Tuesday, August 30, 2011

ಗಲ್ಲಿ ಟು ಡೆಲ್ಲಿ.....ದಿಲ್ಲಿಗೆ ಬಂದು ಒಂದು ತಿಂಗಳಾಗಿ ಹೋಯಿತು. ನನಗೆ ಇನ್ನೂ ಜಾಸ್ತಿ ದಿನ ಆಗಿಬಿಟ್ಟಿದೆ ಅಂತ ಫೀಲ್ ಆಗ್ತಿದೆ. ವಿಚಿತ್ರ ಹವಾಗುಣದ ಈ ಊರನ್ನು ಅರ್ಥ ಮಾಡಿಕೊಳ್ಳೋ ಓಡಾಟದಲ್ಲಿ ದಿನ ಕಳಿತಾ ಇದೆ. ಬರ್ತಾ ಇದ್ದ ಹಾಗೆ ಯಡಿಯೂರಪ್ಪ ರಾಜೀನಾಮೆ ಪ್ರಕರಣ, ಅದಾದ ನಂತರ ಅಣ್ಣಾ ಹಜಾರೆ ಆಂದೋಲನಕ್ಕೆ ಸಾಕ್ಷಿಯಾಗೋ ಅವಕಾಶ ಸಿಕ್ಕಿತು.
ಈ ದಿಲ್ಲಿಯಲ್ಲಿ ಓಡಾಡಬೇಕು, ಕೆಲಸ ಮಾಡಬೇಕು ಅನ್ನೋದು ಇಂದು ನಿನ್ನೆಯ ಆಸೆ ಅಲ್ಲ. ಕಾಲೇಜಿನಲ್ಲಿ ಇದ್ದಾಗಲೇ ದೆಹಲಿಯಲ್ಲಿ ಕೆಲಸ ಮಾಡಬೇಕು ಅನ್ನೋ ಕನಸು ಹಂಚಿಕೊಂಡಿದ್ದೆ. ಅದನ್ನು ಅರಿತಿದ್ದ ಈ ಟಿವಿಯಲ್ಲಿದ್ದ ಗೆಳೆಯ ಚೇತನ್ (ಈಗ ಬೆಂಗಳೂರು ಇಂಡಿಯನ್ ಎಕ್ಸಪ್ರೆಸ್ನಲ್ಲಿ ಇದ್ದಾನೆ) 2008ರಲ್ಲಿ ಈಟಿವಿಯಿಂದ ದೆಹಲಿಗೆ ಬರೋ ಅವಕಾಶ ಕೊಡಿಸಿದ್ದ. ಬಟ್ ಅನಿವಾರ್ಯ ಕಾರಣಗಳಿಂದ ನಾನು ಬಂದಿರಲಿಲ್ಲ. ಆದ್ರೆ, ದೆಹಲಿಯ ಆಸೆ ಮಾತ್ರ ಹಾಗೇ ಇತ್ತು. ಅದಕ್ಕೆ ಮತ್ತೆ ಅವಕಾಶ ನೀಡಿದವರು ಉದಯವಾಣಿಯ ರವಿಹೆಗಡೆ.
ದೆಹಲಿಯ ಫು ಟ್ಪಾತ್ ಮೇಲೆ ಒಬ್ಬನೇ ಓಡಾಡುವಾಗ ಏನೇನೋ ನೆನಪಾಗುತ್ತೆ. ವೆಟರನರಿ ಡಾಕ್ಟರೋ, ಬಿಎಸ್ಸಿ ಅಗ್ರಿ ಮಾಡಬೇಕು ಅನ್ನೋ ಆಸೆಯಿಂದ ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡಿದ್ದೆ. ಆದರೆ ಓದುವಾಗ ಗಮನ ಎಲ್ಲೆಲ್ಲೋ ಹರಿಯಿತು. ಟ್ಯೂಷನ್ಗೆ ಹೋಗದೇ ಪಾಸ್ ಮಾಡಬೇಕು