Tuesday, August 30, 2011

ಗಲ್ಲಿ ಟು ಡೆಲ್ಲಿ.....



ದಿಲ್ಲಿಗೆ ಬಂದು ಒಂದು ತಿಂಗಳಾಗಿ ಹೋಯಿತು. ನನಗೆ ಇನ್ನೂ ಜಾಸ್ತಿ ದಿನ ಆಗಿಬಿಟ್ಟಿದೆ ಅಂತ ಫೀಲ್ ಆಗ್ತಿದೆ. ವಿಚಿತ್ರ ಹವಾಗುಣದ ಈ ಊರನ್ನು ಅರ್ಥ ಮಾಡಿಕೊಳ್ಳೋ ಓಡಾಟದಲ್ಲಿ ದಿನ ಕಳಿತಾ ಇದೆ. ಬರ್ತಾ ಇದ್ದ ಹಾಗೆ ಯಡಿಯೂರಪ್ಪ ರಾಜೀನಾಮೆ ಪ್ರಕರಣ, ಅದಾದ ನಂತರ ಅಣ್ಣಾ ಹಜಾರೆ ಆಂದೋಲನಕ್ಕೆ ಸಾಕ್ಷಿಯಾಗೋ ಅವಕಾಶ ಸಿಕ್ಕಿತು.
ಈ ದಿಲ್ಲಿಯಲ್ಲಿ ಓಡಾಡಬೇಕು, ಕೆಲಸ ಮಾಡಬೇಕು ಅನ್ನೋದು ಇಂದು ನಿನ್ನೆಯ ಆಸೆ ಅಲ್ಲ. ಕಾಲೇಜಿನಲ್ಲಿ ಇದ್ದಾಗಲೇ ದೆಹಲಿಯಲ್ಲಿ ಕೆಲಸ ಮಾಡಬೇಕು ಅನ್ನೋ ಕನಸು ಹಂಚಿಕೊಂಡಿದ್ದೆ. ಅದನ್ನು ಅರಿತಿದ್ದ ಈ ಟಿವಿಯಲ್ಲಿದ್ದ ಗೆಳೆಯ ಚೇತನ್ (ಈಗ ಬೆಂಗಳೂರು ಇಂಡಿಯನ್ ಎಕ್ಸಪ್ರೆಸ್ನಲ್ಲಿ ಇದ್ದಾನೆ) 2008ರಲ್ಲಿ ಈಟಿವಿಯಿಂದ ದೆಹಲಿಗೆ ಬರೋ ಅವಕಾಶ ಕೊಡಿಸಿದ್ದ. ಬಟ್ ಅನಿವಾರ್ಯ ಕಾರಣಗಳಿಂದ ನಾನು ಬಂದಿರಲಿಲ್ಲ. ಆದ್ರೆ, ದೆಹಲಿಯ ಆಸೆ ಮಾತ್ರ ಹಾಗೇ ಇತ್ತು. ಅದಕ್ಕೆ ಮತ್ತೆ ಅವಕಾಶ ನೀಡಿದವರು ಉದಯವಾಣಿಯ ರವಿಹೆಗಡೆ.
ದೆಹಲಿಯ ಫು ಟ್ಪಾತ್ ಮೇಲೆ ಒಬ್ಬನೇ ಓಡಾಡುವಾಗ ಏನೇನೋ ನೆನಪಾಗುತ್ತೆ. ವೆಟರನರಿ ಡಾಕ್ಟರೋ, ಬಿಎಸ್ಸಿ ಅಗ್ರಿ ಮಾಡಬೇಕು ಅನ್ನೋ ಆಸೆಯಿಂದ ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡಿದ್ದೆ. ಆದರೆ ಓದುವಾಗ ಗಮನ ಎಲ್ಲೆಲ್ಲೋ ಹರಿಯಿತು. ಟ್ಯೂಷನ್ಗೆ ಹೋಗದೇ ಪಾಸ್ ಮಾಡಬೇಕು ಅನ್ನೋ ನನ್ನ ನಿಧರ್ಾರವನ್ನು ಬದಲಿಸಿದ್ದು ಗೆಳೆಯ ತಪ್ಲೆ. ಟ್ಯೂಷನ್ಗೆ ಹೋಗಲು ಶುರುಮಾಡಿದವನು ಓದುವುದು ಬಿಟ್ಟೆ. .......... ಹಿಂದೆ ತಿರುಗುವುದು ಕಲಿತೆ. ಅದು ನನ್ನ ಭ್ರಮೆ ಅಂತ ಅರಿವಾಗುವಷ್ಟರಲ್ಲಿ ಮನೆಯಲ್ಲಿ ಅಪ್ಪ - ಚಿಕ್ಕಪ್ಪನ ತಲ್ಲಣ. ನಾನು ಭೂಮಿತಾಯಿ ನಂಬಿದವನಂತೆ ಗದ್ದೆ ಕೆಲಸಕ್ಕೆ ಇಳಿದುಬಿಟ್ಟೆ. ಕನ್ನಡ, ಇಂಗ್ಲಿಷು ಮತ್ತು ಬಯೋಲಾಜಿ ಮಾತ್ರ ಪಾಸಾಯಿತು. ಉಳಿದ ಮೂರರಲ್ಲೂ ಫೇಲು. ಅದನ್ನು ನಂಬಲು ಮನೆಯವರಿರಲಿ, ನನ್ನ ಹಿಂದೆ ಮುಂದೆ ಪರೀಕ್ಷೆಗೆ ಕುಳಿತಿದ್ದ ಹುಡುಗ - ಹುಡುಗಿಯರು ನಂಬಲು ರೆಡಿ ಇರಲಿಲ್ಲ. ಕಾರಣ, ಪರೀಕ್ಷೆ ಬರೆಯುವಾಗ ಅಷ್ಟೊಂದು ಅಡಿಷನಲ್ ಶೀಟ್ ತೆಗೆದುಕೊಂಡಿದ್ದೆ....!
