Friday, November 28, 2008

6ತಿಂಗಳಿಗೆ ಮಗು ಹುಟ್ಟಿದಾಗ...!


ನಿಜ ಹೇಳಯ್ಯಾ... ಮದುವೆಗೆ ಮೊದಲು ಏನು ನಡೆದಿರಲಿಲ್ವಾ...?
ಇಲ್ಲ ಸರ್..... ಎಂದು ದೈನೇಸಿಯಾಗಿ ಕಳಿದವರನ್ನು ನೋಡುತ್ತಾ ಕಥೆ ಹೇಳಲು ಶುರು ಮಾಡಿದ.
ಹುಡುಗಿ ನೋಡಿ ಬಂದ ಕೆಲವೇ ದಿನದಲ್ಲಿ ಮದುವೆ ಆಗಿ ಹೋಯಿತು. ಆದರೆ, ಮದುವೆಯಾಗಿ 6ತಿಂಗಳಿಗೆ ಆಕೆ ತಾಯಿಯಾಗಿದ್ದಾಳೆ. ಹೆಣ್ಣು ಮಗು ಹೆತ್ತಿದ್ದಾಳೆ. ಆ ಮಗು ನನ್ನದಲ್ಲ. ನನ್ನದಲ್ಲದ ಮಗುವಿಗೆ ತಂದೆ ಹೇಗಾಗಲಿ? ನನಗೆ ಡೈವೋರ್ಸ್ ಕೊಡಿಸಿ ಎಂದು ಅಳು ಮುಖ ಮಾಡಿಕೊಂಡ ಆತ.
ಸರಿ ಹೋಗೋಗು. ವಕಾಲತ್ತು ಹಾಕಿ, ನೋಟಿಸ್ ನೀಡಿದ ನಂತರ ನಿನಗೂ ಡೇಟ್ ತಿಳಿಸ್ತೇನೆ ಎಂದು ಮಾತು ಮುಗಿಸಿದರು ರಾಯಚೂರಿನ ವಕೀಲರು.
ಕಕ್ಷಿದಾರನಿಗೆ ಮಾತು ಕೊಟ್ಟಂತೆಯೇ ವಕೀಲರು ಹೊಸಪೇಟೆಯಲ್ಲಿರುವ ಹುಡುಗಿಯ ಮನೆಗೆ ಡೈವೋರ್ಸ್‌ನ ನೋಟಿಸ್ ರವಾನಿಸಿದರು.
ಹೊಸಪೇಟೆಯ ಖ್ಯಾತ ವಕೀಲರ ಬಳಿಗೆ ಹುಡುಗಿಯ ತಂದೆ ಹೋಗಿ ಎಲ್ಲವನ್ನೂ ಹೇಳಿಕೊಂಡರು. ನೀವೇನೂ ಕಾಳಜಿ ಮಾಡಬೇಡಿ ಅವನಿಗೆ ಸರಿಯಾಗಿ ಮಾಡಿಸೋಣ. ಎನ್ನುತ್ತಲೇ ರಾಯಚೂರಿನ ಪರಿಚಯಸ್ಥ ವಕೀಲರ ವಿಳಾಸದೊಂದಿಗೆ ಶಿಫಾರಸ್ಸು ಪತ್ರವನ್ನೂ ಬರೆದು ಬರೆದುಕೊಟ್ಟರು ಖ್ಯಾತ ವಕೀಲರು.
ಕಡಿಮೆ ಫೀಸು ಪಡೆದು ವಾದಿಸುವ ಲಾಯರ್ ಎಂದೇ ಖ್ಯಾತಿ ಪಡೆದಿದ್ದ ವಕೀಲರ ಮನೆಗೆ ಶಿಫಾರಸ್ಸು ಹಿಡಿದು ಬಂದ ಹುಡುಗಿಯ ತಂದೆ, ಅಳಿಯನ ಗುಣಗಾನ ಶುರು ಮಾಡಿದರು.
`ನನ್ನ ಮಗಳನ್ನು ನೋಡಿದ ದಿನವೇ ಒಪ್ಪಿಕೊಂಡ ಅಳಿಮಯ್ಯ ಒಪ್ಪಂದ ಆಗುವ ಮೊದಲೇ ಮಗಳೊಂದಿಗೆ ಮಾತು ಶುರುವಿಟ್ಟುಕೊಂಡ. ಎಂಗೇಜ್ಮೆಂಟ್ ಆದ ಮೇಲೆ ಜೊತೆಗೆ ಕರೆದುಕೊಂಡು ಓಡಾಡಲು ಶುರು ಮಾಡಿದ. ಪಾರ್ಕ್, ಸಿನಿಮಾ ಪಿಕ್ನಿಕ್‌ಗಳು ಆದವು. ಆಗಲೇ ಚಕ್ಕಂದವೂ ನಡೆದು ಹೋಗಿದೆ. ಮದುವೆ ನಿಶ್ಚಯವಾಗಿತ್ತಲ್ಲ ಮಗಳು ತಲೆ ಕೆಡಿಸಿಕೊಂಡಿಲ್ಲ. ಮದುವೆಯಾದ ಆರು