿಕ್ಸ, ಬ್ಯಾಳಿ, ಬಾಳಿಹಣ್ಣು? ಇತ್ಯಾದಿ ಇಲ್ಲಿನ ಸೊಗಡಿನ ಪದಗಳು ಇನ್ನು ಕೆಲವೆಡೆ ಕಾಣಸಿಗುತ್ತವೆ. ಕಾರಣ ಅವನ್ನು ಇಲ್ಲಿನ ಕಲಾವಿದರ ಕೈಯಲ್ಲಿ ಬರೆಸಿರುತ್ತಾರೆ. ಅಥವಾ ಇತ್ತೀಚೆಗೆ ಈ ಕಡೆಗೂ ಬಂದಿರುವ ಫ್ಲೆಕ್ಸ್ ಮುದ್ರಣದಿಂದ ಅವರು ಸಿದ್ಧಗೊಂಡಿರುತ್ತವೆ.
ಕೆಲವೇ ಕೆಲವು ಸಿನಿಮಾ ಧಾರವಾಹಿ ಬಿಟ್ಟರೆ ಬೇರೆಲ್ಲೂ ಇಲ್ಲಿನ ಭಾಷೆ ಬಳಕೆಯಾಗುತ್ತಿಲ್ಲ. ಇಲ್ಲಿಂದ ಹೋದ ಕಲಾವಿದರು ಈ ಬಗ್ಗೆ ಗಂಭೀರ ಪ್ರಯತ್ನ ಮಾಡಿಲ್ಲ. ಎಲ್ಲಕ್ಕೂ ಗೇಲಿಯ ಹಿಂಜರಿಕೆ ಕಾರಣ. ಸಿದ್ದಲಿಂಗ ಪಟ್ಟಣಶೆಟ್ಟರು ಇಲ್ಲಿಯದೇ ಭಾಷೆಯಲ್ಲಿ ಬರೆಯುತ್ತಿದ್ದ ?ಚಹಾದ ಜೋಡಿ ಚೂಡದ್ಹಾಂಗ? ಜನಪ್ರಿಯವಾಗಿತ್ತು.
ಜಾಗತೀಕರಣದ ಹೊಡೆತದಿಂದ ದೇಶದೆಲ್ಲಡೆ ಸಾಂಸ್ಕೃತಿಕ ಪಲ್ಲಟ ನಡೆಯುತ್ತಿರುವಂತೆಯೇ, ಹುಬ್ಬಳ್ಳಿ -ಧಾರವಾಡದ ಭಾಷೆಯ ಅನನ್ಯತೆ, ಸೊಗಡು ಮಾಯವಾಗುತ್ತಿದೆ
. ಅನ್ಯನತೆ ಉಳಿಸಿಕೊಳ್ಳಬೇಕಾ? ತಂತ್ರಜ್ಞಾನ -ಮಾಧ್ಯಮಗಳು ಬಡಿಸುತ್ತಿರುವ ರೆಡಿಮೇಡ್ ಭಾಷೆಯನ್ನೇ ಅಳವಡಿಸಿಕೊಳ್ಳಬೇಕಾ? ಯಾವುದು ಶುದ್ಧ? ಯಾವುದು ಅಶುದ್ಧ? ಎಂಬ ಪ್ರಶ್ನೆಗಳು ಏಳುವುದುಂಟು. ಇದಾವ ಪ್ರಶ್ನೆಗಳಿಗೂ ಕಿವಿ ಕೊಡುವ ವ್ಯವಧಾನವೂ ಇಲ್ಲದೆ ಇಲ್ಲಿ ಭಾಷೆ ಬದಲಾಗುತ್ತಿದೆ. ಬದಲಾವಣೆ ಮಾತ್ರ ಶಾಶ್ವತ ಎನಿಸುವುದಿಲ್ಲವೇ...?

Thursday, December 4, 2008

ಅವಳಿಗಾಗಿ ನೊಣವಾದನು...!

ಸೇವಂತಿ...