ಆಮೇಲೆ ಸಪ್ಲಿಮೆಂಟರಿ ಪರೀಕ್ಷೆಯನ್ನು ಅಪ್ಪ - ಅಮ್ಮನ ಒತ್ತಾಯಕ್ಕೆ ಕಟ್ಟಿದೆ. ಅಮ್ಮನಿಗೋ ನನ್ನ ಮಗ ಗದ್ದೆ ಕೆಲಸಕ್ಕೆ ಇಳಿದು ಫೇಲ್ ಮಾಡಿಕೊಂಡ ಅಂತ ತಪ್ಪು ತಿಳಿದಳು. ನಾನೋ ಮೊದಲ ಪರೀಕ್ಷೆಯಲ್ಲಿ ತೆಗೆದುಕೊಂಡ ಅಡಿಷನಲ್ ಶೀಟ್ನ ಸಾಲ ತೀರಿಸುವವನಂತೆ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಖಾಲಿ ಹಾಳೆ ಕೊಟ್ಟು ಎದ್ದು ಬರುತ್ತಿದ್ದೆ. ಒಂದು ದಿನ ಫಿಸಿಕ್ಸ್ ಲೆಕ್ಚರರ್ ಹೇಮಲತಾ ಮೇಡಂ ಖಾಲಿ ಯಾಕೋ, ಏನು ಬರೆದಿಲ್ಲ ಅಂತ ಹಾಕಿದ ಪ್ರಶ್ನೆಗೆ, `ವ್ಯಾಲ್ಯೂವೇಷನ್ ಮಾಡೋರಿಗೆ ಕಾಣ್ಸುತ್ತೆ ಬಿಡಿ' ಅಂತ ಉಡಾಫೆ, ಉದ್ದಟತನದ ಮಾತನಾಡಿ ಬಂದಿದ್ದೆ. ಕಾಲೇಜಿನಲ್ಲಿ ನನ್ನ ಇಮೇಜು ಹಾಗೆ ಇದ್ದುದ್ದರಿಂದ ಅವರು ತಿರುಗಿ ಮಾತನಾಡಲು ಹೋಗಿರಲಿಲ್ಲ.
ಅಷ್ಟರಲ್ಲಿ ಅಪ್ಪ - ಚಿಕ್ಕಪ್ಪನ ಜಗಳಗಳಿಂದಾಗಿ ಜಮೀನು ಚಿಕ್ಕದಾಯ್ತು. ಜಮೀನು ಮಾಡಿಸಲು ಇನ್ಯಾರಿಗೋ ಕೊಟ್ಟರು. ಫೇಲಾಗಿದ್ದ ನನಗೆ ನಿತ್ಯ ಬೈಗುಳ, ನಿಂದನೆ ಕಾಮನ್ ಆಗಿತ್ತು. ಅಷ್ಟರಲ್ಲಿ ನನ್ನ ಅಮ್ಮನ ಗೋಳು ನೋಡಲಾಗದೇ ನಾನು ಕಂಪ್ಯೂಟರ್ ಕೋಸರ್್ ಒಂದಕ್ಕೆ ಸೇರಿದೆ. ಮಂಡ್ಯದ ಸುಭಾಷ್ನಗರದ ಗೈಸ್ ಗ್ರಾಫಿಕ್ಸ್ ನನ್ನ ಬದುಕು ಬದಲಾಗಲು ಮುನ್ನುಡಿ ಬರೆಯಲಾರಂಭಿಸಿತು. ಅಲ್ಲಿ ಸ್ಕ್ರೀನ್ ಪ್ರಿಂಟಿಂಗ್ ಕಲಿತು ಅಚ್ಚರಿ ಸ್ಕ್ರೀನ್ ಪ್ರಿಂಟರ್ಸ್ ಅನ್ನು ಶುರುಮಾಡಿದ್ದ ನನಗೆ, ಹಾಯ್ ಬೆಂಗಳೂರಿನ ನಿರಂತರ ಓದು ಪತ್ರಕರ್ತನಾಗುವತ್ತ ಪ್ರೇರೇಪಿಸಲಾರಂಭಿಸಿತ್ತು. ಅಷ್ಟರಲ್ಲಿ ಪ್ರೈವೇಟ್ ಆಗಿ ಪಿಯುಸಿ ಆಟ್ಸರ್್ ಎಕ್ಸಾಮ್ ತೆಗೆದುಕೊಂಡು ಪಾಸ್ ಮಾಡಿದೆ. ಅದರಲ್ಲಿ ನನಗೆ ಶೇ. 74 ರಷ್ಟು ಮಾಕ್ಸರ್್ಗಳು. ಅಷ್ಟು ಮಾಕ್ಸರ್್ ತೆಗೆಯಬಲ್ಲೆ ಅಂತ ಕಾನ್ಫಿಡೆನ್ಸ್ ಕೊಟ್ಟಿದ್ದು ಸಾಹಿತ್ಯದ ಓದು. ಕೆಲವರ ಆತ್ಮಕಥೆಗಳು.
ನನಗೆ ಮೈಸೂರಿನ ಮಹಾರಾಜ ಕಾಲೇಜು ಇದೆ, ಪತ್ರಿಕೋದ್ಯಮ ಕೋಸರ್್ ಇದೆ ಅಂತ ತಿಳಿಸಿದ್ದು, ಆಗ ಮಂಡ್ಯದಿಂದ ಟೈಮ್ಸ್ ಆಫ್ ಇಂಡಿಯಾ ಹಾಗೂ ಈಟಿವಿಗೆ ವರದಿ ಮಾಡುತ್ತಿದ್ದ ಟಿ.ಆರ್. ಸತೀಶ್. ಮಹಾರಾಜ ಕಾಲೇಜಿನ ಆ ಕಟ್ಟಡ, ಹುಡುಗರು ಎಲ್ಲಾ ನೋಡಿ ನನಗೆ ಸೀಟು ಸಿಗದು ಎಂದುಕೊಂಡಿದ್ದೆ. ನನ್ನ ಅಪ್ಪನಿಗೋ ನನ್ನನ್ನು ಲಾಯರ್ ಮಾಡಬೇಕು ಅನ್ನೋ ಹಟ. ನನ್ನ ಅಪ್ಪನ ಮಾತಿಗೆ ಬೆಲೆ ಕೊಡದೇ ಮೈಸೂರು ಬಸ್ಸು ಹತ್ತಿದೆ. ಅಲ್ಲಿಗೆ ರೈತನಾಗುವ ನನ್ನ ಆಸೆ ಮುಗಿದು ಹೊಸದೊಂದು ಗುರಿ ಮುಟ್ಟಲು ಓಡಲು ಶುರುಮಾಡಿದೆ......
ಯಾಕೋ ಏನೇನೋ ನೆನಪು. ದಿಲ್ಲಿಯ ಫುಟ್ಪಾತ್ ತುಂಬಾ ನೇರಳೆ ಹಣ್ಣುಗಳ ಆತ್ಮಹತ್ಯೆ ಆಗಿದೆ. ಅವಳಿಗೆ ನೇರಳೆ ಹಣ್ಣು ಅಂದರೆ ತುಂಬಾ ಇಷ್ಟ. ಯಾಕೋ ಈ ನೇರಳೆ ಹಣ್ಣುಗಳಂತೆಯೇ ನನ್ನ ಅವಳ ಕನಸೂ ಆತ್ಮಹತ್ಯೆ ಮಾಡಿಕೊಂಡಿತೇ.......!?.
ಅದೆಲ್ಲಕ್ಕಿಂತ ಹೆಚ್ಚಾಗಿ ನನ್ನ ವಿದ್ಯಾಥರ್ಿ ದಿನಗಳಿಂದಲೇ ಬಹುವಾಗಿ ಇಷ್ಟ ಪಡುತ್ತಿದ್ದ ಹಿರಿಯ ಪತ್ರಕರ್ತ ಡಿ. ಉಮಾಪತಿ ಅವರ ನೇತೃತ್ವದಲ್ಲಿ ನಾನು ಮತ್ತು ನನ್ನಂತೆಯೇ ದೆಹಲಿಗೆ ಹೊಸಬನಾಗಿರುವ ಟಿವಿ 9 ಗೆಳೆಯ ಚಂದ್ರಮೋಹನ್ಗೆ ಆತ್ಮೀಯ ಸ್ವಾಗತ, ಔತಣ ದೊರೆಯಿತು. ಮನೆ ನೆನಪಿಸುವಂತಹ ಸೊಪ್ಪು - ಮುದ್ದೆ ಊಟ ಹಾಕಿಸಿ ಹಿರಿಯರೆಲ್ಲಾ ಒಂದಷ್ಟು ಸಲಹೆ, ಉತ್ತಮವಾದುದೊಂದು ಪುಸ್ತಕ ಕೊಟ್ಟರು. ಕಷ್ಟ ಬಂದಾಗ ನಮ್ಮ ಹೆಗಲು ಇರುತ್ತೆ ಮರೆಯದಿರಿ, ಚನ್ನಾಗಿ ಕೆಲಸ ಮಾಡಿ ಎನ್ನೋ ಅಭಯವನ್ನೂ ನೀಡಿದರು.
ಆ ಔತಣ ಕೂಟದಲ್ಲಿ ದೆಹಲಿಯಲ್ಲಿರೂ ಕನ್ನಡಿಗ ಪತ್ರಕರ್ತರು ಸೇರಿದ್ದರು. ದಿ ವೀಕ್ ಸಂಪಾದಕ ಸಚ್ಚಿ, ಔಟ್ಲುಕ್ನ ಕೃಷ್ಣಪ್ರಸಾದ್, ಡೆಕ್ಕನ್ ಹೆರಾಲ್ಡ್ನ ಅರುಣ್, ಅಜಿತ್ ಅತ್ರಾಡಿ ಟೈಮ್ಸ್ ನೌನ ಅನೂಪ್ ಅವರು ಇಂಗ್ಲಿಷ್ ಪತ್ರಕರ್ತರಾದರು ಕನ್ನಡಿಗರು. ದೆಹಲಿಗೆ ಕನ್ನಡಿಗ ಪತ್ರಕರ್ತರು ಬಂದರೆ ಇವರು ಆತ್ಮೀಯರಾಗುತ್ತಾರೆ. ಕೈಲಾದ ಸಹಾಯ ಮಾಡುತ್ತಾರೆ. ಇನ್ನು ಕನ್ನಡದ ಎಲ್ಲಾ ಪತ್ರಕರ್ತರು ಒಂದೆಡೆ ಸೇರಿದ್ದೆವು ಅನ್ನೋ ಖುಷಿ ಇತ್ತು. ಎಲ್ಲರಿಂದಲೂ ಸಹಕಾರ ದೊರೆಯುತ್ತಿದೆ. ಕೆಲಸದ ಜೊತೆಗೆ, ಹೊಸದೇನೋ ಕಲಿಯುವ ಹುಮ್ಮಸ್ಸು. ಜೊತೆಗೆ, ಯಾಕೋ ನಾನು ಅಷ್ಟು ಇಷ್ಟ ಪಡದ ಬೆಂಗಳೂರು, ಅನಿವಾರ್ಯವಾಗಿ ಸೇರಿದ್ದ ಟಿವಿ ಕೆಲಸವೂ ಪದೇ ಪದೇ ನೆನಪಾಗುತ್ತೆ.
ನನ್ನ ಗೆಳೆಯರು, ಅಪ್ಪ - ಅಮ್ಮ ಯಾರೂ ನಾನು ಪತ್ರಕರ್ತನಾಗುವೆ ಎಂದು ಊಹಿಸಿರಲಿಲ್ಲ. ನನ್ನೊಳಗಿನ ಪತ್ರಕರ್ತನ ಮೊದಲು ಗುರುತಿಸಿದ್ದು ಎಚ್.ಆರ್. ರಂಗನಾಥ್ ಮತ್ತು ಕೂಡ್ಲಿ ಗುರುರಾಜ್. ಅವರಿಬ್ಬರು ಸೇರಿ ಮೈಸೂರಲ್ಲಿ ಅತ್ಯುತ್ತಮ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಳಿ ಕಳುಹಿಸಿದರು. ಅವರು ನನ್ನ ತಿದ್ದಿತೀಡಿ ಪತ್ರಕರ್ತನಾಗಿಸಿದರು. ಆನಂತರ ರಂಗನಾಥ್ ಮತ್ತು ರವಿಹೆಗಡೆ ಉತ್ತಮ ಅವಕಾಶ ನೀಡುತ್ತಾ ಬಂದರು. ಇದಕ್ಕೆ ನೆರವು ನೀಡಿದ್ದು ನೂರಾರು ಕೈಗಳು. ಇಷ್ಟು ದಿನ ಸಿಕ್ಕಂತೆಯೇ ಇಲ್ಲೂ ನೆರವು ಸಿಗೋ ಲಕ್ಷಣ ಗೋಚರಿಸಿದೆ. ನಾನು ಅದನ್ನು ಬಳಸಿಕೊಳ್ಳುತ್ತೇನಾ? ಬೆಳೆಯುತ್ತೇನಾ? ಗೊತ್ತಿಲ್ಲ. ಮಂಡ್ಯ ತಾಲೂಕು ಹನಕೆರೆ ಗಲ್ಲಿಯಿಂದ ಹೊರಟವನು ದಿಲ್ಲಿಗೆ ಬಂದಿದ್ದೇನೆ. ಯಾಕೋ ನೆನಪುಗಳಿಂದ ತಪ್ಪಿಸಿಕೊಳ್ಳೋದು? ನೆರವು ನೀಡಿದವರನ್ನ ಮರೆಯೋದು ಕಷ್ಟ... ಕಷ್ಟ... ಕಷ್ಟ....