ಅನ್ನೋ ನನ್ನ ನಿಧರ್ಾರವನ್ನು ಬದಲಿಸಿದ್ದು ಗೆಳೆಯ ತಪ್ಲೆ. ಟ್ಯೂಷನ್ಗೆ ಹೋಗಲು ಶುರುಮಾಡಿದವನು ಓದುವುದು ಬಿಟ್ಟೆ. .......... ಹಿಂದೆ ತಿರುಗುವುದು ಕಲಿತೆ. ಅದು ನನ್ನ ಭ್ರಮೆ ಅಂತ ಅರಿವಾಗುವಷ್ಟರಲ್ಲಿ ಮನೆಯಲ್ಲಿ ಅಪ್ಪ - ಚಿಕ್ಕಪ್ಪನ ತಲ್ಲಣ. ನಾನು ಭೂಮಿತಾಯಿ ನಂಬಿದವನಂತೆ ಗದ್ದೆ ಕೆಲಸಕ್ಕೆ ಇಳಿದುಬಿಟ್ಟೆ. ಕನ್ನಡ, ಇಂಗ್ಲಿಷು ಮತ್ತು ಬಯೋಲಾಜಿ ಮಾತ್ರ ಪಾಸಾಯಿತು. ಉಳಿದ ಮೂರರಲ್ಲೂ ಫೇಲು. ಅದನ್ನು ನಂಬಲು ಮನೆಯವರಿರಲಿ, ನನ್ನ ಹಿಂದೆ ಮುಂದೆ ಪರೀಕ್ಷೆಗೆ ಕುಳಿತಿದ್ದ ಹುಡುಗ - ಹುಡುಗಿಯರು ನಂಬಲು ರೆಡಿ ಇರಲಿಲ್ಲ. ಕಾರಣ, ಪರೀಕ್ಷೆ ಬರೆಯುವಾಗ ಅಷ್ಟೊಂದು ಅಡಿಷನಲ್ ಶೀಟ್ ತೆಗೆದುಕೊಂಡಿದ್ದೆ....!
ಆಮೇಲೆ ಸಪ್ಲಿಮೆಂಟರಿ ಪರೀಕ್ಷೆಯನ್ನು ಅಪ್ಪ - ಅಮ್ಮನ ಒತ್ತಾಯಕ್ಕೆ ಕಟ್ಟಿದೆ. ಅಮ್ಮನಿಗೋ ನನ್ನ ಮಗ ಗದ್ದೆ ಕೆಲಸಕ್ಕೆ ಇಳಿದು ಫೇಲ್ ಮಾಡಿಕೊಂಡ ಅಂತ ತಪ್ಪು ತಿಳಿದಳು. ನಾನೋ ಮೊದಲ ಪರೀಕ್ಷೆಯಲ್ಲಿ ತೆಗೆದುಕೊಂಡ ಅಡಿಷನಲ್ ಶೀಟ್ನ ಸಾಲ ತೀರಿಸುವವನಂತೆ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಖಾಲಿ ಹಾಳೆ ಕೊಟ್ಟು ಎದ್ದು ಬರುತ್ತಿದ್ದೆ. ಒಂದು ದಿನ ಫಿಸಿಕ್ಸ್ ಲೆಕ್ಚರರ್ ಹೇಮಲತಾ ಮೇಡಂ ಖಾಲಿ ಯಾಕೋ, ಏನು ಬರೆದಿಲ್ಲ ಅಂತ ಹಾಕಿದ ಪ್ರಶ್ನೆಗೆ, `ವ್ಯಾಲ್ಯೂವೇಷನ್ ಮಾಡೋರಿಗೆ ಕಾಣ್ಸುತ್ತೆ ಬಿಡಿ' ಅಂತ ಉಡಾಫೆ, ಉದ್ದಟತನದ ಮಾತನಾಡಿ ಬಂದಿದ್ದೆ. ಕಾಲೇಜಿನಲ್ಲಿ ನನ್ನ ಇಮೇಜು ಹಾಗೆ ಇದ್ದುದ್ದರಿಂದ ಅವರು ತಿರುಗಿ ಮಾತನಾಡಲು ಹೋಗಿರಲಿಲ್ಲ.
