Tuesday, December 2, 2008
ಯುದ್ಧ ಭೂಮಿಯಲ್ಲಿ ನಾನಿರಬೇಕಿತ್ತು ಎಂಬಾಸೆಯೂ, ಅಪಘಾತವೂ...,
ಮುಂಬೈನ ಹೋಟೆಲ್ ತಾಜ್, ಒಬೆರಾಯ್, ನಾರಿಮನ್ ಭವನಗಳ ಮೇಲೆ ಉಗ್ರರು ದಾಳಿ ಇಟ್ಟು ಗುಂಡಿನ ಮಳೆಗೆರೆಯುತ್ತಿರುವುದನ್ನು ಟಿವಿಯಲ್ಲಿ ನೋಡುತ್ತಿದ್ದರೆ ಛೇ ಛೇ ನಾನು ಅಲ್ಲಿ ಇರಬೇಕಿತ್ತು ಅಂತ ಆ ಕ್ಷಣಕ್ಕೆ ಅನಿಸಿತ್ತು. ಯಾಕೋ ಗೊತ್ತಿಲ್ಲ ಆ ಮೂರು ದಿನಗಳ ಕಾಲ ಆ ಯುದ್ಧ ಭೂಮಿಯಲ್ಲಿ ನಿಂತು ವರದಿ ಮಾಡುತ್ತಿದ್ದ ಪತ್ರಕರ್ತರನ್ನು ಕಂಡಾಗ ಅವರ ಬಗ್ಗೆ ಹೆಮ್ಮೆಗಿಂತ ತುಸು ಹೊಟ್ಟೆ ಕಿಚ್ಚೆ ಹೆಚ್ಚಾಯಿತು ನನಗೆ.
ತಿಂಗಳುಗಳ ಹಿಂದೆ ಮೈಸೂರಿನಲ್ಲಿ ಚಿರತೆ ಕಾಣಿಸಿಕೊಂಡು ಓಡಾಡುತ್ತಿದ್ದಾಗ ಟಿವಿ ನೋಡುತ್ತಾ ನೋಡುತ್ತಾ ಮೈಸೂರಿನ ಪತ್ರಕರ್ತರ ಮಿತ್ರರಿಗೆ ಫೋನ್ ಹಚ್ಚಿ ಹೊಟ್ಟೆ ಉರಿದುಕೊಂಡಿದ್ದೆ. ಆನೆ ಧಾರವಾಡದಲ್ಲಿದೆ ಎಂದು ಗೊತ್ತಾದ ಮೇಲೇಯೇ ಚಿರತೆ ಮೈಸೂರಿಗೆ ಬಂದಿದೆ ಎಂದು ಗೇಲಿ ಮಾಡಿದ್ದರು.
ಆಗೀಗ ಗೆಳೆಯರು, ನೀವು ಪತ್ರಕರ್ತರು ಯಾರಿಗಾದರೂ ಏನಾದರೂ ಆಗೋದನ್ನೆ ಕಾಯುತ್ತೀರಿ ಅಲ್ವಾ ಅಂತ ರೇಗಿಸೋದು ಉಂಟು. ಅದಕ್ಕೆ ನಾನು ವಿವರಣೆ ನೀಡಲು ನಿಂತ ಕೂಡಲೇ ಸುಮ್ಮನೆ ತಮಾಷೆ ಮಾಡಿದೋ ಸುಮ್ಮನಿರ್‍ಲಾ ಅಂತ ಹೇಳೋದು ಉಂಟು. ಒಮ್ಮೆ ಮೈಸೂರಲ್ಲಿ ಇದ್ದಾಗ ಎಲ್ಲಾ ಕೆಲಸ ಮುಗಿಸಿ ಬಾಗಿಲು ಹಾಕುವ ಹೊತ್ತಿಗೆ, ಪೊಲೀಸರೊಬ್ಬರ ಫೋನ್ ಬಂತು. ಅಯ್ಯೋ ಏನಾಯಿತು ಗೊತ್ತಿಲ್ಲ ಎಂದು ಗೊಣಗುತ್ತಾ ಫೋನ್ ಸ್ವೀಕರಿಸಿದೆ. ಮಂಡಕಳ್ಳಿ ಹತ್ತಿರ ಕಾರು ಬೈಕು ಆಕ್ಸಿಡೆಂಟ್ ಆಗಿದೆ ಚೆಕ್ ಮಾಡಿಕೊಳ್ಳಿ ಎಂಬ ಮಾಹಿತಿ ದೊರೆಯಿತು.
ಊರಿಂದ ಬಂದು ನನಗಾಗಿ ಕಾಯುತ್ತಿದ್ದ ಗೆಳೆಯನಿಗೆ ಕೂರಲು ಹೇಳಿ ಅಪಘಾತದ ವಿವರ ತೆಗೆಯಲು ಕುಳಿತೆ. ಸೀರಿಯಸ್ ಏನೂ ಇಲ್ಲ. ಮೈನರ್ ಇಂಜುರಿ ಆಗಿದೆ ಅಷ್ಟೇ. ಗಾಯಗೊಂಡವರ ಹೆಸರು... ಎಂದು ಹೆಸರಿಗಾಗಿ ಹುಡುಕಾಡಲು ತೊಡಗಿತು ಖಾಕಿ, ಆಗ ನಾನು, ಅಷ್ಟೇನಾ ಸತ್ತಿದ್ದರೆ ಮಾತ್ರ ಹೆಸರು ಹೇಳಿ. ಇಲ್ಲಂದ್ರೆ ಬೇಡ ಬಿಡಿ ಎಂದು ಫೋನಿಟ್ಟೆ.
ನನ್ನನ್ನೆ ಗಮನಿಸುತ್ತಾ ಕೂತಿದ್ದ ಗೆಳೆಯ ಅಶ್ವತ್ಥ, ಊಟಕ್ಕೆ ಕುಳಿತಾಗ ಅಲ್ಲ ಕಣ್ಲಾ ಸತ್ತಿದ್ದರೆ ಮಾತ್ರ ಹೆಸರು ಅಂತಿಯಲ್ಲಾ ಎಂದು ಗೇಲಿ ಮಾಡಿದ. ಅದಕ್ಕೆ ನಾನು ವಿವರಣೆ, ಸಮರ್ಥನೆಯನ್ನೂ ನೀಡಿದೆ.
ಅಪರಾಧ, ಅತ್ಯಾಚಾರದ ಸುದ್ದಿಗಳನ್ನು ಒಳ್ಳೆ ಸುದ್ದಿ ಎಂದಾಗ ಗೇಲಿಗೆ ಇಳಿದವರಿಗೆ ನಾನು ಹೇಳುತ್ತಿದ್ದದ್ದು - ಅದು ಒಳ್ಳೆ ಸುದ್ದಿ ಆದರೆ, ಅದು ಒಳ್ಳೆ ಘಟನೆ ಅಲ್ಲ. ಸುದ್ದಿಯನ್ನು ಘಟನೆಯನ್ನು ಸೇರಿಸಬೇಡಿ ಎಂದು ಪಾಠ ಹೇಳುತ್ತಿದ್ದೆ.
೨೦೦೭ರ ಡಿಸೆಂಬರ್‌ನಲ್ಲಿ ಧಾರವಾಡದ ಸ್ಟೇಷನ್ ರಸ್ತೆಯಲ್ಲಿ ನನ್ನ ಬೈಕ್ ಆಕ್ಸಿಡೆಂಟ್ ಆಯಿತು. ಹಿರಿಯ ಪತ್ರಕರ್ತ ಮಿತ್ರ ನರಸಿಂಹರಾವ್ ಮತ್ತು ನಾನು ಇಬ್ಬರೂ ಇದ್ದ ಬೈಕ್‌ಗೂ, ಯಮಹಾ ಬೈಕ್‌ಗೂ ಆದ ಡಿಕ್ಕಿ ಅದು. ನಡು ಮಧ್ಯಾಹ್ನವೇ ನಾವಿಬ್ಬರು ಬೀದಿಯಲ್ಲಿ ಕಕ್ಕಾಬಿಕ್ಕಿಯಾಗಿ ಬಿದ್ದಿದ್ದೆವು. ಬಿದ್ದ ಬಿರುಸಿಗೆ ನರಸಿಂಹರಾವ್ ಕೈ ಮೂಳೆ ಮುರಿದುಕೊಂಡು, ಪ್ರಜ್ಞೆಯನ್ನು ಕಳೆದುಕೊಂಡಿದ್ದರು. ದಪ್ಪ ದೇಹ ಇದ್ದದ್ದಕ್ಕೋ, ಡಿಕ್ಕಿ ಹೊಡೆದ ಯಮಹಾ ಬೈಕು ತೋರಿದ ಕರುಣೆಯೋ ನನಗೆ ಅಷ್ಟು ಪೆಟ್ಟಾಗಿರಲಿಲ್ಲ.