ತಿಂಗಳಿಗೆ ನನ್ನ ಮಗಳು ತಾಯಿಯಾಗಿದ್ದಾಳೆ. ಹೆಣ್ಣು ಹೆತ್ತಿದ್ದಾಳೆ ಎಂದು ಅದಕ್ಕೆ ನಾನು ತಂದೆಯೇ ಅಲ್ಲ ಎಂದು ಆಟ ಶುರು ಮಾಡಿದ್ದಾನೆ. ಡೈವೋರ್ಸ್‌ಗಾಗಿ ನೋಟಿಸ್ 'ಎಂದು ಹೊಸಪೇಟೆಯ ಮಾವನ ಕಥೆ ಕೇಳುತ್ತಿದ್ದಂತೆ ರಾಯಚೂರಿನ ವಕೀಲರಿಗೆ ಏನೋ ಹೊಳೆದಂತೆ ಆಯಿತು.
ಎಲ್ಲಿ ನೋಟಿಸ್ ತಾ ಇಲ್ಲಿ ಎಂದು ನೋಡುತ್ತಿದ್ದಂತೆ ಅವರೇ ದಂಗಾದರು. ಕಾರಣ ಅದು ಅವರೇ ಕಳುಹಿಸಿದ ನೋಟಿಸ್ ಆಗಿತ್ತು. ಅವರ ಕಕ್ಷಿದಾರನ ವಿರುದ್ಧವೇ ಹೊಸಪೇಟೆಯ ವಕೀಲ ಮಿತ್ರರು ಶಿಫಾರಸ್ಸು ಕೊಟ್ಟಿದ್ದರು.
ನೀವು ನನ್ನ ಕಕ್ಷಿದಾರನ ವಿರುದ್ಧವೇ ದೂರು ತಂದಿದ್ದೀರಿ. ಈ ಕೇಸು ತಗೆದುಕೊಂಡರೆ ನನ್ನ ಕಕ್ಷಿದಾರನಿಗೆ ಮೋಸ ಮಾಡಿದಂತೆ. ನನ್ನ ಕಕ್ಷಿದಾರನನ್ನು ಸರಿಯಾಗಿ ವಿಚಾರಿಸಿಯೇ ಕೇಸು ಹಾಕಿದ್ದೀನಿ. ನನ್ನ ಕಕ್ಷಿದಾರನನ್ನು ನಂಬುತ್ತೇನೆ ನೀವು ಬೇರೆ ವಕೀಲರನ್ನು ನೋಡಿಕೊಳ್ಳಿ ಎಂಬ ರಾಯಚೂರಿನ ವಕೀಲರ ಮಾತು ಕೇಳುವ ಸ್ಥಿತಿಯಲ್ಲಿ ಹೊಸಪೇಟೆಯ ಮಾವ ಇರಲಿಲ್ಲ. ಅದೇ ವಕೀಲರಿಗೆ ಹೊಸಪೇಟೆ ಮಾವ ಗಂಟು ಬಿದ್ದರು.
ನಂತರ ರಾಯಚೂರಿನ ಮತ್ತೊಬ್ಬ ವಕೀಲರ ಬಳಿ ಹೋಗುವಂತೆ ಹೇಳಿ ಸಾಗಹಾಕುವಲ್ಲಿ ಕಡಿಮೆ ಫೀಸು ಖ್ಯಾತಿಯ ಪ್ರಮಾಣಿಕ ವಕೀಲರು ಯಶಸ್ವಿಯಾದರು.
ನ್ಯಾಯಾಲಯದಲ್ಲಿ ವಿಚಾರಣೆ ಶುರುವಾಯಿತು.
ಕಡಿಮೆ ಫೀಸು ಖ್ಯಾತಿಯ ಪ್ರಮಾಣಿಕ ವಕೀಲರು ತನ್ನ ಕಕ್ಷಿದಾರನ ಪರವಾಗಿ ಸಮರ್ಥವಾಗಿ ವಾದ ಮಾಡಿಸುವ ಕಾಲಕ್ಕೆ ಸರಿಯಾಗಿ, ಹೊಸಪೇಟೆ ಮಾವನ ವಕೀಲರು ಒಂದಷ್ಟು ಪ್ರೇಮ ಪತ್ರಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದರು.
ಮದುವೆಗೆ ಮುಂಚೆ ರಾಯಚೂರು ಅಳಿಮಯ್ಯನು ಹೊಸಪೇಟೆ ಮಾವನ ಮಗಳಿಗೆ ಬರೆದ ಪ್ರೇಮ ಮತ್ತು ಪ್ರಣಯ ಪತ್ರಗಳು ಅವಾಗಿದ್ದವು. ಮದುವೆಗೆ ಮುಂಚೆಯೇ ಪಿಕ್ನಿಕ್ ಮತ್ತು ಪಾರ್ಕ್‌ಗಳಲ್ಲಿ ಇಬ್ಬರೂ ಕಳೆದ ಮಧುರ ಕ್ಷಣಗಳನ್ನು ನೆನಪಿಸಿಕೊಂಡು ಬರೆದ ಪತ್ರ ಅವಾಗಿದ್ದವು. ಪ್ರಮಾಣಿಕರ ಪರವಾಗಿ ಮಾತ್ರ ವಾದಿಸಬೇಕು ಎಂಬ ನಿಯಮ ರೂಢಿಸಿಕೊಂಡು ಬಂದಿದ್ದ ಕಡಿಮೆ ಫೀಸು ಪಡೆಯುವ ವಕೀಲರಿಗೆ ಆಘಾತವಾಯಿತು. ಕೂಡಲೇ ಅವರು ನೋ ಅಬ್ಜೆಕ್ಷನ್ ಮೈ ಲಾರ್ಡ್ ಎಂದು ಹೇಳಿ ಕೇಸನ್ನು ತಾವಾಗಿಯೇ ಸೋಲಿಗೆ ಒಪ್ಪಿಸಿಕೊಂಡರು.
ಹಾಗೆ ಪ್ರಮಾಣಿಕತೆಗಾಗಿ ಸೋಲು ಒಪ್ಪಿಕೊಂಡವರು ಈಗ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳು. ಹೈಕೋರ್ಟ್‌ನಲ್ಲಿ ಪ್ರಪ್ರಥಮ ಬಾರಿಗೆ ಕನ್ನಡದಲ್ಲಿ ತೀರ್ಪು ಬರೆದವರು ಎಂಬ ಖ್ಯಾತಿಯನ್ನೂ ಪಡೆದಿರುವ ಅರಳಿ ನಾಗರಾಜ್ ಅವರೇ ಆ ರಾಯಚೂರಿನ ಕಡಿಮೆ ಫೀಸು ಪಡೆಯುವ ವಕೀಲರು. ಈ ಕಥೆಯನ್ನು ಧಾರವಾಡದಲ್ಲಿ ಅವರೇ ಹೇಳಿಕೊಂಡು, ವಕೀಲರು ಪ್ರಮಾಣಿಕರಾದರೆ ಸಮಾಜ ಸಾಕಷ್ಟು ಸುಧಾರಿಸುತ್ತದೆ ಎಂದು ಉದಾಹರಣೆಯೊಂದಿಗೆ ಪ್ರತಿಪಾದಿಸಿದರು.
ಅನಿವಾರ್ಯವಾಗಿ ಅಪರಾಧಿ ಪರ ವಕಾಲತ್ತು ವಹಿಸಲೇಬೇಕಾಗಿ ಬಂದಾಗ ಇನ್ನೆಂದೂ ಅಂತಹ ಅಪರಾಧ ಮಾಡುವುದಿಲ್ಲ ಎಂಬ ಮಾತು ಪಡೆದುಕೊಂಡಾದರೂ ವಕಲತ್ತು ವಹಿಸಿ. ಪ್ರಮಾಣಿಕತೆ ಕಷ್ಟವಾದರೂ, ನಿಮ್ಮ ಮನಸಾಕ್ಷಿಗೆ ಇಷ್ಟವಾಗುತ್ತದೆ ಎಂದು ಮಾತು ಮುಗಿಸಿದರು.

3 comments:

Anonymous said...

ಕತೆಯಲ್ಲದ ಕತೆ ಇಷ್ಟ ಆಯ್ತು. ವರದಿಗಾರಿಕೆಯ ಇಂಥ ಅನುಭವಗಳ ಬಗ್ಗೆ ಆಗಾಗ ಬರೀತಿರಿ
-ದೇವಳಿ ರv

ಗೋವಿಂದ್ರಾಜ್ said...

I thought that its a story of your own experince but at the end only i came to know that its somebody's story. narraqtion is good.keep writing such stories of your experience

ಪ್ರಸಾದ್ ಟಿ ಎಂ said...

ಕತೆ ಅ೦ತ ಓದೋದಕ್ಕೆ ಸುರುವಿಟ್ಟೆ... ಕೊನೆಗೆ ಗೊತ್ತಾಯಿತು ಇದೊಂದು ಅನುಭವ ಅ೦ತ ... ಇ೦ತಹ ಅನುಭವ ಪಡೆಯೋ ಚಾನ್ಸ್ ಮಿಸ್ಮಾಡಿಕೊಂಡೆ ಅನಿಸುತ್ತಿದೆ....