Sunday, November 30, 2008

ಆಗ್ಲೇ ಮೊಬೈಲು, ಮೆಸೇಜು ಇಷ್ಟು ಚೀಪ್ ಆಗಿದ್ರೆ...!



ಮೈ ಡಿಯರ್ ಬೀದಿ ಬೆಕ್ಕೇ...,
ಪ್ರೇಮ ಪತ್ರ ಅಂದ ಕೂಡಲೇ ನೀನೆ ನೆನಪಾಗ್ತಿ. ಪ್ರೇಮ ಪತ್ರ ಮಾತ್ರವಲ್ಲ ಈಗ ಔಟ್ ಡೇಟ್ ಆಗಿರೋ ಸ್ಟ್ರೀಟ್ ಕ್ಯಾಟ್ ಸೈಕಲ್ಲು, ದೊಗಳೆ ದೊಗಳೆ ಚೂಡಿ ಧರಿಸಿದ ಹುಡುಗೀರು, ಚರ್ಚ್ ಒಳಗಿನ ಮೌನ, ಹಳದಿ ಗುಲಾಬಿ, ಆಯುರ್ವೇದ ವೈದ್ಯರು ಮತ್ತು ತುಟಿಯ ಮೇಲಿನ ಚುಕ್ಕಿ ಕಂಡಾಗಲೆಲ್ಲಾ ನೀನೆ ನೆನಪಾಗ್ತಿ. ಮತ್ತೂ.., ಮೊಬೈಲ್ ಮೂಲಕ ಲವ್ ಕುದುರಿತು, ಮಿಸ್ ಕಾಲ್‌ನಿಂದ ಶುರುವಾದ ಪರಿಚಯ ಲವ್ ಆಯ್ತು, ಮೆಸೇಜ್ ಮೂಲಕ ಪ್ರಪೋಸ್ ಮಾಡಿಬಿಟ್ಟೆ ಎಂದು ಪಿಯುಸಿ ಹುಡುಗರು ಹೇಳಿಕೊಳ್ಳುವಾಗಲೂ ನೀನು ಒಮ್ಮೆ ಕಣ್ಣ ಮುಂದೆ ಬಂದು ನಕ್ಕಂತೆ ಆಗುತ್ತದೆ. ನಾವು ಪಿಯುಸಿ ಓದೋವಾಗ್ಲೂ ಮೊಬೈಲು, ಮೆಸೇಜು ಇಷ್ಟು ಚೀಪ್ ಆಗಿದ್ದಿದ್ರೆ ನೀನು ನನ್ನವಳಾಗ್ತಿದ್ದೇನೋ ಅಂತ ಮನಸ್ಸು ಬಡಬಡಿಸುತ್ತೆ. ಇಲ್ಲಾಂದ್ರೆ ನಮ್ಮಪ್ಪ ಅಟ್ ಲೀಸ್ಟ್ ನನಗೆ ಮೊಬೈಲ್ ಕೊಡಿಸುವಷ್ಟು ಶ್ರೀಮಂತನಾದರು ಆಗಬೇಕಿತ್ತು.
ನಿನಗೆ ನೆನಪಿದೆಯಾ..? ನಾನು ನಿನ್ನ ಪಕ್ಕದ ಬೆಂಚಿನಲ್ಲೇ ಹುಡುಕಿ ಹುಡುಕಿ ಕೂರುತ್ತಿದೆ. ನಿನ್ನ ಪಕ್ಕದ ಜಾಗ ಹಿಡಿದುಕೊಡಲು ಅರುಣ, ಲೋಕೇಶ ಬಹಳವೇ ಕಷ್ಟಪಡುತ್ತಿದ್ದರು. ಆಗಾಗ ಚೀಣ್ಯ ರವಿಯೂ ಹೆಲ್ಪ್ ಮಾಡ್ತಿದ್ದ . ಪುಟ್ಟ ಪುಟ್ಟ ಕವಿತೆ ಬರೆದು, ಅದರ ಕೆಳಗೆ ನನ್ನ ಹೆಸರು ಬರೆದು. ಹೆಸರಿನ ಕೆಳಗೆ ತುಟಿ, ತುಟಿ ಮೇಲೊಂದು ಚುಕ್ಕಿ ಇಡುತ್ತಿದೆ. ನೀನು ನೋಡಲಿ ಅಂತ. ಒಂದು ದಿನ, ನನ್ನ ಮುಂದಿನ ಬೆಂಚಿನಲ್ಲಿ ಕೂತಿದ್ದ ವೆಂಕಟೇಶ ಬಿಡಿಸುತ್ತಿದ್ದ ಕಾರ್ಟೂನ್ ಅನ್ನು ನೀನು ತಲ್ಲೀನಳಾಗಿ ನೋಡುತ್ತಿದ್ದೆ. ಎಷ್ಟು ಕೋಪ ಬಂದಿತ್ತು ಅಂದ್ರೆ ಅವತ್ತು.. ನಾನೂ ಕಾರ್ಟೂನ್ ಬಿಡಿಸಿದ್ದೆ. ಮಾರಿಗುಡಿ ಲೆಕ್ಚರರ್ ಕಾರ್ಟೂನ್ ಬಿಡಿಸಿ ನೀನು ನೋಡಲಿ ಅಂತ ಹರಸಾಹಸ ಮಾಡಿದ್ದೆ. ಅದನ್ನು ನೋಡಿ ನಿನ್ನ ತುಟಿ ಮೇಲಿನ ಚುಕ್ಕಿಯೂ ನಕ್ಕಿತ್ತು! ಅದೇ ಸ್ಫೂರ್ತಿಯಾಗಿ ಶೀಲಾ ಮೇಡಂ, ನಿನ್ನ ಆಪ್ತ ಗೆಳತಿ ಶೈಲಾ, ಶೈನಿ ಹೀಗೆ ಅವರ ಕಾರ್ಟೂನ್‌ಗಳನ್ನು ಬಿಡಿಸಿದ್ದೆ. ಆ ನಗುವಿಗೆ ಏನಿತ್ತೋ ಅರ್ಥ?
ಚಿತ್ರ ಬಿಡಿಸುವುದು ಎಂದರೆ ವಿಚಿತ್ರವಾಗಿ ಆಡುತ್ತಿದ್ದ ನಾನೇನ ಇದನ್ನೆಲ್ಲಾ ಬಿಡಿಸಿದ್ದು ಎಂದು ಅವತ್ತಿಗೂ, ಇವತ್ತಿಗೂ ನನ್ನಲ್ಲಿ ಆಶ್ಚರ್ಯವಿದೆ. ಎಷ್ಟು ಶಕ್ತಿ ಇತ್ತು ನಿನಗೆ. ನನ್ನಿಂದ ದಿನಕ್ಕೆ ೧೦ -೧೨ ಪುಟಗಳ ಪತ್ರ ಬರೆಸುತ್ತಿದ್ದೆ. ಬೆಳಗ್ಗೆ ೪ಕ್ಕೆ ಎದ್ದು ೨ ಕಿ.ಮೀ ಸೈಕಲ್ ತುಳಿದು, ಲಾರಿ ಹಿಡಿದು, ಸಂಜಯ ಟಾಕೀಸ್‌ಬಳಿಯಿಂದ ಕರ್ನಾಟಕ ಬಾರ್ ಸರ್ಕಲ್ ತನಕ ಓಡೋಡಿ ಬರುತ್ತಿದ್ದೆ. ಕ್ಷಣ ಮಿಸ್ಸಾದರೂ ನೀನು, ನಿನ್ನ ಸ್ಮೈಲು ಎರಡು ಮಿಸ್ಸಾಗುತ್ತಿತ್ತು. ಈಗ್ಲೂ ಹಾಗೇ ಟೈಮ್ ಮೇಂಟೇನ್ ಮಾಡ್ತಿಯಾ?, ನೀನಿರೋ ದೇಶದಲ್ಲಿ ಈಗ ಟೈಮೆಷ್ಟು?
ನೆನಪಾಗ್ತೀನಾ..? ಕಡೇ ಪಕ್ಷ ನನ್ನ ಪತ್ರಗಳನ್ನು ಸುಟ್ಟು ನೀನು ಮಾಡಿಕೊಂಡ ಹಿತವಾದ ಸ್ನಾನವಾದರೂ ನೆನಪಿದೆಯಾ?. ಅವ್ನು ಪತ್ರ ಕಳಿಸೋದು ತಡ ಮಾಡ್ಬಿಟ್ಟ ಅಂತ ನೀನು ಹೇಳುತ್ತಿದ್ದದ್ದು ಮೊದಲು ಕೇಳಿಸಿಕೊಂಡಾಗ ನೋವಿನಲ್ಲೂ ಖುಷಿಯಾಗಿತ್ತು. ಅದ್ಕೆ ಈಗ್ಲೂ ನನಗೆ ಈಗಿನ ಮೊಬೈಲು -ಮೆಸೇಜು ಕುದುರಿಸುವ ಲವ್ ನೋಡಿದಾಗ ಹೊಟ್ಟೆ ಕಿಚ್ಚಾಗುತ್ತೆ. ಹೊಟ್ಟೆ ಕಿಚ್ಚಿನಿಂದಲೇ ಅವರಿಗೆ ಹಾರೈಸ್ತೇನೆ. ಅಮ್ಮ ಮದುವೆ ಆಗು ಅಂತಿದ್ದಾಳೆ. ನಾನು ನಿನ್ನ ಕೇಳಬೇಕು ಅಂತ ಕಾಯ್ತಾ ಇದ್ದೀನಿ ಏನಂತಿಯಾ...?
ಇಂದಿಗೂ ನಿನ್ನ
ಆಕಾಂಕ್ಷಿ