ಹೆಸರಿಗೆ ತಕ್ಕ ಹಾಗೇ ಇದ್ಧಳು. ನೋಡಿದರೇ ನೋಡುತ್ತಲೇ ಇರಬೇಕು ಎಂಬ ಆಸೆ ಇಡಿಯಾಗಿ ಆವರಿಸುವಂತೆ ಇದ್ದಳು. ಸೇವಂತಿಯ ಮನೆಯ ಬೀದಿಯ ಕೊನೆಗೇ ಸಂತೋಷನ ಮನೆ. ನೋಡಿದರೆ ಸಂತೋಷ ಆಗುವಂತೆಯೇ ಸ್ಮಾರ್ಟ್ ಇದ್ದ.
ಇಬ್ಬರು ಒಂದೇ ಸ್ಕೂಲಿನಲ್ಲಿ ಓದಿರಾದರೂ ಅವರಿಬ್ಬರೂ ಹತ್ತಿರಾದದ್ದು ಪಿಯುಸಿಗೆ ಬಂದ ಮೇಲೆಯೇ. ಸೇವಂತಿ ತಾನೂ ಸದ್ಯಕ್ಕೆ ಆ ಏರಿಯಾದ ಸುರಸುಂದರಿ ಎಂದು ಗೊತ್ತಿದ್ದೂ, ಸಿಂಪಲ್ ಆಗಿ ಎಲ್ಲರೊಂದಿಗೆ ಬೆರೆಯುತ್ತಿದ್ದಳು. ಅದೇ ರೀತಿಯಾಗಿ ಸಂತೋಷನಿಗೂ ಹತ್ತಿರಾದಳು. ಆದರೆ, ಸಂತೋಷ ಮನದಲ್ಲಿನ ಪ್ರೀತಿ - ಪ್ರೇಮ - ಪ್ರಣಯದ ಆಸೆಯನ್ನು ಹೇಳಿಕೊಳ್ಳಲು ಆಗಲೇ ಇಲ್ಲ. ಒಂದು ಶನಿವಾರ ಸೇವಂತಿ ಸ್ನಾನಕ್ಕೆ ಹೊರಟ ಸಮಯಕ್ಕೆ ಸರಿಯಾಗಿ ಸಂತೋಷ ಅವಳ ಮನೆ ಪ್ರವೇಶಿಸಿದ. ಸಂತೋಷ ಟಿವಿ ನೋಡ್ತಾ ಕೂತಿರು ಸ್ನಾನ ಮುಗಿಸಿ ಬಂದು ಬಿಡ್ತೇನೆ ಎಂದು ಕ್ಯಾಶುಯಲ್ ಆಗಿ ಹೇಳಿ ಸ್ನಾನದ ಮನೆ ಹೊಕ್ಕಳು.
ಈತ ಟಿವಿ ಕಡೆ ನೋಡಿದ್ದಕ್ಕಿಂತ ಹೆಚ್ಚಾಗಿ ಸ್ನಾನದ ಮನೆಯ ಕಡೆಯೇ ನೋಡುತ್ತಿದ್ದ. ಹಾಗೇ ನೋಡುವಾಗ ನೊಣವೊಂದು ಸ್ನಾನದ ಮನೆಯ ವೆಂಟಿಲೇಟರ್‌ನಿಂದ ನೊಣ ಹೊಕ್ಕೇ ಬಿಟ್ಟಿತು.
ಇತ್ತ ಸಂತೋಷನ ಹೊಟ್ಟೆಯಲ್ಲಿ ಬೆಂಕಿ ಹುಟ್ಟಿ ಜಪಿಸಲು ಶುರು ಮಾಡಿದ. ತಾನು ನಂಬಿದ, ತಿರುಗಿದ ದೇವರನಲ್ಲಿ ಜಪಿಸುತ್ತಲೇ ಮನೆ ಸೇರಿಕೊಂಡ. ಜಪಿಸುವಾಗ ಆತ ಕೇಳುತ್ತಿದ್ದದು ಇಷ್ಟೇ, ದೇವರೇ ನನ್ನನ್ನು ನೊಣ ಮಾಡು!.
ಅದು ಯಾವ ದೇವರಿಗೆ ಮರುಕ ಹುಟ್ಟಿತೋ ಕಾಣೆ. ಅದ್ಯಾವುದೋ ಒಂದು ಘಳಿಗೆಯಲ್ಲಿ ಸಂತೋಷ
ನೊಣವಾಗಿ ಬಿಟ್ಟ. ಸುಂಯ್ ಎಂದು ಹಾಡುತ್ತಾ.., ಹಾರುತ್ತಾ ಸೇವಂತಿಯ ಮನೆಗೆ ಹೋಗಿ ಸೇವಂತಿ ಸ್ನಾನಕ್ಕೆ ಹೋಗುವುದನ್ನೇ ಕಾಯುತ್ತಾ ಕೂತ. ಅವಳ ಸುತ್ತಾ ಸುಳಿದಾಡಿದ. ಇನ್ನು ಸ್ನಾನ ಮಾಡದೇ ಕೊಳಕಾಗಿರುವುದಕ್ಕೆ ನೊಣ ಕಾಡುತ್ತಿರಬೇಕು ಎಂದು ಕೊಂಡೇ ಅವಸರವಸರವಾಗಿ ಸ್ನಾನದ ಮನೆ ಸೇರಿದಳು ಸೇವಂತಿ.
ಸಂತೋಷ ಎಂಬ ನೊಣವು ಸ್ನಾನದ ಮನೆಯೊಳ ಹೋಗಿ ಸೇರಿಕೊಂಡು, ಶವರ್‌ನ ನೀರು ಸಾಗುವ ಪೈಪ್ ಮೇಲೆ ಕಾಯುತ್ತಾ ಕೂತಿತು. ಇತ್ತ ಸಂತೋಷ ಉಸಿರು ಬಿಗಿ ಹಿಡಿದು ಕಾಯುತ್ತಾ...ಕೂತು...ಇನ್ನೇನು...ಎಂದುಕೊಳ್ಳುತ್ತಿರುವಾಗಲೇ, ಸೇವಂತಿ ಸ್ನಾನಕ್ಕಾಗಿ ಬೆತ್ತಲಾಗಲು ಬಟ್ಟೆಗೆ ಕೈ ಹಾಕಿದಳು. ಕಂಟ್‌ಡೌನ್ ಶುರು ಮಾಡಿದ. ಹಾ... ೫,೪,೩,೨,೧ ಎನ್ನುತ್ತಿದ್ದಂತೆ..
ಲಪಕ್ ಲಪಕ್ ಎಂಬ ಎರಡೇ ಸದ್ದಿಗೆ ಸಂತೋಷ ಎಂಬ ನೊಣ ಹಲ್ಲಿಯ ಬಾಯಿ ಸೇರಿ ಹೊಟ್ಟೆಯೊಳಗೆ ಜಾಗ ಪಡೆದಿದ್ದ. ಈ ಸದ್ದು - ಸಾವು ಯಾವುದೂ ಸೇವಂತಿಗೆ ಕೇಳಿಸಲೇ ಇಲ್ಲ. ಸ್ನಾನ ಮಾಡಿ ಹೊರಬಿದ್ದಳು ಹಾಡಿಕೊಳ್ಳುತ್ತಾ.. ಸಂತೋಷಕ್ಕೆ ಹಾಡು...ಸಂತೋಷಕ್ಕೆ..,
(ಇದು ಬಹುಶಃ ಹೈಸ್ಕೂಲಿನ ದಿನಗಳಲ್ಲಿ ಓದಿಕೊಂಡ ಕಥೆ. ಜಪಾನ್ ಅಥವಾ ಚೀನಾ ದೇಶದ ಜನಪದ ಕಥೆ ಎಂಬ ಅಸ್ಪಷ್ಟ ನೆನಪು ಉಂಟು. ಯಾಕೋ ಈ ಕಥೆ ಹೇಳಬೇಕು ಅನಿಸಿತು. ನನ್ನ ಸ್ಟೈಲಿನಲ್ಲಿ ಹೇಳಿದ್ದೇನೆ. ಹೆಸರುಗಳು ಸುಮ್ಮನೆ ತಮಾಷೆಗೆ ಬಳಸಿದ್ದೇನೆ.)