(ಅಣ್ಣಾ ಹಜಾರೆ ಉಪವಾಸ ಮುಗಿಸಿದ ನಂತರ ಜನಶ್ರೀ ಗೆಳೆಯ ರಾಘವಶಮರ್ಾ, ನವೀನ್ ಮತ್ತು ಸಂಡೆ ಇಂಡಿಯನ್ನ ಡಿಸೈನರ್ ಪ್ರಕಾಶ್ ಶೆಟ್ಟಿ ಜೊತೆ ಪೋಸ್ ಕೊಟ್ಟೆವು ಹೀಗೆ...)

Monday, August 8, 2011

ಬರೆದು ಮುಗಿಸಲು ಹೋಗಿ, ಬದುಕು ಮುಗಿಸಿದಳು.........


`ಸರ್ ನಮ್ಮೆಲ್ಲರ ಪ್ರೀತಿಯ ವೀಣಕ್ಕ ತೀರಿಕೊಂಡ್ರು' ಎಂಬ ಒಂದು ಸಾಲಿನ ಎಸ್ಎಂಎಸ್ ನನ್ನ ಕಣ್ಣನಿಗೂಡುವಂತೆ ಮಾಡಿಬಿಟ್ಟಿತು. ಧಾರವಾಡ ಪ್ರಜಾವಾಣಿ ಪತ್ರಿಕೆ ಫೋಟೋಗ್ರಾಫರ್ ಕೇದಾರ್ ಕಳುಹಿಸಿದ ಎಸ್ಎಂಎಸ್ ಇದು.
ವೀಣಕ್ಕ ಅಂದ್ರೆ ಬರಹಗಾರ್ತಿ ವೀಣಾ ಕುಲಕರ್ಣಿ . ಖ್ಯಾತ ಸಾಹಿತಿ ಎನ್ಕೆ ಕುಲಕರ್ಣಿ ಅವರ ಮೊಮ್ಮಗಳು. ಧಾರವಾಡದ ವಿದ್ಯಾವರ್ಧಕ ಸಂಘ ಇರಲಿ, ಲೇಖಕಿಯರ ಸಂಘವೇ ಇರಲಿ ಸಾಹಿತ್ಯ ಚಟುವಟಿಕೆಯಲ್ಲಿ ಈಕೆ ಸದಾ ಸ್ವಯಂ ಸೇವಕಿಯೇ. ಸಾಹಿತ್ಯ ಸಂಘಟನೆ, ಕನ್ನಡ ಪರ ಹೋರಾಟಗಳು ಇದ್ದಲೆಲ್ಲಾ ಈಕೆ ಹಾಜರ್. ಅವುಗಳ ಸುದ್ದಿ ಬರಲಿ ಎಂದು ಪತ್ರಿಕೆಗಳು ಬಯಸುವಷ್ಟೇ ಸುದ್ದಿಯನ್ನು ತಾನೇ ಬರೆದು ತಂದು ಕೊಡುತ್ತಿದ್ದಳು. ಗುತ್ತಿಗೆ ಆಧಾರದಲ್ಲಿ ಉಪನ್ಯಾಸಕಿಯಾಗಿದ್ದ ಈಕೆಗೆ ಇನ್ನು ಕೆಲವೇ ದಿನಗಳಲ್ಲಿ ನೌಕರಿ ಕಾಯಂ ಆಗುವುದಿತ್ತು. ಇದಕ್ಕಾಗಿ ಆಕೆ ಶ್ರಮಿಸಿದ್ದು ಬಹಳಷ್ಟು.
ಮೊನ್ನೆ ನಾನು ಸುವರ್ಣ ನ್ಯೂಸ್ ಬಿಟ್ಟು ಉದಯವಾಣಿ ಸೇರುವ ಮುನ್ನ ಇದ್ದ ನಿರುದ್ಯೋಗಿ ದಿನಗಳನ್ನು ಕಳೆಯಲು ಧಾರವಾಡಕ್ಕೂ ಹೋಗಿದ್ದೆ. ಆ ಸಂದರ್ಭದಲ್ಲಿ ವೀಣಕ್ಕನ ನೋಡಲು ಹೋದವನು ಹೆಚ್ಚು ಹೊತ್ತು ಆಕೆಯ ಮುಂದೆ ಕುಳಿತರೆ ಭಾವುಕನಾಗಿ ಕಣ್ಣೀರು ಹಾಕಿಬಿಟ್ಟೇನು ಎಂದು ಎದ್ದು ಬಂದಿದೆ.
ಆಕೆಗೆ ನಾಲ್ಕು ತಿಂಗಳ ಹಿಂದೆ ಬ್ರೇನ್ ಹ್ಯಾಮರೇಜ್ ಆಗಿತ್ತು. ಅಂದ್ರೆ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಎರಡು ಬಗೆಯ ಆಪರೇಷನ್ ಆಗಿತ್ತು. ಮೊದಲಿಗೆ ಮಾತನಾಡಲು ಮರೆತಿದ್ದ ವೀಣಕ್ಕ, ಮಾತನಾಡಲು ತೊಡಗಿದ್ದಳಂತೆ. ಆದ್ರೆ, ಯಾರನ್ನು ಗುರುತಿಸುವುದಾಗಲಿ, ಹಳೆಯ ನೆನಪಾಗಲಿ ಇಲ್ಲದೆ ಮಂಕಾಗಿ ನೋಡುತ್ತಾ ಕೂರುತಿದ್ದಳಂತೆ. ಆಪರೇಷನ್ ಆದ ತಿಂಗಳ ಬಳಿಕೆ ಸ್ವಲ್ಪ ಮಾತನಾಡ ತೊಡಗಿದ ವೀಣಕ್ಕ, ಒಬ್ಬಿಬ್ಬರನ್ನು ಗುರುತು ಹಿಡಿಯತೊಡಗಿದ್ದಳು. ಆಕೆಯನ್ನು ಕಾಡಿಸಿ, ಕೀಟಲೆ ಮಾಡುತ್ತಿದ್ದ ಪತ್ರಕರ್ತ ತಮ್ಮಂದಿರು ಆಕೆಗೆ ಹಳೆಯದನ್ನು ನೆನಪಿಸಲು ಆಗಾಗ ಹೋಗಿ ಮಾತನಾಡಿಸಿ ಬರುತ್ತಿದ್ದರು.