ಸಾವರಿಸಿಕೊಂಡು ಎದ್ದವನೇ ಯಮಹಾದವನೊಂದಿಗೆ ಜಗಳಕ್ಕಿಳಿಯುವಷ್ಟರಲ್ಲಿ ಆತ ಪರಾರಿಯಾಗಿದ್ದ. ನಾನು ನಮ್ಮ ಫೋಟೋಗ್ರಾಫರ್‌ಗೆ, ಗೆಳೆಯ ರವಿಗೆ ಫೋನ್ ಮಾಡಿ ಆಕ್ಸಿಡೆಂಟ್ ಆಗಿದೆ ಬನ್ನಿ ಅಂದ ಕೂಡಲೇ ಅತ್ತಲಿಂದ ಬಂದ ಪ್ರಶ್ನೆ..., ಎಷ್ಟು ಡೆತ್! ಹೆಸರು ಸಿಕ್ಕಿತಾ..? ಯಾವ ಊರು? ಯಾವು ಯಾವುದಕ್ಕೆ ನಡೆದಿದ್ದು ಎಂದು ಮರು ಪ್ರಶ್ನೆಗಳನ್ನು ಹಾಕಿದರು. ನನಗೆ ಒಮ್ಮೆಲೇ ನಗು ಕೋಪ ಉಕ್ಕುಕ್ಕಿ ಬಂತು. ನಮ್ಮ ಫೋಟೋಗ್ರಾಫರ್‌ಗಂತೂ ಸ್ಥಳಕ್ಕೆ ಬರುವ ತನಕ ಅಪಘಾತ ಆಗಿರುವುದು ನನಗೇ ಎಂಬುದು ಗೊತ್ತಿರಲಿಲ್ಲ.
ಉಗ್ರರ ದಾಳಿ ಶುರುವಾಗುವ ೨೦ ನಿಮಿಷ ಮೊದಲು ನಾನು ಅಲ್ಲಿಂದ ಪಾಸಾಗಿ ಬಂದು ಬಿಟ್ಟಿದ್ದೆ. ಅಲ್ಲಿ ಇದ್ದಿದ್ದರೆ ನಾನು ಸಿಕ್ಕಿಬೀಳುತ್ತಿದ್ದೆ. ಸದ್ಯ ಬಚಾವಾದೆ ಅನ್ನೋದು ತಮ್ಮ, ತಮ್ಮವರ ಸುಖಕ್ಕೆ, ದುಃಖಕ್ಕೆ ಮಾತ್ರ ಮಿಡಿಯುವ ಸಾಮಾನ್ಯರ ಮಾತು. ಛೇ ಛೇ ೨೦ ನಿಮಿಷ ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿ ತಪ್ಪು ಮಾಡಿಬಿಟ್ಟೆ. ಅಲ್ಲೇ ಇದ್ದಿದ್ದರೆ ನಾನು ಉಗ್ರರನ್ನು ಮುಖಾಮುಖಿ ಆಗಬಹುದಿತ್ತು. ಒಳ್ಳೆ ಸವಾಲು ಎದುರಿಸಬಹುದಿತ್ತು ಎನ್ನುವುದು ಸೈನಿಕ (ಕೆಲವು ಪ್ರಮಾಣಿಕ ಪೊಲೀಸರು ಇದ್ದಾರೆ) ಮತ್ತು ಪತ್ರಕರ್ತ ಮಾತ್ರ. ಕಾರಣ, ಎಲ್ಲರೂ ತಮಗೆ ಖುಷಿಯಾದಾಗಷ್ಟೇ ನಗುತ್ತಾರೆ. ಆದರೆ, ಸೈನಿಕ ಮತ್ತು ಪತ್ರಕರ್ತ ಮತ್ತೊಬ್ಬರ ಖುಷಿಗೆ ನಗುತ್ತಾನೆ. ಮತ್ತೊಬ್ಬರ ನೋವಿಗೆ ಕಣ್ಣೀರು ಆಗಿರುತ್ತಾನೆ. ಗೊತ್ತಿಲ್ಲದೇ.....
Subscribe to:
Post Comments (Atom)
5 comments:
ಗುರುವೇ ಬೆಳ್ಳಂಬೆಳಗ್ಗೆ ಒಳ್ಳೆ ಬರಹ ಓದಿದೆ....ಏನೇ ಆಗಲಿ ಅಲ್ಲಿಗೆ ಹೊರಡುವ ಮನಸ್ಸು ಮಾಡಿದ್ ಕೂಡ್ಲೆ ಹೊಂಟುಬಿಡ್ಬೆಕಿತ್ತು.....ಹೊಗ್ಲಿ ಬಿಡು...ಧಾರವಾಡಕ್ಕೆ ಅಪ್ಪಿತಪ್ಪಿ ಆನೆ ಬಂದ್ರೆ ಒಳ್ಳೆ ವರದಿ ಮಾಡ್ಬೋದು...