Tuesday, December 2, 2008

ಯುದ್ಧ ಭೂಮಿಯಲ್ಲಿ ನಾನಿರಬೇಕಿತ್ತು ಎಂಬಾಸೆಯೂ, ಅಪಘಾತವೂ...,


ಮುಂಬೈನ ಹೋಟೆಲ್ ತಾಜ್, ಒಬೆರಾಯ್, ನಾರಿಮನ್ ಭವನಗಳ ಮೇಲೆ ಉಗ್ರರು ದಾಳಿ ಇಟ್ಟು ಗುಂಡಿನ ಮಳೆಗೆರೆಯುತ್ತಿರುವುದನ್ನು ಟಿವಿಯಲ್ಲಿ ನೋಡುತ್ತಿದ್ದರೆ ಛೇ ಛೇ ನಾನು ಅಲ್ಲಿ ಇರಬೇಕಿತ್ತು ಅಂತ ಆ ಕ್ಷಣಕ್ಕೆ ಅನಿಸಿತ್ತು. ಯಾಕೋ ಗೊತ್ತಿಲ್ಲ ಆ ಮೂರು ದಿನಗಳ ಕಾಲ ಆ ಯುದ್ಧ ಭೂಮಿಯಲ್ಲಿ ನಿಂತು ವರದಿ ಮಾಡುತ್ತಿದ್ದ ಪತ್ರಕರ್ತರನ್ನು ಕಂಡಾಗ ಅವರ ಬಗ್ಗೆ ಹೆಮ್ಮೆಗಿಂತ ತುಸು ಹೊಟ್ಟೆ ಕಿಚ್ಚೆ ಹೆಚ್ಚಾಯಿತು ನನಗೆ.
ತಿಂಗಳುಗಳ ಹಿಂದೆ ಮೈಸೂರಿನಲ್ಲಿ ಚಿರತೆ ಕಾಣಿಸಿಕೊಂಡು ಓಡಾಡುತ್ತಿದ್ದಾಗ ಟಿವಿ ನೋಡುತ್ತಾ ನೋಡುತ್ತಾ ಮೈಸೂರಿನ ಪತ್ರಕರ್ತರ ಮಿತ್ರರಿಗೆ ಫೋನ್ ಹಚ್ಚಿ ಹೊಟ್ಟೆ ಉರಿದುಕೊಂಡಿದ್ದೆ. ಆನೆ ಧಾರವಾಡದಲ್ಲಿದೆ ಎಂದು ಗೊತ್ತಾದ ಮೇಲೇಯೇ ಚಿರತೆ ಮೈಸೂರಿಗೆ ಬಂದಿದೆ ಎಂದು ಗೇಲಿ ಮಾಡಿದ್ದರು.
ಆಗೀಗ ಗೆಳೆಯರು, ನೀವು ಪತ್ರಕರ್ತರು ಯಾರಿಗಾದರೂ ಏನಾದರೂ ಆಗೋದನ್ನೆ ಕಾಯುತ್ತೀರಿ ಅಲ್ವಾ ಅಂತ ರೇಗಿಸೋದು ಉಂಟು. ಅದಕ್ಕೆ ನಾನು ವಿವರಣೆ ನೀಡಲು ನಿಂತ ಕೂಡಲೇ ಸುಮ್ಮನೆ ತಮಾಷೆ ಮಾಡಿದೋ ಸುಮ್ಮನಿರ್‍ಲಾ ಅಂತ ಹೇಳೋದು ಉಂಟು. ಒಮ್ಮೆ ಮೈಸೂರಲ್ಲಿ ಇದ್ದಾಗ ಎಲ್ಲಾ ಕೆಲಸ ಮುಗಿಸಿ ಬಾಗಿಲು ಹಾಕುವ ಹೊತ್ತಿಗೆ, ಪೊಲೀಸರೊಬ್ಬರ ಫೋನ್ ಬಂತು. ಅಯ್ಯೋ ಏನಾಯಿತು ಗೊತ್ತಿಲ್ಲ ಎಂದು ಗೊಣಗುತ್ತಾ ಫೋನ್ ಸ್ವೀಕರಿಸಿದೆ. ಮಂಡಕಳ್ಳಿ ಹತ್ತಿರ ಕಾರು ಬೈಕು ಆಕ್ಸಿಡೆಂಟ್ ಆಗಿದೆ ಚೆಕ್ ಮಾಡಿಕೊಳ್ಳಿ ಎಂಬ ಮಾಹಿತಿ ದೊರೆಯಿತು.