ಮೊನ್ನೆ ನಾನು ಅವರ ಮನೆಗೆ ಕಾಲಿಟ್ಟಾಗ ಆಕೆ ದಿವಾನ್ ಕಾಟ್ ಮೇಲೆ ಕುಳಿತಿದ್ದಳು. ಕಪ್ಪಿಟ್ಟು, ವೃದ್ಧರಿಗೆ ಮೂಡಿದಂತೆ ನೆರಿಗೆ ಮೂಡಿದ್ದ ಮುಖದ ಮೇಲೆ ಅರಿಶಿನ ಹಚ್ಚಿದ್ದರು. ಅದೇ ತಾನೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಬಂದಿದ್ದರು ಆಕೆಯ ವೃದ್ದ ತಂದೆ ತಾಯಂದಿರು. ಮೊದಲಿಗೆ ನನ್ನ ಗುರುತು ಹಿಡಿಯದ ವೀಣಕ್ಕ, `ನೀನು ಅ..ಅ..ಅ ಕನ್ನಡಪ್ರಭದಲ್ಲಿದ್ದೆ ಅಲ್ಲೇನು. ಸಾಧನಕೇರಿ ಬಗ್ಗೆ ಭಾರಿ ಬರಿತಿದ್ದಲ್ಲಾ, ಈಗ ಛಲೋ ಆಗ್ಯಾದ. ಹೋಗಿ ನೋಡ್ಕಂಡ್ ಬಾ... ಅಂದ್ಲು. ನಿನ್ನ ನಂಬರ್ ನನಪದಾ ನನಗೆ, ಅವಿನಾಶ ಅಲ್ಲೇನು ನೀನು. ಈಗ ನೆನಪಾತು ನೋಡು. 6 ಪುಸ್ತಕ ಬರೀಲಿಕ್ಕ ಕುಂತೆ. ಆರೋಗ್ಯ ಕೆಡ್ತು. ಎಲ್ಲಾ ಸರಿ ನಿಮ್ಮ ರಂಗನಾಥ್ ಯಾಕ್ ಟಿವಿಲಿ ಬರೋದ್ ಬಿಟ್ಟಾರ ಅಂದ್ಲು.' ನನ್ನ ಹೆಸರು ಮರೆತಿದ್ದೀಯ, ನಮ್ಮ ರಂಗನಾಥ್ ನೆನಪಿದ್ದಾರಲ್ಲ ಅಂದೆ. `ಛಲೋ ಮಾತಾಡ್ತಾರ ಅವ್ರು. ಲಗ್ನಕ್ಕೆ ಕರೀತಿನಿ ಅಂದಿದ್ದೆ. ನನಗ ಹೇಳ್ದೆ ಲಗ್ನ ಆಗಿಬಿಟ್ಯಾ' ಇಲ್ಲಕ್ಕ ಲಗ್ನ ಆಗಿಲ್ಲ. ಆಗೋವಾಗ ನಿನಗೆ ಹೇಳದೆ ಆಗ್ತೀನಾ? ಟಿವಿ ಬಿಟ್ಟು ಉದಯವಾಣಿ ಸೇರಿಕೊಂಡೆ. ಡೆಲ್ಲಿಗೆ ಹೊಂಟೀನಿ ಅಂದೆ. ಬಾಳ ಛಲೋ ಆತು. ನಾನು ಡೆಲ್ಲಿ ನೋಡಿದ್ದೆ, ಮತ್ತೊಮ್ಮೆ ನೋಡ್ಬೇಕು ಬರ್ತೀನಿ. ಆರೋಗ್ಯ ಸರಿ ಆದ ಕೂಡ್ಲೆ ಪುಸ್ತಕ ಬರೆದು ಮುಗಿಸ್ತೀನಿ ಬರ್ಬೇಕು. ಮೊದ್ಲು ನೀನು ಲಗ್ನ ಆಗು.... ಮತ್ತೆ ಪೇಪರ್ ಸೇರಿ ಚಲೋ ಮಾಡಿದೆ' ಅಂದವಳೇ ಬಿಡದೇ ಬಾಳೆಹಣ್ಣು ನೀಡಿ ತಿನ್ನಿಸಿದ್ದಳು ವೀಣಕ್ಕ. ಖಂಡಿತ ನೀನು ಮೊದ್ಲಂಗೆ ಆಗ್ತೀ ಅಕ್ಕ, ಡೆಲ್ಲಿ ತೋರಿಸ್ತೀನಿ ಬರಬೇಕು. ಪುಸ್ತಕ ಒಂದೊಂದಾಗಿಯೇ ಬರಿ ಎಂದು ಭಾವುಕನಾಗಿ ಎದ್ದು ಬಂದಿದ್ದೆ.
ಮದುವೆ ಆಗದೆ ಇದ್ದ ವೀಣಕ್ಕನ ವೈಯಕ್ತಿಕ ಬದುಕಿನ ಸಮಸ್ಯೆಗಳು ಹಲವು. ವೈಯಕ್ತಿಕ ಸಮಸ್ಯೆ ಎಲ್ಲೂ ತೋರಿಸಿಕೊಳ್ಳದೆ ನಗು ನಗುತ್ತಾ ಬರೆಯುತ್ತಿದ್ದ, ಸಾಹಿತ್ಯ ಸಂಘಟನೆಯಲ್ಲಿ ತೊಡುಗುತ್ತಿದ್ದ ವೀಣಕ್ಕ ಇನ್ನಿಲ್ಲವಾಗಿದ್ದಾಳೆ. ಧಾರವಾಡದಲ್ಲಿ ನನ್ನ ವರದಿ, ಲೇಖನಗಳಿಗೆ ಸದಾ ವಿಮರ್ಶೆ, ಮೆಚ್ಚುಗೆ, ಕೋಪ ಪ್ರದರ್ಶಿಸುತ್ತಿದ್ದ ಕೆಲವರ ಪೈಕಿ ವೀಣಕ್ಕ ಪ್ರಮುಖಳು. ನಾನು ಟಿವಿ ಸೇರಿದಾಗ ಫೋನ್ ಮಾಡಿ ಬರೆಯೋದು ಬಿಡ ಬ್ಯಾಡವೋ ಅಂದಿದ್ದಳು. ಬೆಂಗಳೂರು ಆಕಾಶವಾಣಿಯ ಕಾರ್ಯಕ್ರಮವೊಂದಕ್ಕೆ ಬಂದಾಗ ನನಗಾಗಿ ಕಾದು ಭೇಟಿಯಾಗಿ ಹರಸಿ ಹೋಗಿದ್ದ ವೀಣಕ್ಕ ಈಗ ಬಾರದ ಊರಿಗೆ ಹೋಗಿಬಿಟ್ಟಿದ್ದಾಳೆ. ಅವಳ ಪುಸ್ತಕಗಳು ಅರ್ಧಮರ್ಧ ಆಗಿಬಿಟ್ಟಿವೆ....ಪುಸ್ತಕ ಬರೆದು ಮುಗಿಸಲು ಹೋಗಿ, ಬದುಕು ಮುಗಿಸಿಕೊಂಡು ಹೋಗಿದ್ದಾಳೆ ವೀಣಕ್ಕ
ಅವಳಿಗೆ ಶಾಂತಿ ಸಿಗಲಿ. ಮುಂದಿನ ಜನ್ಮ ಅನ್ನೋದು ಇರೋದೆ ಆದ್ರೆ, ಆಕೆಗೆ ನೋವಿಲ್ಲದ ನೆಮ್ಮದಿಯ ಜೀವನ ಸಿಗಲಿ.........

