Friday, January 30, 2009

ಸಮಸ್ಯೆಗಳ ಸುನಾಮಿ ಮಾನೋಮಿಯಲ್ಲಿ ಜಗಳದ ಸುದ್ದಿ...

ಸಮಸ್ಯೆಗಳಲ್ಲಿ ಹಳ್ಳಿ ಇದೆಯೋ, ಈ ಹಳ್ಳಿನೇ ಸಮಸ್ಯೆ ಆಗಿದೆಯೋ ಗೊತ್ತಿಲ್ಲ. ಆದರೆ ಈ ಊರಿನಲ್ಲಿ ಭರ್ಜರಿಯಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ನಿಂತಿಲ್ಲ...?ಎಂಬಿತ್ಯಾದಿಯಾಗಿ ಕ್ಯಾಮೆರಾ ಮುಂದೆ ನಿಂತ ಟಿವಿ 9 ವರದಿಗಾರ ಮಿತ್ರ ರೆಹಮತ್ ಕಂಚಿಗಾರ ಅವರು ತಮ್ಮ ವಿಶೇಷ ವಿಶಿಷ್ಟ ಶೈಲಿಯಲ್ಲಿ ವರದಿ ಒಪ್ಪಿಸುತ್ತಿದ್ದರು.
ಅವರ ಒಂದು ಕೈ ಮೈಕ್ ಹಿಡಿದಿದ್ದರೆ ಮತ್ತೊಂದು ಕೈ ಪ್ಯಾಂಟು ನೀರಿನಲ್ಲಿ ತೋಯ್ದೀತು ಎಂದು ಪ್ಯಾಂಟು ಹಿಡಿದುಕೊಂಡಿದ್ದರು. ಅವರು ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ನಿಂತಿದ್ದರು.
ಅವರ ಎಡ ಬದಿಗೆ ಪ್ರತಿ ಮಳೆಗಾಲದಲ್ಲಿ ದ್ವೀಪವಾಗುವ, ರಸ್ತೆ ಇಲ್ಲದ ಸಮಸ್ಯೆಗಳ ಸುನಾಮಿಯಲ್ಲೇ ಇರುವ ಮಾನೋಮಿ?ಗ್ರಾಮ ಅಚ್ಚರಿಯಿಂದ ನೋಡುತಿತ್ತು. ಇನ್ನಾದರೂ ರಾಜಕಾರಣಿಗಳು ನಮ್ಮ ಸಮಸ್ಯೆಗೆ ಧಾವಿಸುವರೆ ಎಂದು ಆಸೆಯನ್ನು ಕಣ್ಣುಗಳಲ್ಲಿ ತುಂಬಿ ನಿಂತು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಟಿವಿ ಛಾನಲ್ ವರದಿಗಾರರನ್ನು ತದೇಕ ಚಿತ್ತದಿಂದ ಗ್ರಾಮಸ್ಥರು ನೋಡುತ್ತಿದ್ದರು.
ಆರು ಕಿಮೀ ನಡೆಯಬೇಕು..,
ಅದು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕು ಅರಬಾವಿ ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮ. ಆ ಗ್ರಾಮಕ್ಕೆ ನೀವು ಹೋಗಬೇಕು ಅಂದರೆ ಬರೋಬ್ಬರಿ 6 ಕಿಮೀ ನಡೆಯಬೇಕು. ಮೂರು ಕಿಮೀ ನಡೆಯಲು ಕಚ್ಚಾ ಹಾದಿ ನಿಮ್ಮ ನೆರವಿಗೆ ಬಂದರೆ, ಇನ್ನು 3 ಕಿಮೀ ಸಾಗಲು ನೀವು ಹೊಲದ ಬದಿಯ ಕಾಲು ಹಾದಿಯನ್ನೇ ಆಶ್ರಯಿಸಬೇಕು. ಇಷ್ಟೆಲ್ಲಾ ಸಾಗಿ ಬಂದ ಮೇಲೆ ಹೊಳೆಯಂತಹ ಹಳ್ಳ ನಿಮ್ಮನ್ನು ಅಡ್ಡಗಟ್ಟುತ್ತದೆ. ಆ ಹೊಳೆಯನ್ನು ದಾಟಿದರೆ ಊರು ಸಿಗುತ್ತದೆ. ಮಳೆಗಾಲದಲ್ಲಿ ಈ ಹಳ್ಳ ನಾಲ್ಕು ಆಳು ಎತ್ತರಕ್ಕೆ ಹರಿಯಲು ತೊಡಗುತ್ತದೆ. ಆಗ ಈ ಊರು ಅಕ್ಷರಶಃ ದ್ವೀಪವಾಗುತ್ತದೆ. ಸರಿ ಸುಮಾರು ಒಂದೂವರೆಯಿಂದ ಎರಡು ತಿಂಗಳು ಇಲ್ಲಿನವರಿಗೆ ಹೊರಗಿನ ಸಂಪರ್ಕ ಕಟ್ ಆಗುತ್ತದೆ. ಈ ಊರಿನಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರು ಬರಲಾಗುವುದಿಲ್ಲ. ಹೀಗಾಗಿ ಈ ಶಾಲೆಗೆ ಅಘೋಷಿತ ರಜೆ. ಇನ್ನು ಊರ ಹೊರಗೆ ಶಾಲೆ ಕಾಲೇಜಿಗೆ ಹೋಗುವ ಹುಡುಗರಿಗೂ ರಜೆ. ಇದರಿಂದಾಗಿಯೇ ಈ ಊರಿನಲ್ಲಿ ಹೆಚ್ಚು ಓದಿದವರು ಇಲ್ಲ.
ಇಷ್ಟೆಲ್ಲಾ ಸಮಸ್ಯೆ ಇರುವ ಈ ಊರಿನಲ್ಲಿ 400 ಮತಗಳಿವೆ. ಸರಿಸುಮಾರು 1200ರಷ್ಟು ಜನಸಂಖ್ಯೆ ಇದೆ. ಆದರೂ ಇಲ್ಲಿಗೆ ವೋಟು ಕೇಳಲು ಅಭ್ಯರ್ಥಿ ಬರುವುದಿಲ್ಲ. ಅವನ ಬಂಟರು ಬಂದು ಆಶ್ವಾಸನೆಯ ಮಳೆ ಸುರಿಸಿ, ಮತ ಯಾಚಿಸಿ ಹೋಗುತ್ತಾರೆ. ಅದನ್ನೇ ನಂಬಿದಂತೆ ಮಾಡಿ ಇವರು ವೋಟು ಹಾಕುತ್ತಾರೆ.
ಕೈ ತಪ್ಪಿತ್ತು..
ಈ ಗ್ರಾಮದ ಸಮಸ್ಯೆ, ಪಡಿಪಾಟಲನ್ನು ನಾನು ಅರಬಾವಿ ಕ್ಷೇತ್ರಕ್ಕೆ ಹೋಗುವ ಮುನ್ನಾ ದಿನವೇ ನಮ್ಮ ಬೆಳಗಾವಿಯ ಹಿರಿಯ ವರದಿಗಾರ ಎಂ.