ಮೊನ್ನೆ ‘ಬಂದ್ ಮಾಡಿದ್ರೆ ಭಯೋತ್ಪಾದಕರು ಓಡಿ ಹೋಗ್ತಾರಾ’ ಉತ್ತಮ ಸ್ಪಂದನೆ....
with this note what you are going say, are you going prue your Self and all reports,all Soldgers are socials works. No not atall. they are doing just thair jobs thats all. But we people honistly we are making them heroes. Thair are many people are acheving achevment in diffrent sectors. its only time game today we are pressing them. but thair un efficiency creat this situation. we are paying lot of money & respect thain also thay are failur. but u r worldins are good atter is allso good
ಪ್ರೀತಿಯ ಅನಾಮಿಕ,
ನೀವು ಹೇಳೋದು ಸರಿ. ಅವರವರು ಅವರ ಕೆಲಸ ಮಾಡುತ್ತಿದ್ದಾರೆ. ಖಂಡಿತ ನಿಜ ಎಲ್ಲಾ ರಂಗಗಳಲ್ಲೂ ಉತ್ತಮ ಕೆಲಸ ಮಾಡುತ್ತಿರುವವರು ಇದ್ದಾರೆ. ಆದರೆ, ನೂರಾರು ಮಂದಿಯ ಪ್ರಾಣ ಉಳಿಸಲು ಯೋಧ ಪ್ರಾಣ ಲೆಕ್ಕಿಸದೇ ಮುನ್ನುಗಿದ್ದಾಗಲೂ ಆತನನ್ನು ಮೆಚ್ಚಿ ನಾಲ್ಕು ಮಾತನಾಡಬಾರದು ಎಂದರೆ ಅದು ಪಕ್ಕಾ ಮೆಟಿರೀಯಲಿಸ್ಟಿಕ್ ಮನಸ್ಸು ಅನಿಸುತ್ತೆ. ಏನನ್ನೂ ಅಪೇಕ್ಷಿಸದೇ ಯಾರಿಗಾದರೂ ಕೊಟ್ಟಾಗ, ಪಡೆದಾಗ ಮಾತ್ರ ಅದು ಅರ್ಥವಾಗುತ್ತದೆ ಎಂದುಕೊಂಡಿದ್ದೇನೆ. ನೀವು ಹೇಳಿದ ಟೈಮ್ ಗೇಮ್ ನಿಮ್ಮನ್ನು ಒಂದು ದಿನ ಸಂಕಷ್ಟಕ್ಕೆ ತಳ್ಳಿದಾಗ ನಿಮಗೆ ಅರ್ಥವಾಗಬಹುದು. ಒಬ್ಬ ಯೋಧನಿಂದ ನಿಮ್ಮ ಜೀವವೋ, ಒಂದು ಸುದ್ದಿಯಿಂದ ನಿಮ್ಮ ಜೀವನವೋ ಉತ್ತಮವಾದಾಗ ನಿಮಗೆ ಗೊತ್ತಾಗಬಹುದು. ನಿಮ್ಮ ಸ್ಪಂದನೆಗೆ ಥ್ಯಾಂಕ್ಯೂ. ನಿಮ್ಮ ಅಭಿಪ್ರಾಯ ಗೌರವಿಸುತ್ತೇನೆ. ಒಪ್ಪಿಕೊಳ್ಳಲಾರೆ. ಯಾರನ್ನೂ ಹೀರೋ ಮಾಡಲು ಬರೆದದ್ದಲ್ಲ. ಬರೆದ ಮಾತ್ರಕ್ಕೆ ಯಾರೂ ಹೀರೋ ಆಗಲ್ಲ. ಬದುಕು, ಸಮಾಜ ಒಪ್ಪಿದರೆ ಮಾತ್ರ ಹೀರೋ ಹುಟ್ಟುತ್ತಾನೆ. ಯಾರೂ ಬರೆಯದಿದ್ದರೂ... ಆದರೆ, ನಿಮ್ಮ ಕೊನೆಯ ಸಾಲುಗಳು ಸರಿಯಾಗಿ ಅರ್ಥವಾಗಲಿಲ್ಲ.
chennagide guruve.
sakkattagide....madya tumba nakku bitte.. :)
Post a Comment