Wednesday, July 6, 2011

ಹಳೆ ನೆನಪಿನೊಂದಿಗೆ ಹೊಸ ದಾರಿಯಲ್ಲಿ



ಇವತ್ತಿನಿಂದ ನಾನು ಉದಯವಾಣಿ ವರದಿಗಾರ. ೨೦ ತಿಂಗಳ ಹಿಂದೆ ಸುವರ್ಣ ನ್ಯೂಸ್ ಸೇರೋವಾಗ, ೮ ವರ್ಷಗಳ ಹಿಂದೆ ಕನ್ನಡಪ್ರಭ ಸೇರೋವಾಗ ಇದ್ದ ಭಯವೇ ಇಂದು ಆಗ್ತಿದೆ. ದೆಹಲಿಯಲಿ ದುಡಿದು ಬದುಕಬಲ್ಲೆನ? ಅನ್ನೋ ಅನುಮಾನ, ಆತಂಕ ಇದ್ದೇ ಇದೆ. ಇನ್ನು ಸುವರ್ಣ ನ್ಯೂಸ್ ಸೇರೋವಾಗ ಇದ್ದ ಪರಕೀಯತೆ, ಅನಾಥ ಭಾವ ಮಾತ್ರ ಉದಯವಾಣಿಯಲ್ಲಿ ಕಾಡದು ಅಂದುಕೊಂಡಿದ್ದೇನೆ.
ಸುವರ್ಣ ಸೇರಿದಾಗ ಕೆಲಸವು ಹೊಸದು, ಸಹದ್ಯೋಗಿಗಳು ಹೊಸಬರು. ಕೆಲವರು ಪ್ರೀತಿಯಿಂದ ಮಾತನಾಡಿಸಿದರೆ, ಕೆಲವರನ್ನು ಮಾತನಾಡಿಸಲು ಕಷ್ಟ ಇತ್ತು ಕಾರಣ ನಾವು ಪ್ರಿಂಟ್ ಮೀಡಿಯಾ ಅನ್ನೋ ತಾತ್ಸಾರ ಕೆಲವರದು. ನಮ್ಮ ಕೆ.ಪಿ. ನಾಗರಾಜ ಅಂತು ಕಂಗಾಲ್ ಆಗ್ಬಿಟ್ಟಿದ್ದ. ಆದ್ರೆ ಅಲ್ಲಿ ಸಿಕ್ಕ ಅಕ್ಕ ಶೋಭಾ, ಸುಭಾಷ್ ಹುಗಾರ್, ಜಯಪ್ರಕಾಶ್ ಶೆಟ್ಟಿ, ಹಳೆ ಗೆಳೆಯ ವಿನೋದ್, ಸದಾ ನನ್ನೊಂದಿಗೆ ಜಗಳ ಆಡೋ ಜೈ ಶಂಕರ್, ಅಲ್ಲಿನ ಮೂಲ ನಿವಾಸಿ ಆದರು ನನ್ನ ಇಷ್ಟ ಪಟ್ಟ ಗೆಳೆಯ ಅರವಿಂದ್ ಬಿರಾದರ್, ಸ್ವಲ್ಪ ಮಾತಿನ ಗೆಳೆಯ ಉಮೇಶ್, ನನ್ನನು ಸದಾ ರೇಗಿಸುವ ಸಬಿತ, ಅಣ್ಣ ಅಂತ ಕಾಡುವ ಶ್ಯಾಮಲಾ ನನ್ನೊಳಗಿನ ಅನಾಥ ಭಾವ ದೂರ ತಳ್ಳಿದರು. ಹೊಸ ನೀರು ಹರಿಯ ತೊಡಗಿತು, ಹೊಸಬರಿಗೆ ನಾನೇ ಹಳಬ. ಸುವರ್ಣ ನಮ್ ಟೀಂ ಅಂತ ಅನ್ಸೋಕೆ ಶುರು ಆಯಿತು.