ಕೆ. ಹೆಗಡೆ ವಿಶೇಷ ವರದಿ ಬರೆದಿದ್ದರು. ನಾನು ಹೋಗಿ ಈ ಸುದ್ದಿ ನೋಡಿ, ನನ್ನ ಕೈಯಿಂದ ತಪ್ಪಿತಲ್ಲ. ವಾಪಸ್ ಹೋಗುವುದರೊಳಗೆ ಆ ಊರಿಗೆ ಹೋಗಿ ಬರಬೇಕು. ಎಂದುಕೊಂಡಿದೆ. ನನಗಿಂತ ಮುಂಚಿತವಾಗಿ ಹೋಗಿದ್ದರೂ ಆ ಸುದ್ದಿ ಮೊದಲು ತನಗೆ ಸಿಗಲಿಲ್ಲವಲ್ಲ ಎಂದು ಕಸ್ತೂರಿ ಟಿವಿಯ ಮುಸ್ತಫಾ, ಶಿವಾಜಿ ಕೈ ಕೈ ಹಿಸುಕಿಕೊಂಡಿದ್ದರು. ತಾವೂ ಅಲ್ಲಿಗೆ ಹೋಗು ಬರುವ ಇರಾದೆ ವ್ಯಕ್ತಪಡಿಸಿದ್ದರು. ಆದರೆ, ಸುದ್ದಿಯ ಒತ್ತಡಗಳಿಂದಾಗಿ ತಾಸು ಗಟ್ಟಲೆ ನಡೆದು ಹೋಗಿ ಸುದ್ದಿ ಮಾಡುವ ಸಮಯ ಯಾರಿಗೂ ಸಿಕ್ಕಿರಲಿಲ್ಲ.
ಜಗಳ ಎಂದೂ...
ಅರಬಾವಿ ಉಪ ಚುನಾವಣೆ ದಿನ ಇಂತಿಪ್ಪ ಮಾನೋಮಿ ಗ್ರಾಮದಲ್ಲಿ ಮತಗಟ್ಟೆಯಲ್ಲಿ ಅಧಿಕಾರಿಗಳು ಪಕ್ಷವೊಂದರ ಪರ ಮತ ಹಾಕುವಂತೆ ಹೇಳುತ್ತಿದ್ದರು. ಇದರಿಂದಾಗಿ ಜಗಳ ಶುರುವಾಗಿ ಮತದಾನ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಸುದ್ದಿಗಾರರಿಗೆ ದೊರೆಯಿತು. ಈ ಜಗಳದ ಸುದ್ದಿಗಾಗಿ ಟಿವಿ೯ನೇ ರೆಹಮತ್ ಕಂಚಿಗಾರ, ಅವರ ಕ್ಯಾಮೆರಾ ಕಣ್ಣು ಸ್ಟೀಫನ್, ಈಟಿವಿಯ ಗುರುಲಿಂಗಸ್ವಾಮಿ, ರಾಕೇಶ್, ಕಸ್ತೂರಿ ಟಿವಿಯ ಮುಸ್ತಫಾ, ಶಿವಾಜಿ, ಝೀ ಟಿವಿಯ ನಾಗರಾಜ್ ಕಿರಣಗಿ, ನಮ್ಮೆಲ್ಲರ ಪಾಲಿನ ಗೈಡ್ ಮುನ್ನಾ ಬಾಗವಾನ್ ಜೊತೆಯಲ್ಲಿ ಮಾನೋಮಿಗೆ ಹೋದೆವು.
ಆ ಊರಿಗೆ ಮಾಧ್ಯಮ ತಂಡವು ಕಾಲಿಡುತ್ತಿದ್ದಂತೆ ಆ ಊರಿನ ಮಂದಿ ರಾಜಕೀಯ ಜಗಳ ಮರೆತರು. (ರಾಜಕಾರಣಿಗಳು ಬಂದಾಗಲೂ ಗ್ರಾಮಸ್ಥರು ಹೀಗೆ ವರ್ತಿಸಿದರೆ ಚೆನ್ನಾಗಿರುತ್ತೆ.) ಅದು ಸಣ್ಣ ಜಗಳ ಬಿಡಿ. ಈ ವೋಟಿಂಗು ಶುರು ಆಗ್ಯದ. ನಮ್ಮೂರು ಸಮಸ್ಯೆ ಹಿಂಗಿಂಗ ಅದ ಎಂದು ಅಲವತ್ತುಕೊಳ್ಳಲು ತೊಡಗಿದರು. ಎಲ್ಲವೂ ಕ್ಯಾಮೆರಾಗಳ ಕಣ್ಣು ತುಂಬಿಕೊಳ್ಳ ತೊಡಗಿತು. ಆ ಊರಿನ ಸಮಸ್ಯೆ ಎಲ್ಲವೂ ದಾಖಲಾಯಿತು. ಅಲ್ಲಿಗೆ ನಮ್ಮಂತೆಯೇ ಚುನಾವಣಾ ಕರ್ತವ್ಯಕ್ಕಾಗಿ ನಮ್ಮ ಧಾರವಾಡದ ಪಿಎಸೈ ಒಬ್ಬರನ್ನು ಹಾಕಿದ್ದರು. ಅವರು ಊರಿನ ಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿ, ರಾಜಕೀಯ ಬಿಡಿ ಅಭಿವೃದ್ಧಿ ಕೇಳಿ ಎಂಬ ಕಿವಿಮಾತನ್ನು ಗ್ರಾಮಸ್ಥರಿಗೆ ಹೇಳುತ್ತಿದ್ದರು. ಎಲ್ಲವನ್ನೂ ಕೇಳಿಕೊಂಡಂತೆ ಗ್ರಾಮಸ್ಥರು ಮಾಡಿದರು. ಆದರೆ, ವಾಪಸ್ ನಾವು ಹೋಗುವಾಗ ದಾರಿ ಜೊತೆಗೆ ಸಿಕ್ಕ ಮಹಿಳೆ ಪಾರವ್ವ, ಹೇಳಿದ್ದು - ಎಲ್ಲಾ ನಮ್ಮೂರಿನವರದೇ ತಪ್ಪು. ರಸ್ತೆ ಮಾಡಿಸಿಕೊಡಿ ಎಂದು ಎಲ್ಲಾ ಒಗ್ಗಟ್ಟಾಗಿ ಕೇಳದ್ರ ಆಗುತ್ತೆ. ಆ ಪಾರ್ಟಿ, ಈ ಪಾರ್ಟಿ ಮಾಡಿಕೊಂಡು ಏನೂ ಆಗದಂಗೆ ಆಗೈತಿ. ರಸ್ತೆಗೆ ಜಾಗ ಬಿಡಿಸೋದು ಕಷ್ಟ ಆಗೈತೆ. ಈ ಕಷ್ಟ ಎಲ್ಲಾ ಗೆದ್ದವರೆಗೆ ಯಾಕೆ ಬೇಕು? ಎಂಬ ಪ್ರಶ್ನೆ, ವಿಷಾದವನ್ನು ವ್ಯಕ್ತಪಡಿಸಿ ಹಳ್ಳ ದಾಟಲಾಗದೆ ಸತ್ತ ಗರ್ಭಿಣಿಯರು, ಅಂಗವಿಕಲರ ಕಥೆಗಳನ್ನು ಹೇಳಿದರು. ಎಲ್ಲವೂ ಎಲ್ಲದರಲ್ಲೂ ಪ್ರಸಾರವಾಯಿತು. ಆದರೆ, ಆ ಹಳ್ಳಿಯತ್ತ ಚುನಾವಣೆ ನಂತರ ಗೆದ್ದವರು ಹೋಗಿಲ್ಲ, ಸೋತವರು ಹೋಗಿಲ್ಲ. ವೋಟು ಕೇಳಾಕೆ ಅವರು ಹೋಗಿರಲಿಲ್ಲ.
ಪಂಚಿಂಗ್ ಪಿಟಿಸಿ ಕೊಡುವ ರೆಹಮತ್ ಹೇಳುತ್ತಿದ್ದ - ಹಳ್ಳಿಗಳಲ್ಲಿ ಸಮಸ್ಯೆ ಇದೆಯೋ, ಈ ಹಳ್ಳಿನೇ ಸಮಸ್ಯೆ ಆಗಿದೆಯೋ...............ಅಭಿವೃದ್ಧಿಯ ಪಂಚಮಿ ಈ ಮಾನೋಮಿಗೆ ಯಾವಾಗ ಬರುತ್ತೋ ಎಂಬ ಮಾತು ಮಾತ್ರ ಈಗಲೂ ನೆನಪಾಗುತ್ತಿದೆ...,