ಊರಿಂದ ಬಂದು ನನಗಾಗಿ ಕಾಯುತ್ತಿದ್ದ ಗೆಳೆಯನಿಗೆ ಕೂರಲು ಹೇಳಿ ಅಪಘಾತದ ವಿವರ ತೆಗೆಯಲು ಕುಳಿತೆ. ಸೀರಿಯಸ್ ಏನೂ ಇಲ್ಲ. ಮೈನರ್ ಇಂಜುರಿ ಆಗಿದೆ ಅಷ್ಟೇ. ಗಾಯಗೊಂಡವರ ಹೆಸರು... ಎಂದು ಹೆಸರಿಗಾಗಿ ಹುಡುಕಾಡಲು ತೊಡಗಿತು ಖಾಕಿ, ಆಗ ನಾನು, ಅಷ್ಟೇನಾ ಸತ್ತಿದ್ದರೆ ಮಾತ್ರ ಹೆಸರು ಹೇಳಿ. ಇಲ್ಲಂದ್ರೆ ಬೇಡ ಬಿಡಿ ಎಂದು ಫೋನಿಟ್ಟೆ.
ನನ್ನನ್ನೆ ಗಮನಿಸುತ್ತಾ ಕೂತಿದ್ದ ಗೆಳೆಯ ಅಶ್ವತ್ಥ, ಊಟಕ್ಕೆ ಕುಳಿತಾಗ ಅಲ್ಲ ಕಣ್ಲಾ ಸತ್ತಿದ್ದರೆ ಮಾತ್ರ ಹೆಸರು ಅಂತಿಯಲ್ಲಾ ಎಂದು ಗೇಲಿ ಮಾಡಿದ. ಅದಕ್ಕೆ ನಾನು ವಿವರಣೆ, ಸಮರ್ಥನೆಯನ್ನೂ ನೀಡಿದೆ.
ಅಪರಾಧ, ಅತ್ಯಾಚಾರದ ಸುದ್ದಿಗಳನ್ನು ಒಳ್ಳೆ ಸುದ್ದಿ ಎಂದಾಗ ಗೇಲಿಗೆ ಇಳಿದವರಿಗೆ ನಾನು ಹೇಳುತ್ತಿದ್ದದ್ದು - ಅದು ಒಳ್ಳೆ ಸುದ್ದಿ ಆದರೆ, ಅದು ಒಳ್ಳೆ ಘಟನೆ ಅಲ್ಲ. ಸುದ್ದಿಯನ್ನು ಘಟನೆಯನ್ನು ಸೇರಿಸಬೇಡಿ ಎಂದು ಪಾಠ ಹೇಳುತ್ತಿದ್ದೆ.
೨೦೦೭ರ ಡಿಸೆಂಬರ್‌ನಲ್ಲಿ ಧಾರವಾಡದ ಸ್ಟೇಷನ್ ರಸ್ತೆಯಲ್ಲಿ ನನ್ನ ಬೈಕ್ ಆಕ್ಸಿಡೆಂಟ್ ಆಯಿತು. ಹಿರಿಯ ಪತ್ರಕರ್ತ ಮಿತ್ರ ನರಸಿಂಹರಾವ್ ಮತ್ತು ನಾನು ಇಬ್ಬರೂ ಇದ್ದ ಬೈಕ್‌ಗೂ, ಯಮಹಾ ಬೈಕ್‌ಗೂ ಆದ ಡಿಕ್ಕಿ ಅದು. ನಡು ಮಧ್ಯಾಹ್ನವೇ ನಾವಿಬ್ಬರು ಬೀದಿಯಲ್ಲಿ ಕಕ್ಕಾಬಿಕ್ಕಿಯಾಗಿ ಬಿದ್ದಿದ್ದೆವು. ಬಿದ್ದ ಬಿರುಸಿಗೆ ನರಸಿಂಹರಾವ್ ಕೈ ಮೂಳೆ ಮುರಿದುಕೊಂಡು, ಪ್ರಜ್ಞೆಯನ್ನು ಕಳೆದುಕೊಂಡಿದ್ದರು. ದಪ್ಪ ದೇಹ ಇದ್ದದ್ದಕ್ಕೋ, ಡಿಕ್ಕಿ ಹೊಡೆದ ಯಮಹಾ ಬೈಕು ತೋರಿದ ಕರುಣೆಯೋ ನನಗೆ ಅಷ್ಟು ಪೆಟ್ಟಾಗಿರಲಿಲ್ಲ.
