Monday, August 8, 2011

ಬರೆದು ಮುಗಿಸಲು ಹೋಗಿ, ಬದುಕು ಮುಗಿಸಿದಳು.........


`ಸರ್ ನಮ್ಮೆಲ್ಲರ ಪ್ರೀತಿಯ ವೀಣಕ್ಕ ತೀರಿಕೊಂಡ್ರು' ಎಂಬ ಒಂದು ಸಾಲಿನ ಎಸ್ಎಂಎಸ್ ನನ್ನ ಕಣ್ಣನಿಗೂಡುವಂತೆ ಮಾಡಿಬಿಟ್ಟಿತು. ಧಾರವಾಡ ಪ್ರಜಾವಾಣಿ ಪತ್ರಿಕೆ ಫೋಟೋಗ್ರಾಫರ್ ಕೇದಾರ್ ಕಳುಹಿಸಿದ ಎಸ್ಎಂಎಸ್ ಇದು.
ವೀಣಕ್ಕ ಅಂದ್ರೆ ಬರಹಗಾರ್ತಿ ವೀಣಾ ಕುಲಕರ್ಣಿ . ಖ್ಯಾತ ಸಾಹಿತಿ ಎನ್ಕೆ ಕುಲಕರ್ಣಿ ಅವರ ಮೊಮ್ಮಗಳು. ಧಾರವಾಡದ ವಿದ್ಯಾವರ್ಧಕ ಸಂಘ ಇರಲಿ, ಲೇಖಕಿಯರ ಸಂಘವೇ ಇರಲಿ ಸಾಹಿತ್ಯ ಚಟುವಟಿಕೆಯಲ್ಲಿ ಈಕೆ ಸದಾ ಸ್ವಯಂ ಸೇವಕಿಯೇ. ಸಾಹಿತ್ಯ ಸಂಘಟನೆ, ಕನ್ನಡ ಪರ ಹೋರಾಟಗಳು ಇದ್ದಲೆಲ್ಲಾ ಈಕೆ ಹಾಜರ್. ಅವುಗಳ ಸುದ್ದಿ ಬರಲಿ ಎಂದು ಪತ್ರಿಕೆಗಳು ಬಯಸುವಷ್ಟೇ ಸುದ್ದಿಯನ್ನು ತಾನೇ ಬರೆದು ತಂದು ಕೊಡುತ್ತಿದ್ದಳು. ಗುತ್ತಿಗೆ ಆಧಾರದಲ್ಲಿ ಉಪನ್ಯಾಸಕಿಯಾಗಿದ್ದ ಈಕೆಗೆ ಇನ್ನು ಕೆಲವೇ ದಿನಗಳಲ್ಲಿ ನೌಕರಿ ಕಾಯಂ ಆಗುವುದಿತ್ತು. ಇದಕ್ಕಾಗಿ ಆಕೆ ಶ್ರಮಿಸಿದ್ದು ಬಹಳಷ್ಟು.
ಮೊನ್ನೆ ನಾನು ಸುವರ್ಣ ನ್ಯೂಸ್ ಬಿಟ್ಟು ಉದಯವಾಣಿ ಸೇರುವ ಮುನ್ನ ಇದ್ದ ನಿರುದ್ಯೋಗಿ ದಿನಗಳನ್ನು ಕಳೆಯಲು ಧಾರವಾಡಕ್ಕೂ ಹೋಗಿದ್ದೆ. ಆ ಸಂದರ್ಭದಲ್ಲಿ ವೀಣಕ್ಕನ ನೋಡಲು ಹೋದವನು ಹೆಚ್ಚು ಹೊತ್ತು ಆಕೆಯ ಮುಂದೆ ಕುಳಿತರೆ ಭಾವುಕನಾಗಿ ಕಣ್ಣೀರು ಹಾಕಿಬಿಟ್ಟೇನು ಎಂದು ಎದ್ದು ಬಂದಿದೆ.
ಆಕೆಗೆ ನಾಲ್ಕು ತಿಂಗಳ ಹಿಂದೆ ಬ್ರೇನ್ ಹ್ಯಾಮರೇಜ್ ಆಗಿತ್ತು. ಅಂದ್ರೆ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಎರಡು ಬಗೆಯ ಆಪರೇಷನ್ ಆಗಿತ್ತು. ಮೊದಲಿಗೆ ಮಾತನಾಡಲು ಮರೆತಿದ್ದ ವೀಣಕ್ಕ, ಮಾತನಾಡಲು ತೊಡಗಿದ್ದಳಂತೆ. ಆದ್ರೆ, ಯಾರನ್ನು ಗುರುತಿಸುವುದಾಗಲಿ, ಹಳೆಯ ನೆನಪಾಗಲಿ ಇಲ್ಲದೆ ಮಂಕಾಗಿ ನೋಡುತ್ತಾ ಕೂರುತಿದ್ದಳಂತೆ. ಆಪರೇಷನ್ ಆದ ತಿಂಗಳ ಬಳಿಕೆ ಸ್ವಲ್ಪ ಮಾತನಾಡ ತೊಡಗಿದ ವೀಣಕ್ಕ, ಒಬ್ಬಿಬ್ಬರನ್ನು ಗುರುತು ಹಿಡಿಯತೊಡಗಿದ್ದಳು. ಆಕೆಯನ್ನು ಕಾಡಿಸಿ, ಕೀಟಲೆ ಮಾಡುತ್ತಿದ್ದ ಪತ್ರಕರ್ತ ತಮ್ಮಂದಿರು ಆಕೆಗೆ ಹಳೆಯದನ್ನು ನೆನಪಿಸಲು ಆಗಾಗ ಹೋಗಿ ಮಾತನಾಡಿಸಿ ಬರುತ್ತಿದ್ದರು.