ಅಷ್ಟರಲ್ಲಿ ಅಪ್ಪ - ಚಿಕ್ಕಪ್ಪನ ಜಗಳಗಳಿಂದಾಗಿ ಜಮೀನು ಚಿಕ್ಕದಾಯ್ತು. ಜಮೀನು ಮಾಡಿಸಲು ಇನ್ಯಾರಿಗೋ ಕೊಟ್ಟರು. ಫೇಲಾಗಿದ್ದ ನನಗೆ ನಿತ್ಯ ಬೈಗುಳ, ನಿಂದನೆ ಕಾಮನ್ ಆಗಿತ್ತು. ಅಷ್ಟರಲ್ಲಿ ನನ್ನ ಅಮ್ಮನ ಗೋಳು ನೋಡಲಾಗದೇ ನಾನು ಕಂಪ್ಯೂಟರ್ ಕೋಸರ್್ ಒಂದಕ್ಕೆ ಸೇರಿದೆ. ಮಂಡ್ಯದ ಸುಭಾಷ್ನಗರದ ಗೈಸ್ ಗ್ರಾಫಿಕ್ಸ್ ನನ್ನ ಬದುಕು ಬದಲಾಗಲು ಮುನ್ನುಡಿ ಬರೆಯಲಾರಂಭಿಸಿತು. ಅಲ್ಲಿ ಸ್ಕ್ರೀನ್ ಪ್ರಿಂಟಿಂಗ್ ಕಲಿತು ಅಚ್ಚರಿ ಸ್ಕ್ರೀನ್ ಪ್ರಿಂಟರ್ಸ್ ಅನ್ನು ಶುರುಮಾಡಿದ್ದ ನನಗೆ, ಹಾಯ್ ಬೆಂಗಳೂರಿನ ನಿರಂತರ ಓದು ಪತ್ರಕರ್ತನಾಗುವತ್ತ ಪ್ರೇರೇಪಿಸಲಾರಂಭಿಸಿತ್ತು. ಅಷ್ಟರಲ್ಲಿ ಪ್ರೈವೇಟ್ ಆಗಿ ಪಿಯುಸಿ ಆಟ್ಸರ್್ ಎಕ್ಸಾಮ್ ತೆಗೆದುಕೊಂಡು ಪಾಸ್ ಮಾಡಿದೆ. ಅದರಲ್ಲಿ ನನಗೆ ಶೇ. 74 ರಷ್ಟು ಮಾಕ್ಸರ್್ಗಳು. ಅಷ್ಟು ಮಾಕ್ಸರ್್ ತೆಗೆಯಬಲ್ಲೆ ಅಂತ ಕಾನ್ಫಿಡೆನ್ಸ್ ಕೊಟ್ಟಿದ್ದು ಸಾಹಿತ್ಯದ ಓದು. ಕೆಲವರ ಆತ್ಮಕಥೆಗಳು.
ನನಗೆ ಮೈಸೂರಿನ ಮಹಾರಾಜ ಕಾಲೇಜು ಇದೆ, ಪತ್ರಿಕೋದ್ಯಮ ಕೋಸರ್್ ಇದೆ ಅಂತ ತಿಳಿಸಿದ್ದು, ಆಗ ಮಂಡ್ಯದಿಂದ ಟೈಮ್ಸ್ ಆಫ್ ಇಂಡಿಯಾ ಹಾಗೂ ಈಟಿವಿಗೆ ವರದಿ ಮಾಡುತ್ತಿದ್ದ ಟಿ.