6 comments:

ಪ್ರಸಾದ್ ಟಿ ಎಂ said...

ನಿಮ್ಮ ಕವನಗಳಿಗೆ ಕಾಮೆ೦ಟ್ ಬರಿತ್ತಿದ್ದೆ... ಇದನ್ನ ಓದಿದಾಗ ಬರೋಯೋಕೆ ಆಗಲಿಲ್ಲಾ ಕಾರಣ ಕಣ್ಣಿರು ಬ೦ದು ಕಣ್ಣುಗಳು ಮ೦ಜಾದವು...

Anonymous said...

ಗುರುವೇ ಪ್ರಸಾದಿ, ಅಳಬೇಡ ಗುರು. ಸುಮ್ನೆ ಯಾರದೋ ಅನುಭವ ಬರೆದೆ. ಇದರಲ್ಲಿ ಸ್ವಲ್ಪವೇ ಸ್ವಲ್ಪ ಕಲ್ಪನೆಯೂ ಸೇರಿದೆ. - ಅವಿ

shekar said...

ಹಾರಿಹೋದ ಹಕ್ಕಿ... ಬಾಡಿದ ಪ್ರೀತಿ ನೆನುದು ಮನಸನ್ನ ಒದ್ದೆ ಮಾಡಿಕೊಳ್ಳ ಬೇಡ... ಅವಳ ಆಜ್ಞೆಗಾಗಿ .., ಗಡಿದಾಟಿದ ಮೇಲೆ ಮತ್ತ್ಯಾಕೆ ಅದರ ಚಿಂತೆ... ಅಮ್ಮನ ಮಾತು ಕೇಳು.... ತುತ್ತಿನ ರುಚಿ , ಅವಳ ಮಾತು ಎರಡು ಒಂದೇ - ಶೇಖರ್ , ಶಿವಶಂಕರ್ (ಶಿಶ)

NiTiN Muttige said...

abba!! avi, idu kalpaneno or nijavo gottilla super ide...
igina kaaladalli love start aaglikke bahala hottenu beda, ade hindina kaaladalli paapa maatadlikku kashta padabekittu..antadralli ninu bareda kaagadada bisi nirinalli snaana maadi horadeshakke horatu hoda "aa baale" yaaru??!!!

amma hennannu nodta idre bega aduve aagi avara kaige mommakkalannu bega kotbidu!!!!

all d best :)

ಅವಿ said...

ಪ್ರೀತಿಯ ನಿತಿನ್ ಗುರುವೇ, ಅದು ಸತ್ಯ ಕತೆ. ಒಂದು 5 ಪರ್ಸೆಂಟ್ ಕಲ್ಪನೆ ಇದೆ. ಫೀಲಿಂಗ್ ಹೆಚ್ಚಾಗಿ ಸೇರಿದ್ದು. ಇದು ಯಾವುದೊ 1947 ಕಥೆ ಅಲ್ಲ. 2001ರಲ್ಲಿ ನನ್ನ ಗೆಳಯನ ಕತೆ ಇದು. ಆ ಬಾಲೆ ಈಗ ಅಮೆರಿಕ ದಲ್ಲಿ ಡಾಕ್ಟರ್. ಮದುವೆಯಾಗಿದೆ. ಮೊಮ್ಮಗು ಸಲಹೆ ಅವ್ನು ಇಷ್ಟ ಪಡ್ತಾನ ಗೊತ್ತಿಲ್ಲ. ಖಂಡಿತ ನನ್ನ ಬ್ಲಾಗ್ ಓದ್ತಾನೆ ಅವ್ನು.

Anonymous said...

guruve avi,gokakina gharbhadolagina gammattu tumba chennagittu,