ಸಾವರಿಸಿಕೊಂಡು ಎದ್ದವನೇ ಯಮಹಾದವನೊಂದಿಗೆ ಜಗಳಕ್ಕಿಳಿಯುವಷ್ಟರಲ್ಲಿ ಆತ ಪರಾರಿಯಾಗಿದ್ದ. ನಾನು ನಮ್ಮ ಫೋಟೋಗ್ರಾಫರ್‌ಗೆ, ಗೆಳೆಯ ರವಿಗೆ ಫೋನ್ ಮಾಡಿ ಆಕ್ಸಿಡೆಂಟ್ ಆಗಿದೆ ಬನ್ನಿ ಅಂದ ಕೂಡಲೇ ಅತ್ತಲಿಂದ ಬಂದ ಪ್ರಶ್ನೆ..., ಎಷ್ಟು ಡೆತ್! ಹೆಸರು ಸಿಕ್ಕಿತಾ..? ಯಾವ ಊರು? ಯಾವು ಯಾವುದಕ್ಕೆ ನಡೆದಿದ್ದು ಎಂದು ಮರು ಪ್ರಶ್ನೆಗಳನ್ನು ಹಾಕಿದರು. ನನಗೆ ಒಮ್ಮೆಲೇ ನಗು ಕೋಪ ಉಕ್ಕುಕ್ಕಿ ಬಂತು. ನಮ್ಮ ಫೋಟೋಗ್ರಾಫರ್‌ಗಂತೂ ಸ್ಥಳಕ್ಕೆ ಬರುವ ತನಕ ಅಪಘಾತ ಆಗಿರುವುದು ನನಗೇ ಎಂಬುದು ಗೊತ್ತಿರಲಿಲ್ಲ.
ಉಗ್ರರ ದಾಳಿ ಶುರುವಾಗುವ ೨೦ ನಿಮಿಷ ಮೊದಲು ನಾನು ಅಲ್ಲಿಂದ ಪಾಸಾಗಿ ಬಂದು ಬಿಟ್ಟಿದ್ದೆ. ಅಲ್ಲಿ ಇದ್ದಿದ್ದರೆ ನಾನು ಸಿಕ್ಕಿಬೀಳುತ್ತಿದ್ದೆ. ಸದ್ಯ ಬಚಾವಾದೆ ಅನ್ನೋದು ತಮ್ಮ, ತಮ್ಮವರ ಸುಖಕ್ಕೆ, ದುಃಖಕ್ಕೆ ಮಾತ್ರ ಮಿಡಿಯುವ ಸಾಮಾನ್ಯರ ಮಾತು. ಛೇ ಛೇ ೨೦ ನಿಮಿಷ ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿ ತಪ್ಪು ಮಾಡಿಬಿಟ್ಟೆ. ಅಲ್ಲೇ ಇದ್ದಿದ್ದರೆ ನಾನು ಉಗ್ರರನ್ನು ಮುಖಾಮುಖಿ ಆಗಬಹುದಿತ್ತು. ಒಳ್ಳೆ ಸವಾಲು ಎದುರಿಸಬಹುದಿತ್ತು ಎನ್ನುವುದು ಸೈನಿಕ (ಕೆಲವು ಪ್ರಮಾಣಿಕ ಪೊಲೀಸರು ಇದ್ದಾರೆ) ಮತ್ತು ಪತ್ರಕರ್ತ ಮಾತ್ರ. ಕಾರಣ, ಎಲ್ಲರೂ ತಮಗೆ ಖುಷಿಯಾದಾಗಷ್ಟೇ ನಗುತ್ತಾರೆ. ಆದರೆ, ಸೈನಿಕ ಮತ್ತು ಪತ್ರಕರ್ತ ಮತ್ತೊಬ್ಬರ ಖುಷಿಗೆ ನಗುತ್ತಾನೆ. ಮತ್ತೊಬ್ಬರ ನೋವಿಗೆ ಕಣ್ಣೀರು ಆಗಿರುತ್ತಾನೆ. ಗೊತ್ತಿಲ್ಲದೇ.....