ಆರ್. ಸತೀಶ್. ಮಹಾರಾಜ ಕಾಲೇಜಿನ ಆ ಕಟ್ಟಡ, ಹುಡುಗರು ಎಲ್ಲಾ ನೋಡಿ ನನಗೆ ಸೀಟು ಸಿಗದು ಎಂದುಕೊಂಡಿದ್ದೆ. ನನ್ನ ಅಪ್ಪನಿಗೋ ನನ್ನನ್ನು ಲಾಯರ್ ಮಾಡಬೇಕು ಅನ್ನೋ ಹಟ. ನನ್ನ ಅಪ್ಪನ ಮಾತಿಗೆ ಬೆಲೆ ಕೊಡದೇ ಮೈಸೂರು ಬಸ್ಸು ಹತ್ತಿದೆ. ಅಲ್ಲಿಗೆ ರೈತನಾಗುವ ನನ್ನ ಆಸೆ ಮುಗಿದು ಹೊಸದೊಂದು ಗುರಿ ಮುಟ್ಟಲು ಓಡಲು ಶುರುಮಾಡಿದೆ......
ಯಾಕೋ ಏನೇನೋ ನೆನಪು. ದಿಲ್ಲಿಯ ಫುಟ್ಪಾತ್ ತುಂಬಾ ನೇರಳೆ ಹಣ್ಣುಗಳ ಆತ್ಮಹತ್ಯೆ ಆಗಿದೆ. ಅವಳಿಗೆ ನೇರಳೆ ಹಣ್ಣು ಅಂದರೆ ತುಂಬಾ ಇಷ್ಟ. ಯಾಕೋ ಈ ನೇರಳೆ ಹಣ್ಣುಗಳಂತೆಯೇ ನನ್ನ ಅವಳ ಕನಸೂ ಆತ್ಮಹತ್ಯೆ ಮಾಡಿಕೊಂಡಿತೇ.......!?.
ಅದೆಲ್ಲಕ್ಕಿಂತ ಹೆಚ್ಚಾಗಿ ನನ್ನ ವಿದ್ಯಾಥರ್ಿ ದಿನಗಳಿಂದಲೇ ಬಹುವಾಗಿ ಇಷ್ಟ ಪಡುತ್ತಿದ್ದ ಹಿರಿಯ ಪತ್ರಕರ್ತ ಡಿ. ಉಮಾಪತಿ ಅವರ ನೇತೃತ್ವದಲ್ಲಿ ನಾನು ಮತ್ತು ನನ್ನಂತೆಯೇ ದೆಹಲಿಗೆ ಹೊಸಬನಾಗಿರುವ ಟಿವಿ 9 ಗೆಳೆಯ ಚಂದ್ರಮೋಹನ್ಗೆ ಆತ್ಮೀಯ ಸ್ವಾಗತ, ಔತಣ ದೊರೆಯಿತು. ಮನೆ ನೆನಪಿಸುವಂತಹ ಸೊಪ್ಪು - ಮುದ್ದೆ ಊಟ ಹಾಕಿಸಿ ಹಿರಿಯರೆಲ್ಲಾ ಒಂದಷ್ಟು ಸಲಹೆ, ಉತ್ತಮವಾದುದೊಂದು ಪುಸ್ತಕ ಕೊಟ್ಟರು. ಕಷ್ಟ ಬಂದಾಗ ನಮ್ಮ ಹೆಗಲು ಇರುತ್ತೆ ಮರೆಯದಿರಿ, ಚನ್ನಾಗಿ ಕೆಲಸ ಮಾಡಿ ಎನ್ನೋ ಅಭಯವನ್ನೂ ನೀಡಿದರು.
ಆ ಔತಣ ಕೂಟದಲ್ಲಿ ದೆಹಲಿಯಲ್ಲಿರೂ ಕನ್ನಡಿಗ ಪತ್ರಕರ್ತರು ಸೇರಿದ್ದರು. ದಿ ವೀಕ್ ಸಂಪಾದಕ ಸಚ್ಚಿ, ಔಟ್ಲುಕ್ನ ಕೃಷ್ಣಪ್ರಸಾದ್, ಡೆಕ್ಕನ್ ಹೆರಾಲ್ಡ್ನ ಅರುಣ್, ಅಜಿತ್ ಅತ್ರಾಡಿ ಟೈಮ್ಸ್ ನೌನ ಅನೂಪ್ ಅವರು ಇಂಗ್ಲಿಷ್ ಪತ್ರಕರ್ತರಾದರು ಕನ್ನಡಿಗರು. ದೆಹಲಿಗೆ ಕನ್ನಡಿಗ ಪತ್ರಕರ್ತರು ಬಂದರೆ ಇವರು ಆತ್ಮೀಯರಾಗುತ್ತಾರೆ. ಕೈಲಾದ ಸಹಾಯ ಮಾಡುತ್ತಾರೆ. ಇನ್ನು ಕನ್ನಡದ ಎಲ್ಲಾ ಪತ್ರಕರ್ತರು ಒಂದೆಡೆ ಸೇರಿದ್ದೆವು ಅನ್ನೋ ಖುಷಿ ಇತ್ತು. ಎಲ್ಲರಿಂದಲೂ ಸಹಕಾರ ದೊರೆಯುತ್ತಿದೆ. ಕೆಲಸದ ಜೊತೆಗೆ, ಹೊಸದೇನೋ ಕಲಿಯುವ ಹುಮ್ಮಸ್ಸು. ಜೊತೆಗೆ, ಯಾಕೋ ನಾನು ಅಷ್ಟು ಇಷ್ಟ ಪಡದ ಬೆಂಗಳೂರು, ಅನಿವಾರ್ಯವಾಗಿ ಸೇರಿದ್ದ ಟಿವಿ ಕೆಲಸವೂ ಪದೇ ಪದೇ ನೆನಪಾಗುತ್ತೆ.
ನನ್ನ ಗೆಳೆಯರು, ಅಪ್ಪ - ಅಮ್ಮ ಯಾರೂ ನಾನು ಪತ್ರಕರ್ತನಾಗುವೆ ಎಂದು ಊಹಿಸಿರಲಿಲ್ಲ. ನನ್ನೊಳಗಿನ ಪತ್ರಕರ್ತನ ಮೊದಲು ಗುರುತಿಸಿದ್ದು ಎಚ್.ಆರ್. ರಂಗನಾಥ್ ಮತ್ತು ಕೂಡ್ಲಿ ಗುರುರಾಜ್. ಅವರಿಬ್ಬರು ಸೇರಿ ಮೈಸೂರಲ್ಲಿ ಅತ್ಯುತ್ತಮ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಳಿ ಕಳುಹಿಸಿದರು. ಅವರು ನನ್ನ ತಿದ್ದಿತೀಡಿ ಪತ್ರಕರ್ತನಾಗಿಸಿದರು. ಆನಂತರ ರಂಗನಾಥ್ ಮತ್ತು ರವಿಹೆಗಡೆ ಉತ್ತಮ ಅವಕಾಶ ನೀಡುತ್ತಾ ಬಂದರು. ಇದಕ್ಕೆ ನೆರವು ನೀಡಿದ್ದು ನೂರಾರು ಕೈಗಳು. ಇಷ್ಟು ದಿನ ಸಿಕ್ಕಂತೆಯೇ ಇಲ್ಲೂ ನೆರವು ಸಿಗೋ ಲಕ್ಷಣ ಗೋಚರಿಸಿದೆ. ನಾನು ಅದನ್ನು ಬಳಸಿಕೊಳ್ಳುತ್ತೇನಾ? ಬೆಳೆಯುತ್ತೇನಾ? ಗೊತ್ತಿಲ್ಲ. ಮಂಡ್ಯ ತಾಲೂಕು ಹನಕೆರೆ ಗಲ್ಲಿಯಿಂದ ಹೊರಟವನು ದಿಲ್ಲಿಗೆ ಬಂದಿದ್ದೇನೆ. ಯಾಕೋ ನೆನಪುಗಳಿಂದ ತಪ್ಪಿಸಿಕೊಳ್ಳೋದು? ನೆರವು ನೀಡಿದವರನ್ನ ಮರೆಯೋದು ಕಷ್ಟ... ಕಷ್ಟ... ಕಷ್ಟ....