ಮೆಟ್ರೋ ರಿಪೋರ್ಟರ್ ಆಗಿದ್ದ ದಿನಗಳ ಅನುಭವ ವಿಚಿತ್ರವಾದದ್ದು. ರಾಜಕೀಯ ವರದಿಗಾರನಾಗಿ ಸುವರ್ಣದಲ್ಲಿ ದುಡಿದ ದಿನಗಳು ಮೋಸ್ಟ್ ಮೆಮೊರಬಲ್. ಅದಕ್ಕೆ ಮಾನ್ಯ ಸಿ.ಎಂ ಯಡಿಯೂರಪ್ಪಗೆ, ಎಚ್.ಡಿ. ಕುಮಾರಸ್ವಾಮಿಗೆ ಥ್ಯಾಂಕ್ಸ್ ಹೇಳಲೇಬೇಕು. ದಿನಗಟ್ಟಲೆ ಸಿ.ಎಂ. ಮನೆ, ರಾಜಭವನ, ರೆಸಾರ್ಟ್ ಕಾಯೋದು ಕಲಿತೆ. ಅದೇ ದಿನಗಳಲ್ಲಿ ಅಂಡಮಾನ್ ನೋಡಿ ಬಾರೋ ಅವಕಾಶ ಕೊಟ್ಟರು ರಂಗನಾಥ್ ಸರ್. ಮೊದಲ ಬಾರಿ ವಿಮಾನವು ಹತ್ತಿ ಇಳಿದೆ. ಹೂಗಾರ್ ಹಿರಿಯರಾದ್ರು ನಮ್ಮೊಂದಿಗೆ ಕಿರಿಯರಾಗಿ ಕೆಲಸ ಮಾಡಿದ್ರು. ಅವರ ಹಾಸ್ಯ ಪ್ರಜ್ಞೆ ಗೆ ಅವರೇ ಸಾಟಿ. ಇನ್ನು ಜಯಪ್ರಕಾಶ್ ಶೆಟ್ಟಿ ಕಾಲೇಜ್ ಹುಡುಗನಾಗಿ ಬಿಡ್ತಿದ್ರು. ಕೆಲಸದ ಒತ್ತಡವನ್ನು ಒಂದು ತಂಡವಾಗಿ ಎಂಜಾಯ್ ಮಾಡೋದು ಕಲಿತೆವು. ಇನ್ನು ನಮ್ ಕ್ಯಾಮರಾಮನ್ ಗಳು, ಡ್ರೈವರ್ ಗಳು ನೀಡಿದ ಬೆಂಬಲಕ್ಕೆ ಧನ್ಯವಾದ ಹೇಳಲೇಬೇಕು. ಮೊದಮೊದಲು ಟಿವಿ ಸ್ಪೀಡಿಗೆ ಬೆದರಿದಾಗ ನೆರವಿಗೆ ಬಂದು ಆತ್ಮ ವಿಶ್ವಾಸ ತುಂಬಿದ್ದೆ ಕ್ಯಾಮರಾಮನ್ ಹಾಗು ಡ್ರೈವರ್ ಗಳು. ಕೆಲವರು ಅವಮಾನಿಸಿದ್ದು, ಗೇಲಿ ಮಾಡಿದ್ದು ಇದೆ. ಅವೆಲ್ಲ ಇಲ್ಲಿ ಗೆಲ್ಲಲೇ ಬೇಕು ಅನ್ನೋ ಹಠ ಬೆಳೆಯಲು ಹೆಲ್ಪ್ ಆದವು.
ಇದ್ದಕಿದ್ದಂತೆ ಒಂದು ದಿನ ನನ್ನ ಮೆಟ್ರೋ ಚೀಫ್ ಅಂತ ಘೋಷಿಸಿದರು. ಅಳಕುತ್ತ ಆ ಸೀಟ್ನಲ್ಲಿ ಕುಳಿತೆ. ಹದಿನಾರು ರಿಪೋರ್ಟರ್ ಗಳ ದೊಡ್ಡ ತಂಡಕ್ಕೆ ನಾನೇ ಲೀಡರ್. ಈ ತಂಡದಲ್ಲಿ ೯ ಹುಡುಗಿಯರು. ಕೆಲಸ ಮಾಡುತಿದ್ದವ, ಕೆಲಸ ಮಾಡಿಸುವ ಕೆಲಸ ಹೇಗೆ ಎಂದು ಅಳಕುತ್ತಲೇ ಕೆಲಸ ಆರಂಭಿಸಿದೆ. ಅವರ ಪಾಡಿಗೆ ಅವರು ಕೆಲಸ ಮಾಡಲು ಬಿಟ್ಟು ಪ್ರತಿಯೊಬ್ಬರ ಶಕ್ತಿ, ಆಸಕ್ತಿ ತಿಳ್ಕೊಂಡೆ. ಅಕ್ಕ ಶೋಭಾ ನೆರವು ಬೇಕಾಯ್ತು. ಎಷ್ಟು ಸ್ಟೋರಿ ಅನ್ನೋದಲ್ಲ, ಯಾವ ಸ್ಟೋರಿ ಅನ್ನೋದರ ಮೇಲೆ ಕೆಲಸ ಶುರು ಮಾಡಿದೆವು. ಫಸ್ಟ್ ಅನ್ನೋದಕಿಂತ ಬೆಸ್ಟ್ ಅನ್ನೋದರ ಕಡೆ ಗಮನ ಕೊಡಿ ಅಂತ ಒಂದು ಮೀಟಿಂಗ್ ಮಾಡಿ ಪುಟ್ಟ ಭಾಷಣ ಮಾಡಿದೆ. ಬರ್ತಾ ಬರ್ತಾ ಸಲಿಸಾಯ್ತು, ಜೊತೆಗೆ ಬೇರೆಯವರು ರಜೆ ಇದ್ದಾಗ ಇನ್ಪುಟ್ ಜವಾಬ್ದಾರಿಯು ಬಿತ್ತು . ನನ್ನ ಟೀಂ ಹುಡುಗರು ಇಷ್ಟ ಪಟ್ಟು ಕೆಲಸ ಮಾಡಲು ಶುರು ಮಾಡಿದರು. ಮೊದಲಿಗೆ ನನ್ನ ಬೈದಿದ್ದ ಹುಡುಗರು, ನನ್ನ ನಿರ್ದಾರಕ್ಕೆ ಕಾರಣ ತಿಳಿದು ಸಾರೀ ಅಂದ್ರು. ನನ್ನೋಳಗಬ್ಬ ಲೀಡರ್ ಇದಾನೆ ಅನ್ನೋದನ್ನ ನನಗೆ ತಿಲಿಸಿಕೊತ್ತಿದ್ದೆ ಮೆಟ್ರೋ ಟೀಂ. ನಾವು ಅಂದುಕೊಂದಸ್ತು ಅಲ್ಲದಿದ್ದರೂ ಮೊದಲಿಗಿಂತ ವಾಸಿ ಅನ್ನೋ ಮಟ್ಟಕ್ಕೆ ನಮ್ ಟಿಅರ್ ಪಿ ಜಾಸ್ತಿ ಆಯಿತು. ಗೂಳಿ ತರ ತಿರ್ಗಾಡ್ತಿದ್ದೋನು ಕುಳಿತು ಕೆಲಸ ಮಾಡೋದು ಕಷ್ಟ ಅಂತ ಮೊದ ಮೊದಲು ಅನ್ನಿಸಿದ್ರೂ, ಬರ್ತಾ ಬರ್ತ ಎಲ್ಲವು ಅಡ್ಜಸ್ಟ್ ಆಯಿತು. ನಮ್ ಟೀಂ ನಲಿ ಬಹುತೇಕ ಎಲ್ಲ ಹೊಸಬರೇ. ಅವರ ನಡುವಿನ ಸಣ್ಣ ಸಣ್ಣ ಕಿತ್ತಾಟಗಳಿಗೆ ಮೂಕ ಪ್ರೇಕ್ಷಕನಾಗಿ ಇರ್ತಿದ್ದೆ. ಮಿತಿ ಮೀರೋ ಹೊತ್ತಿನಲ್ಲಿ ಎಂಟ್ರಿ ಕೊಡೋದು. ನಾನು ಬೇಡ ಅಂದ್ರು ಕೆಲವು ಮಾಹಿತಿ ಕೊಡೊ ಹುಡುಗರು ಎಲ್ಲ ಸೇರಿ ನನ್ನ ಅವ್ರು ನಮ್ ಚೀಫ್ ಅಂತ ಒಪ್ಪಿದರು.