4 comments:

Anonymous said...

a huge disparity in the devlopment process of india......... growing difference between the rich and poor....... we talk of sez's where a seperate ruling will be their and where no rules of the country will be applied and here their are villages where no development policies have reached........ mera bharat mahan

ಬಹುಮುಖ said...

ಊರಿದ್ದಲ್ಲಿ ವ್ಯಾಜ್ಯ ಇದ್ದೆ ಇರುತ್ತೆ. ಅರಿತು ಕೂಡಿ ಬಾಳಿದರೆ ಸ್ವರ್ಗ ಸುಖ ಅನ್ನುವುದು ಅವರಿಗಿಲ್ಲ. ಅಲ್ಲಿಯತನಕ ಈ ಗೋಳು ಅವರಿಗೆ ತಪ್ಪಿದ್ದಲ್ಲ.

Anonymous said...

ಹಾಯ್ ಅವಿನಾಶ್,
ಮಾನೋಮಿಯ ಕತೆ ನಮ್ಮೂರು ದೇವಳಿಗಿಂತ ತೀರ ಭಿನ್ನವೇನಲ್ಲ. ಗದ್ದೆಯಂಚಿನ ಮೇಲೆ ನಡೆದೇ ಊರು ಸೇರಬೇಕಾದ ನೂರಾರು ಹಳ್ಳಿಗಳು ಉಡುಪಿ ಜಿಲ್ಲೆಯಲ್ಲಿವೆ. ಮಳೆಗಾಲದಲ್ಲಿ ಇವು ಅಕ್ಷರಶಃ ದ್ವೀಪಗಳಾಗುವುದೂ ಹೌದು.
ಹಾಗಿದ್ದರೂ, ಮೊಣಕಾಲು ಮಟ್ಟದ ನೀರಲ್ಲಿ ಸರಭರ ಕಾಲು ಸರಿಸುತ್ತ ಸುರಿವ ಹನಿಮಳೆಯಲ್ಲಿ ನೆನೆಯುವುದು ಖುಷಿ ಅನ್ಸುತ್ತೆ. ಆದ್ರೆ ಯಾಕೋ ಗೊತ್ತಿಲ್ಲ, ಬೆಂಗಳೂರಿನ ಗಂಟೆ ಕಾಲದ ಮಳೆ ರೇಜಿಗೆ ತರುತ್ತೆ! ಕೊಳಚೆ ಕಾಲುವೆಗಳು ತುಂಬಿ ಹರಿವುದ ಕಂಡರೆ ಮನಸ್ಸು-ಮೂಗು ಎರಡೂ ಮುದುಡಿಕೊಳ್ಳುತ್ವೆ.
ನಮ್ಮೂರಿಗೆ ಇಂಥ ಅಭಿವೃದ್ಧಿ ಬೇಕಾ ಅನ್ಸುತ್ತೆ...
ಸ್ನೇಹದೊಂದಿಗೆ
-ದೇ.ರv

arivina marevu said...

ಆತ್ಮೀಯ ಅವಿನಾಶ,

ಒಳ್ಳೆ ಬೆಳಕು ಚೆಲ್ಲುವ ಲೇಖನ. ಖುಷಿಯಾಯಿತು ನಿಮ್ಮ ನಿರೂಪಣಾ ಶೈಲಿ. ಆ ಗ್ರಾಮಸ್ಥರಿಗೆ ಆದಷ್ಟು ಬೇಗ ಅವರ ಬವಣೆಗಳಿಂದ ಬಿಡುಗಡೆ ಸಿಗುವಂತಾಗಲಿ.

ಹರ್ಷವರ್ಧನ್ ಶೀಲವಂತ