(ಅಣ್ಣಾ ಹಜಾರೆ ಉಪವಾಸ ಮುಗಿಸಿದ ನಂತರ ಜನಶ್ರೀ ಗೆಳೆಯ ರಾಘವಶಮರ್ಾ, ನವೀನ್ ಮತ್ತು ಸಂಡೆ ಇಂಡಿಯನ್ನ ಡಿಸೈನರ್ ಪ್ರಕಾಶ್ ಶೆಟ್ಟಿ ಜೊತೆ ಪೋಸ್ ಕೊಟ್ಟೆವು ಹೀಗೆ...)

4 comments:

Poorvi said...

galli galli me gooma hain...:)
nice...guru

ರವಿ ದೇವಳಿ said...

ಗೆಳೆಯ ಅವಿ,
ನಿಮ್ಮ ಬದುಕಿನ ಹಾದಿ ನನ್ನ ದಿನಗಳ ಮೆಲುಕು ಹಾಕೋ ಹಾಗೆ ಮಾಡ್ತು. ದೆಹಲಿ ಅನುಭವಗಳು ನಿಮ್ಮ ಬದುಕನ್ನ ಮತ್ತಷ್ಟು ರಿಚ್ ಆಗಿಸ್ತವೆ ಅನ್ನೋದ್ರ ಬಗ್ಗೆ ಅನುಮಾನ ಇಲ್ಲ. ಆಲ್ ದಿ ಬೆಸ್ಟ್‌.

Srikanth, Mysore said...

ಅಣ್ಣ, ನೀನು ಬೆಳೆದು ಬಂದ ಬಾಲ್ಯದ ಜೀವನ ಮತ್ತು ಇಂದಿನ ಬೆಳವಣಿಗಳನ್ನು ಆಗಿಂದ್ದಾಗೆ update ಮಾಡುತ್ತಿರುವುದು ಸಂತೋಷ ಹಾಗೂ ಈಗಿನ ಯುವ ಪೀಳಿಗೆಗೆ ಒಂದು ಮಾದರಿ. ಇನ್ನೂ ಸ್ವಲ್ಪ ವಷ೯ ಹನಕೆರೆ ಗಲ್ಲಿಯನ್ನು ನೆನೆದು, ದೆಹಲಿಯಲ್ಲೆ ಇದ್ದು ಕೆಲಸ ಮಾಡಿ ಒಳ್ಳೆಯ ಹೆಸರು ಸಂಪಾದಿಸಿ ನಂತರ ದೊಡ್ಡ ಹುದ್ದೆಯನ್ನೇರಿ ಅಷ್ಟು ಇಷ್ಟಪಡದ ಬೆಂಗಳೂರಿಗೆ ಬರಬೇಕು ನನ್ನ ಆಸೆ.

ಆದರೆ ಒಂದು ಪೂತಿ೯ ಮಾಡಿಲ್ಲದ ಆ ನೇರಳೆ ಹಣ್ಣಿನ ಹುಡುಗಿ ಯಾರಣ್ಣ..! ಆ ನೇರಳೆ ಹಣ್ಣಿನ ಹುಡುಗಿ ಮುಂದೆ ನಿಮ್ಮ ಜೀವನದ ನೇರಳಾಗಿ ಬರಲಿ.. All the best.. bye

ಬಹುಮುಖ said...

All the best dear....