ಮೊನ್ನೆ ನಾನು ಅವರ ಮನೆಗೆ ಕಾಲಿಟ್ಟಾಗ ಆಕೆ ದಿವಾನ್ ಕಾಟ್ ಮೇಲೆ ಕುಳಿತಿದ್ದಳು. ಕಪ್ಪಿಟ್ಟು, ವೃದ್ಧರಿಗೆ ಮೂಡಿದಂತೆ ನೆರಿಗೆ ಮೂಡಿದ್ದ ಮುಖದ ಮೇಲೆ ಅರಿಶಿನ ಹಚ್ಚಿದ್ದರು. ಅದೇ ತಾನೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಬಂದಿದ್ದರು ಆಕೆಯ ವೃದ್ದ ತಂದೆ ತಾಯಂದಿರು. ಮೊದಲಿಗೆ ನನ್ನ ಗುರುತು ಹಿಡಿಯದ ವೀಣಕ್ಕ, `ನೀನು ಅ..ಅ..ಅ ಕನ್ನಡಪ್ರಭದಲ್ಲಿದ್ದೆ ಅಲ್ಲೇನು. ಸಾಧನಕೇರಿ ಬಗ್ಗೆ ಭಾರಿ ಬರಿತಿದ್ದಲ್ಲಾ, ಈಗ ಛಲೋ ಆಗ್ಯಾದ. ಹೋಗಿ ನೋಡ್ಕಂಡ್ ಬಾ... ಅಂದ್ಲು. ನಿನ್ನ ನಂಬರ್ ನನಪದಾ ನನಗೆ, ಅವಿನಾಶ ಅಲ್ಲೇನು ನೀನು. ಈಗ ನೆನಪಾತು ನೋಡು. 6 ಪುಸ್ತಕ ಬರೀಲಿಕ್ಕ ಕುಂತೆ. ಆರೋಗ್ಯ ಕೆಡ್ತು. ಎಲ್ಲಾ ಸರಿ ನಿಮ್ಮ ರಂಗನಾಥ್ ಯಾಕ್ ಟಿವಿಲಿ ಬರೋದ್ ಬಿಟ್ಟಾರ ಅಂದ್ಲು.' ನನ್ನ ಹೆಸರು ಮರೆತಿದ್ದೀಯ, ನಮ್ಮ ರಂಗನಾಥ್ ನೆನಪಿದ್ದಾರಲ್ಲ ಅಂದೆ. `ಛಲೋ ಮಾತಾಡ್ತಾರ ಅವ್ರು. ಲಗ್ನಕ್ಕೆ ಕರೀತಿನಿ ಅಂದಿದ್ದೆ. ನನಗ ಹೇಳ್ದೆ ಲಗ್ನ ಆಗಿಬಿಟ್ಯಾ' ಇಲ್ಲಕ್ಕ ಲಗ್ನ ಆಗಿಲ್ಲ. ಆಗೋವಾಗ ನಿನಗೆ ಹೇಳದೆ ಆಗ್ತೀನಾ? ಟಿವಿ ಬಿಟ್ಟು ಉದಯವಾಣಿ ಸೇರಿಕೊಂಡೆ. ಡೆಲ್ಲಿಗೆ ಹೊಂಟೀನಿ ಅಂದೆ. ಬಾಳ ಛಲೋ ಆತು. ನಾನು ಡೆಲ್ಲಿ ನೋಡಿದ್ದೆ, ಮತ್ತೊಮ್ಮೆ ನೋಡ್ಬೇಕು ಬರ್ತೀನಿ. ಆರೋಗ್ಯ ಸರಿ ಆದ ಕೂಡ್ಲೆ ಪುಸ್ತಕ ಬರೆದು ಮುಗಿಸ್ತೀನಿ ಬರ್ಬೇಕು. ಮೊದ್ಲು ನೀನು ಲಗ್ನ ಆಗು.... ಮತ್ತೆ ಪೇಪರ್ ಸೇರಿ ಚಲೋ ಮಾಡಿದೆ' ಅಂದವಳೇ ಬಿಡದೇ ಬಾಳೆಹಣ್ಣು ನೀಡಿ ತಿನ್ನಿಸಿದ್ದಳು ವೀಣಕ್ಕ. ಖಂಡಿತ ನೀನು ಮೊದ್ಲಂಗೆ ಆಗ್ತೀ ಅಕ್ಕ, ಡೆಲ್ಲಿ ತೋರಿಸ್ತೀನಿ ಬರಬೇಕು. ಪುಸ್ತಕ ಒಂದೊಂದಾಗಿಯೇ ಬರಿ ಎಂದು ಭಾವುಕನಾಗಿ ಎದ್ದು ಬಂದಿದ್ದೆ.
ಮದುವೆ ಆಗದೆ ಇದ್ದ ವೀಣಕ್ಕನ ವೈಯಕ್ತಿಕ ಬದುಕಿನ ಸಮಸ್ಯೆಗಳು ಹಲವು. ವೈಯಕ್ತಿಕ ಸಮಸ್ಯೆ ಎಲ್ಲೂ ತೋರಿಸಿಕೊಳ್ಳದೆ ನಗು ನಗುತ್ತಾ ಬರೆಯುತ್ತಿದ್ದ, ಸಾಹಿತ್ಯ ಸಂಘಟನೆಯಲ್ಲಿ ತೊಡುಗುತ್ತಿದ್ದ ವೀಣಕ್ಕ ಇನ್ನಿಲ್ಲವಾಗಿದ್ದಾಳೆ. ಧಾರವಾಡದಲ್ಲಿ ನನ್ನ ವರದಿ, ಲೇಖನಗಳಿಗೆ ಸದಾ ವಿಮರ್ಶೆ, ಮೆಚ್ಚುಗೆ, ಕೋಪ ಪ್ರದರ್ಶಿಸುತ್ತಿದ್ದ ಕೆಲವರ ಪೈಕಿ ವೀಣಕ್ಕ ಪ್ರಮುಖಳು. ನಾನು ಟಿವಿ ಸೇರಿದಾಗ ಫೋನ್ ಮಾಡಿ ಬರೆಯೋದು ಬಿಡ ಬ್ಯಾಡವೋ ಅಂದಿದ್ದಳು. ಬೆಂಗಳೂರು ಆಕಾಶವಾಣಿಯ ಕಾರ್ಯಕ್ರಮವೊಂದಕ್ಕೆ ಬಂದಾಗ ನನಗಾಗಿ ಕಾದು ಭೇಟಿಯಾಗಿ ಹರಸಿ ಹೋಗಿದ್ದ ವೀಣಕ್ಕ ಈಗ ಬಾರದ ಊರಿಗೆ ಹೋಗಿಬಿಟ್ಟಿದ್ದಾಳೆ. ಅವಳ ಪುಸ್ತಕಗಳು ಅರ್ಧಮರ್ಧ ಆಗಿಬಿಟ್ಟಿವೆ....ಪುಸ್ತಕ ಬರೆದು ಮುಗಿಸಲು ಹೋಗಿ, ಬದುಕು ಮುಗಿಸಿಕೊಂಡು ಹೋಗಿದ್ದಾಳೆ ವೀಣಕ್ಕ
ಅವಳಿಗೆ ಶಾಂತಿ ಸಿಗಲಿ. ಮುಂದಿನ ಜನ್ಮ ಅನ್ನೋದು ಇರೋದೆ ಆದ್ರೆ, ಆಕೆಗೆ ನೋವಿಲ್ಲದ ನೆಮ್ಮದಿಯ ಜೀವನ ಸಿಗಲಿ.........

