ಹೈಸ್ಕೂಲ್, ಕಾಲೇಜಿನ ಹಳೇ ನೋಟ್ಬುಕ್ಗಳ ಕೊನೆ ಪೇಜುಗಳು ನೋಡಿದಷ್ಟೆ ಖುಷಿ ಪಟ್ಟೆ. ಜಿಮೇಲ್ ಪಾಪ್ಯುಲರ್ ಆದ್ಮೇಲೆ ನನ್ನ ಮೊಟ್ಟ ಮೊದಲ ಇಮೇಲ್ ಐಡಿ ಆದ ಯಾಹೂ ಬಳಸೋದು ಬಿಟ್ಟಿದ್ದೆ. ಅದಕ್ಕೆ ಮತ್ತೊಂದು ಕಾರಣವೂ ಇತ್ತು ಎನ್ನಿ. 2012 ಮುಗ್ಸಿ 2013 ಶುರು ಮಾಡೋ ಹೊತ್ತಿನಲ್ಲಿ, ಯಾಕೋ ಹಳೇ ಐಡಿ ಇದ್ಯಾ ಚೆಕ್ ಮಾಡ್ಬೇಕು ಅನ್ನಿಸ್ತು. ನಾನು ಡೆಲ್ಲಿಯಲ್ಲಿದ್ದಾಗ ಒಮ್ಮೆ ತೆರೆದು ನೋಡಿದ್ದೆ... ಅದನ್ನು ಬಿಟ್ರೆ ಈಗ ತೆರೆದು ನೋಡಿದೆ. ಭಾನುವಾರ ಅಲ್ವಾ ಪುರಸೊತ್ತಾಗಿದ್ದೆ.. ಹಳೇ ಮೇಲು ಚೆಕ್ ಮಾಡ್ತಾ ಮಾಡ್ತಾ ಸ್ವಲ್ಪ ಎಮೋಷನಲ್ ಆದೆ. ಹಳೇ ಫೋಟೋಗಳು. ಹಳೇ ಮಾತುಗಳು. ನೆನಪಿನ ಪುಟ ತಿರುವತೊಡಗಿದವು.
ಈ ಇಮೇಲ್ ಐಡಿ ಕ್ರಿಯೇಟ್ ಮಾಡೋಕೆ ಇವತ್ತು ಡಾಕ್ಟರ್ ಆಗಿರೋ ಗೆಳೆಯ ಮಂಜು ಮತ್ತು ನಾನು ಸುಮಾರು 12 ವರ್ಷದ ಹಿಂದೆ ಮಂಡ್ಯದ ಆರ್ಪಿ ರಸ್ತೆಯಲ್ಲಿದ್ದ ಆಗಿನ ಏಕೈಕ ಸೈಬರ್ ಸೆಂಟರ್ನಲ್ಲಿ ಹರಸಾಹಸ ಪಟ್ಟಿದ್ದೆವು. ಯಾಹೂ ಅನ್ನೋ ಪದದ ಮೋಹಕ್ಕೆ ಒಳಗಾಗಿಯೇ ಅವತ್ತು ಯಾಹೂನಲ್ಲಿ ಐಡಿ ಕ್ರಿಯೇಟ್ ಮಾಡಿದ್ವು. ಅದಕ್ಕೆ ಗೆಳೆಯ ಮಂಜನೇ ಪಾಸ್ವಡರ್್ ಟೈಪಿಸಿದ್ದ... ಯಾಕೋ ನಾನು ಅದನ್ನು ಈವರೆಗೆ ಚೇಂಜ್ ಮಾಡಿಲ್ಲ. ಯಾಹೂ ಇನ್ಬಾಕ್ಸ್ ನೋಡ್ತಾ ನೋಡ್ತಾ ಅನ್ಸಿದ್ದು. `ನನ್ನ ಈಗಿನ ಜಿಮೇಲ್ನಲ್ಲಿ ಚೂರೂ ಎಮೋಷನ್ ಇಲ್ಲ' ಅಂತ. ಧಾರವಾಡ ಬಿಡೋ ತನಕ ಚಟುವಟಿಕೆಯಿಂದ ಇದ್ದ ಯಾಹೂ. ಬೆಂಗಳೂರಿಗೆ ಬಂದ ಮೇಲೆ ಜಿಮೇಲ್ ಬೇಕಿನಿಸಿಬಿಟ್ಟಿತು. ಬೆಂಗಳೂರಿನಂತೆಯೇ ಜಿಮೇಲ್ ಪಕ್ಕಾ ಪ್ರೊಫೆಷನಲ್ ಮತ್ತು ಬಿಸಿನಸ್ ಮೈಡೆಂಡ್ ಆಗಿಯೇ ನನ್ನಲ್ಲಿ ಉಳಿದುಬಿಟ್ಟಿತು.