ಕೆಲವರು ಆಗಾಗ ಮನಸಿಗೆ ಬೇಜಾರು ಮಾಡಿದ್ದು ಇದೆ. ಟೀಂ ಸ್ಪಿರಿಟ್ ಮುಂದೆ ಆ ಬೇಜಾರಿಗೆ ಬೆಲೆ ಇಲ್ಲ. ಕೆಲವೊಮ್ಮೆ ಬೈದ್ದಿದ್ದೇನೆ, ಎಲ್ಲವನು ಮರೆತು ನನ್ನ ಲೀಡರ್ ಅನ್ನಿಸಿದ ಆ ತಂಡಕ್ಕೆ ಋಣಿ ನಾನು.
ಮೆಟ್ರೋ ಟೀಂ ನಮ್ಮದು ಅಂತ ಖುಷಿ ಇಂದ ಕೆಲಸ ಮಾಡೋವಾಗ್ಲೇ ನನ್ನ ಹಳೆ ಆಸೆಗೆ ಉದಯವಾಣಿ ಅವಕಾಶ ನೀಡುವೆ ಅಂತು. ಅಳುಕುತ್ತ ಅನಾಥ ಭಾವದಿಂದ ಬರಮಾಡಿಕೊಂಡ ಸುವರ್ಣ ನ್ಯೂಸ್ ನನ್ನನ್ನು ಕಳಿಸಿಕೊಡುವಾಗ ಭಾವುಕವಾಯ್ತು. ನನ್ನ ಕಣ್ಣ ಅಂಚು ಒದ್ದೆಯಾಗಿತ್ತು. ವಿಶೇಷವಾಗಿ ನಮ್ ಮೆಟ್ರೋ ಟೀಂ ಹುಡುಗರು ನನ್ನ ಸೆಲೆಬ್ರಿಟಿ ತರ ಫೀಲ್ ಮಾಡೋ ಹಾಗೆ ಮಾಡಿದ್ರು. ಯಾರು ಅಳಬಾರದು ಅಂತ ಎಲ್ಲರನ್ನು ನಗಿಸುತ್ತಲೇ ಕೆಲಸ ಮುಗಿಸಿ ಹೊರಟಿದ್ದೆ. ಆಗ ತಾನೇ ನೈಟ್ ಶಿಫ್ಟ್ ಗೆ ಬಂದ ಗೆಳೆಯ ರವಿ ಅಂತು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತುಬಿಟ್ಟ. ನನ್ನನು ಅಳಿಸಿಬಿಟ್ಟ. ಕೆಲವರು ಭಾವುಕವಾಗಿ ಮೇಲ್ ಮಾಡಿದ್ರು. ಕೊನೆಯ ಮೀಟಿಂಗ್ನಲ್ಲಿ ಹೇಳಿದೆ, ಇನ್ ಮುಂದೆ ನಾನು ನಿಮ್ ಬಾಸ್ ಅಲ್ಲ ಫ್ರೆಂಡ್ ಮಾತ್ರ. ನನ್ನ ಹೆಸರು ಹಿಡಿದು ಕರಿಯಬಹುದು ಅಂದಿದ್ದೆ. ಬೈಕ್ ಹತ್ತುವ ಹೊತ್ತಿಗೆ ಒಂದು ಹುಡುಗಿಯ ಎಸ ಎಂ ಎಸ - ಮಚ್ಚ ವೀ ಮಿಸ್ ಯು ಲಾಟ್ ಅಂತ. ಖುಷಿ ಆಯಿತು. ನಮ್ ಡ್ರೈವರ್ ವೆಂಕಿ ಲವ್ ಯು ಬಾಸ್ ಅಂತ ಮೆಸ್ಸಜಿಸಿದ. ಕೆಲವರು ಅಣ್ಣ ಅಂದ್ರು. ಫೋಟೋಸ್ ತೆಗೆದು ಫೇಸ್ ಬುಕ್, ಬ್ಲಾಗ್ ತುಂಬಿಸಿದರು. ಅವರ ಅಭಿಮಾನಕ್ಕೆ, ವಿಶ್ವಾಸಕ್ಕೆ thankssssssssssss.

ಬಟ್ ಸುವರ್ಣ ತಂಡದಲ್ಲಿ ಕೆಲಸ ಕಲಿಸುವ ಅಕ್ಕ ಶೋಭಾ ಸಿಕ್ಕಳು, ಕಾಡುವ ತಂಗಿಯರು ಸಿಕ್ಕರ್ರು, ಹಿರಿ ಕಿರಿ ಗೆಳೆಯರು ಸಿಕ್ಕರೂ. ಒಂದೇ ಒಂದು ಕೊರತೆ ಇಲ್ಲೂ ಮುಂದುವರಿಯಿತು. ಗರ್ಲ್ ಫ್ರೆಂಡ್ ಮಾತ್ರ ಸಿಗಲಿಲ್ಲ. ನೋಡೋಣ ಡೆಲ್ಲಿ ಯಾದರು ಗರ್ಲ್ ಫ್ರೆಂಡ್ ಕೊಡುತ್ತ.....??!!. ಮದ್ಹುವೆ ಆಗಿ ಹೋಗೋ ಅಂತ ಅಮ್ಮನ ಮಾತು ಯಾಕೋ ಕೇಳಿಸುತ್ತಿಲ್ಲ. ಡೆಲ್ಲಿ ಇಂದ ಪಂಜಾಬಿ ಸೊಸೆ ತಂದು ಕೊಡ್ತೀನಿ ಅಂದಿದ್ದೇನೆ. ನನ್ನ ಗೆಳೆಯರು ನನ್ನ ಹೊಸ ಹುಚಾಟ ಸಹಿಸಿಕೊಳ್ಳೋ ಭರವಸೆ ನೀಡಿದ್ದಾರೆ. ಹೊಸ ಭಯ, ಕನಸಿನೊಂದಿಗೆ ಹೊಸ ಕೆಲಸಕ್ಕೆ ಹೊರಟಿದ್ದೇನೆ.... ಗೆಲ್ಲುತ್ತೇನ ಗೊತ್ತಿಲ್ಲ