3 comments:

maru said...

baravanige baduku andukondu baduke koneyaytalla anta bejar aytu. pustakada ardambarda putagalante baduku ardhakke nintu hoytalla anta besara. nanna akkana kaledukodu novu venakka kathe odi nenapaytu sir...

ಪತ್ರೇಶ್ ಹಿರೇಮಠ್ said...

ಅಶೋಕ ಶೆಟ್ಟರ್ ಸಾರ್ ಕೂಡಾ ತಮ್ಮ ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡಿದ್ರು ವೀಣಾ ಮೇಡಂ ಬಗ್ಗೆ ತಮ್ಮ ಅಭಿಮಾನ ಗುರುವಿನ ಮಮತೆ ಮರೆಯಲಾಗದ್ದು....

Srikanth, Mysore said...

ಅಣ್ಣ ವೀಣಕ್ಕನ ಬಗ್ಗೆ ಓದಿ ಬಹಳ ಬೇಸರವಾಯ್ತು. ಕಡೆಯ ಎರಡು ಸಾಲು ಓದುವಾಗ ಅಯ್ಯೋ ಅನಿಸಿತು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ..ಅವರನ್ನು ನಾನು ನೋಡಿಲ್ಲ, ಆದರೂ ಅವರ ಕಥೆ ಕೇಳಿ ಬಹಳ ಬೇಜಾರಾಯಿತು..