ಇದೇ ಯಾಹೂವಿನ ಇನ್ಬಾಕ್ಸ್ಗಳಿಗೆ ಒಂದೂ ಮೇಲ್ ಬಂದಿಲ್ಲವಲ್ಲ ಅಂತ ಎಷ್ಟೋ ಬಾರಿ ಮೈಸೂರಿನ ರಮಾವಿಲಾಸ ರಸ್ತೆಯಲ್ಲಿದ್ದ ಗಲ್ಲಿಯಲ್ಲಿನ ಮೋಹನ್ ಸೈಬರ್ ಸೆಂಟರ್ನಲ್ಲಿ ಕುಳಿತು ಹಳಹಳಿಸಿದ್ದು ಇದೆ. ಅದಕ್ಕೆ ಬಂದು ಬಿಡಬಹುದಾದ ಗೆಳತಿಯರ ಬೆಚ್ಚನೆಯ ಮೇಲ್ಗಳಿಗೆ ಕಾತರಿಸಿದ್ದು, ಆ ಮೇಲ್ಗಳನ್ನು ಪದೇ ಪದೇ ಓದಿಕೊಂಡು ಉತ್ತರಿಸಿದ ನೆನಪುಗಳೆಲ್ಲಾ ಕಣ್ಣ ಮುಂದೆ ಸುಳಿದು ಹೋದವು. ಯಾಹೂ ಇನ್ಬಾಕ್ಸ್ನಲ್ಲಿ ಒಂದು ವರ್ಷದಿಂದ ಜಾಹಿರಾತು ಮೇಲ್ಗಳನ್ನು ಹೊರತುಪಡಿಸಿ ನನಗಾಗಿಯೇ ಬಂದಿದ್ದು ಎರಡು ಮೇಲ್ ಮಾತ್ರ. ನನ್ನ ಗೆಳತಿಯೊಬ್ಬಳ ರೆಫರೆನ್ಸ್ ಇರೋ ರೆಸ್ಯುಮ್ ಮಾತ್ರ. ಪಾಪ ಅವಳ ಬಳಿ ನನ್ನ ಹೊಸ ಐಡಿ ಇಲ್ವೇ ಇಲ್ಲ...!
ನನ್ನ ಹಳೇ ಫೋಟೋಗಳನ್ನು ನನ್ನ ಈಗಿನ ಅವಸ್ಥೆಯನ್ನು ನೋಡಿ ನನ್ಗೇ ನಗು ಬಂತು. 2007 ಮಾಚರ್್ 30ರಂದು ಮೈಸೂರಿನಲ್ಲಿ ನನ್ನ ಕೊನೆಯ ದಿನದ ಕೆಲಸ. ಅವತ್ತೇ ಮೈಸೂರಿನ ಜಯಪುರದ ಬಳಿ ಸಮುದಾಯ ಭವನದ ಶಂಕುಸ್ಥಾಪನೆಗಾಗಿ ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡ್ರಿಗೆ ಜೋರು ಜಗಳ. ಲಾಠಿ ಚಾಜರ್್ ಆಗಿ ಮೂರು ಬಸ್ಸುಗಳಿಗೆ ಬೆಂಕಿ ಬಿತ್ತು. ಅವತ್ತು ಸಿದ್ದರಾಮಯ್ಯ ಅವರನ್ನ ಬಂಧಿಸಿ ಮೈಸೂರು ಪೊಲೀಸ್ ಗ್ರೌಂಡಿನಲ್ಲಿ ಬಂಧಿಸಿಡಲಾಯ್ತು. ಅಲ್ಲಿಂದ ಬಿಡುಗಡೆಯಾದ ಮೇಲೆ ಸಿದ್ದರಾಮಯ್ಯ ಮೈಸೂರು ಡಿಸಿ ಕಚೇರಿ ಬಳಿ ಹೋಗಿ ಕುಳಿತುಬಿಟ್ರು. ಇದೆಲ್ಲಾ ಮುಗಿವಾಗ ಬೆಳಗಿನ ಜಾವ 2 ಗಂಟೆ. ಕೊನೆ ಕ್ಷಣದ ಸುದ್ದಿ ಬರೆದು ಮುಗಿಸುವ ತನಕ ಕಾದು ಕುಳಿತಿದ್ದ ಮೈಸೂರು ಕನ್ನಡಪ್ರಭದ ಸಹದ್ಯೋಗಿಗಳು ನನಗೆ ಶಾಲು ಹೊದೆಸಿ, ಹಣ್ಣು ನೀಡಿ ಆತ್ಮೀಯ ಬೀಳ್ಕೊಡುಗೆ ಕೊಟ್ರು. ನನ್ನ ಗುರು ಅಂಶಿ ಪ್ರಸನ್ನಕುಮಾರ್ ಲೀಡರ್ಶಿಪ್ನಲ್ಲಿ ಇಡೀ ಕಚೇರಿಯೇ ನನಗೆ ಶುಭ ಹಾರೈಸಿತು. ಮೈಸೂರಿನಲ್ಲಿ ನನ್ನಪಾಲಿನ ಕೇರಾಫ್ ಆಗಿದ್ದ ಶ್ರೀಕಾಂತ್, ಸದಾ ಬೈದಾಡುತ್ತಾ ಹೊಗಳುತ್ತಿದ್ದ ಇಂಡಿಯನ್ ಎಕ್ಸಪ್ರೆಸ್ನ ಶಿವಕುಮಾರ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಮೈಸೂರಿನ ನೆನಪಿಗೆ. ಮುಂಜಾವಿನಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಅವತ್ತೇ ಮಧ್ಯಾಹ್ನ ಬೆಂಗಳೂರಿನಲ್ಲಿ ಒಂದು ತಿಂಗಳ ತರಬೇತಿಗಾಗಿ ಜಾಯಿನ್ ಆದೆ. ನಂತ್ರ ಹೊರಟದ್ದು ಧಾರವಾಡಕ್ಕೆ. ಧಾರವಾಡ ನನ್ನ ಪ್ರೊಫೆಷನಲ್ ಹಾಗೂ ಪರ್ಸನಲ್ ಆಗಿ ಬೆಳೆಸಿತು ಮತ್ತು ಉಳಿಸಿತು. ಎಲ್ಲ ಚಿತ್ರಗಳು ಕಣ್ಣ ಮುಂದೆ ಸುಳಿದಾಡತೊಡಗಿತು.
ಅವತ್ತು ಮೈಸೂರು ಬಿಡುವಾಗ ಭಯ ಇದ್ದರೂ, ಅದಕ್ಕಿಂತ ಹೆಚ್ಚಿನ ಆತ್ಮವಿಶ್ವಾಸ, ಕಾತರ, ಹೊಸ ಐಡಿಯಾಗಳು, ಗುರಿ ಮತ್ತು ಅವಳು ನನ್ನ ಮುನ್ನಡೆಸತೊಡಗಿದ್ದರು. ನಾನು ಯಾವತ್ತೂ ಬಯಸಿರದ ಜಾಗದಲ್ಲಿ ಇವತ್ತು ನಿಂತಿದ್ದೇನೆ. ಮೈಸೂರಿನಿಂದ ಟ್ರಾನ್ಸ್ಫರ್ ಕೇಳಿದ್ದೀನಿ ಸರ್ ಅಂದಾಗ, ಯಾಕೆ ಅಂತ ಕಾಳಜಿಯಿಂದ ವಿಚಾರಿಸಿಕೊಂಡಿದ್ರು ಗುರುಗಳಾದ ಅಂಶಿಪ್ರಸನ್ನಕುಮಾರ್, ನನ್ನ ಅಲೆಮಾರಿ ಚಟ ಗೊತ್ತಾಗಿ ಬೆನ್ನುತಟ್ಟಿ ಕಳುಹಿಸಿದ್ರು. ಅವರ ಹೆಸರಿಗೆ ಧಕ್ಕೆ ಬರದ ರೀತಿಯಲ್ಲಿ ಈ ಕ್ಷಣದವರೆಗೆ ಕೆಲಸ ಮಾಡಿದ್ದೇನೆ. ಕಂಪನಿ ಯಾವುದೇ ಇರಲಿ ಯಾವಾಗಲೂ ನನಗೆ ಮಾರ್ಗದರ್ಶನ ಮಾಡಿದವರು. ಈ 6 ವರ್ಷದಲ್ಲಿ ಏನೆಲ್ಲ ಪಡೆದೆ, ಏನೆಲ್ಲಾ ಕಳ್ಕೊಂಡೆನೋ...? ಮೈಸೂರು ಬಿಟ್ಟ ಮೇಲೆ ಚೂರು ಚೂರಾಗಿ ನನ್ನ ಹುಟ್ಟೂರು, ಮನೆಯವರ ಜೊತೆ ಸಂಪರ್ಕ ಕಡಿಮೆಯಾಗತೊಡಗಿತು. ಸದ್ಯಕ್ಕೆ ನಾನು ನಮ್ಮೂರಿಗೆ 6 ತಿಂಗಳಿಗೋ - ವರ್ಷಕ್ಕೋ ಹೋಗುವಂತಾಗಿದ್ದೇನೆ. ಆರೋಗ್ಯ ಕೆಟ್ಟು ಕೆರ ಹಿಡಿಯೋವಷ್ಟು ದಪ್ಪಗಾಗಿದ್ದೇನೆ. ಅನೇಕ ಗೆಳೆಯರನ್ನು ಪಡೆದಿದ್ದರೂ, ಬೆಂಗಳೂರಿಗೆ ಬಂದ ಮೇಲೆ ಹಳೇ ಗೆಳೆಯರನ್ನು ಕಳೆದುಕೊಂಡಿದ್ದೇನೆ ಅನ್ನೋ ಭೀತಿ ಇದೆ. ಮುಂದೆ ಏನು? ನಾನೇನು ಆಗ್ಬೇಕು...? ಅನ್ನೋ ಗೊಂದಲದಲ್ಲೇ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಜೊತೆಗೆ ನಾವಿದ್ದೇವೆ ಅಂತ ಬಾರಿ ಬಾರಿ ಹೇಳ್ತಾ ಇದ್ರೂ ಯಾಕೋ ಒಂಟಿ ಒಂಟಿ ಅನ್ನಿಸ್ತದೆ. ಪ್ಲೀಸ್ ಮದ್ವೆ ಆಗು ಸರಿ ಹೋಗುತ್ತೆ ಅಂತ ಮಾತ್ರ ಹಳಸಲು ಸಜೆಷನ್ ಕೊಡ್ಬೇಡಿ. ಅನುಭವಕ್ಕಿಂತ ದೊಡ್ಡ ಮೇಷ್ಟ್ರು ಇಲ್ಲ. ಆದ್ರೆ ಕಾಸ್ಟ್ಲಿ ಮೇಸ್ಟ್ರು ಅವ್ರು. ಟಿವಿ ಚಾನಲ್ಗಳು ಏನೆಲ್ಲಾ ನನ್ನಿಂದ ಕಿತ್ತುಕೊಂಡಿದ್ರೂ ತುಂಬಾ ರಿಚ್ ಅನ್ನಿಸೋ ಅನುಭವ ಕೊಟ್ಟಿದೆ. ಅಪರೂಪಕ್ಕೆ ಬರೆಯೋಕೆ ಕುಳಿತಿರೋದ್ರಿಂದ ಇನ್ನೂ ಬರೀಬೇಕು ಅನ್ನಿಸ್ತಿದೆ. ಬಟ್ ನಿಮ್ಮ ಮೇಲಿನ ಕರುಣೆಯಿಂದ ಇಲ್ಲಿಗೆ ನಿಲ್ಲಿಸ್ತೀನಿ. ಸರಿ ಎಲ್ರಿಗೂ ಹೊಸ ವರ್ಷದ ಶುಭಾಶಯಗಳು.
(ಫೋಟೋ ವಿವರ - ಮೈಸೂರು ಕನ್ನಡಪ್ರಭ ಕಚೇರಿಯಿಂದ ಧಾರವಾಡಕ್ಕೆ ಹೊರಟಾಗ ನನಗೆ ಸಿಕ್ಕ ಬೀಳ್ಕೊಡುಗೆಯ ಫೋಟೋ)
No comments:
Post a Comment