Sunday, February 15, 2009
59 ಪ್ರೇಮ ವಿವಾಹ ಮಾಡಿಸಿದ 'ಸಾಧನಾ'
ಪ್ರೀತಿಸಿದ ಹೃದಯಗಳನ್ನು ಬೇರ್ಪಡಿಸುವ ಮನೆಯವರ ಯತ್ನಕ್ಕೆ ಹೆದರಿ ಧಾರವಾಡದತ್ತ ಓಡಿ ಬರುವ ಜೋಡಿಗಳಿಗೆ ಇಲ್ಲಿನ ತೇಜಸ್ವಿನಿನಗರದ ಮನೆಯೊಂದು ತವರು ಮನೆಯಾಗುತ್ತದೆ.
ಹೀಗೆ ಓಡಿ ಬಂದ ಜೋಡಿಯೊಂದು ಆತ್ಮಹತ್ಯೆಗೆ ಯತ್ನಿಸುವಾಗ ವ್ಯಕ್ತಿಯೊಬ್ಬರಿಗೆ ಸಿಕ್ಕಿದ ಕೂಡಲೇ ಅವರು ತಂದು ಬಿಟ್ಟದ್ದು ಇದೇ ಮನೆಗೆ. ಪ್ರೀತಿಯ ಹೆಸರಲ್ಲಿ ಗರ್ಭವತಿ ಮಾಡಿ ಹುಡುಗ ಕೈ ಕೊಟ್ಟಾಗಲೂ ಇಲ್ಲಿನವರಿಗೆ ನೆನಪಾಗುವುದು ಇದೇ ಮನೆಯೇ. ಕಳೆದ 8 ವರ್ಷಗಳಲ್ಲಿ ಹೀಗೆ ಬಂದ 59 ಜೋಡಿಗಳಿಗೆ ಮದುವೆ ಮಾಡಿಸಿದೆ ಈ ಮನೆ. ಇದರ ಹೆಸರು 'ಸಾಧನಾ' ಸ್ವಯಂ ಸೇವಾ ಸಂಸ್ಥೆ. ಇದು ಮನೆಯೂ ಹೌದು. 'ಸಾಧನಾ'ದ ಕಚೇರಿಯೂ ಹೌದು.
ಇಸೆಬೆಲ್ಲಾ ಝೇವಿಯರ್ ಪಾಟೀಲ್ ಎಂಬಾಕೆಯೇ ಇದರ ಮುಖ್ಯಸ್ಥೆ. ಪ್ರೇಮಿಗಳ ಪೈಕಿ ಹೆಣ್ಣು ಮಕ್ಕಳಿಗೆ ತಾಯಿಯಾಗಿ, ಹುಡುಗರಿಗೆ ಅತ್ತೆಯಾಗುವ ಈಕೆಯದೂ ಒಂದು ದುರಂತ ಪ್ರೇಮ ಕಥೆ ಇದೆ. 8ನೇ ತರಗತಿಯಲ್ಲಿರುವಾಗಲೇ ತನ್ನ ಮೇಲೆ ನಡೆದ ದೌರ್ಜನ್ಯಗಳೇ ಈ ಕಾರ್ಯಕ್ಕೆ ಪ್ರೇರಣೆ. ತನ್ನ ಪ್ರೀತಿಯಂತೆ ಇನ್ನೊಬ್ಬರ ಪ್ರೀತಿಯು ಸಮಸ್ಯೆಗೆ ಸಿಲುಕಬಾರದು ಎಂಬ ಆಸೆ, ಪ್ರೇಮ ವಿವಾಹದಿಂದ ಜಾತಿಯ ಎಲ್ಲೆಗಳು ನಾಶವಾಗುತ್ತವೆ ಎಂಬ ಆಶಯದಿಂದ ಪ್ರೇಮ ವಿವಾಹಕ್ಕೆ ಪೌರೋಹಿತ್ಯ ವಹಿಸುತ್ತಾ, ಮಾನವ ಹಕ್ಕುಗಳ ಬಗ್ಗೆಯೂ ಕೆಲಸ ಮಾಡುತ್ತಿದ್ದಾರೆ.
59ರಲ್ಲಿ..
59 ಮದುವೆಗಳ ಪೈಕಿ 26 ಜೋಡಿಗಳು ಮನೆಯವರಿಗೆ ಹೆದರಿ ಓಡಿ ಬಂದಾಗ ನಿಂತು ಮದುವೆ ಮಾಡಿಸಿದವು. 26ರ ಪೈಕಿ 23 ಜೋಡಿಗಳು ಸುಖಿ ಸಂಸಾರ ಸಾಗಿಸುತ್ತಿದ್ದಾರೆ. ಅಂತರ್ಜಾತಿ ವಿವಾಹಗಳೇ ಹೆಚ್ಚು. 3 ಕುಟುಂಬಗಳು ಮಾತ್ರ ಅತಿಯಾದ ಪ್ರೀತಿ, ಅನುಮಾನದಿಂದ, ಕೇವಲ ದೈಹಿಕ ಆಕರ್ಷಣೆಯಾದ್ದರಿಂದ ಒಡೆದ ಮನೆಯಾಗಿವೆ. ಸಾಧನಾ ಸಂಸ್ಥೆಗೂ ಮೊದಲು ತಾನು ಶಿಕ್ಷಕಿಯಾಗಿದ್ದಾಗ ಬೆಂಬಲಿಸಿ ಮಾಡಿಸಿದ ಪ್ರೇಮ ವಿವಾಹಗಳ ಸಂಖ್ಯೆ ಲೆಕ್ಕಕ್ಕಿಟ್ಟಿಲ್ಲ ಎಂದು ತಾವು ನಡೆದು ಬಂದ ಹಾದಿ, ಅನುಭವದ ಬಗ್ಗೆ ಇಸೆಬೆಲ್ಲಾ, ಮಾಹಿತಿ ನೀಡಿದರು.
ಉಳಿದ 33 ಮದುವೆಗಳು ಮಾತ್ರ ತೀವ್ರ ತರಹದ ಹೋರಾಟದಿಂದಲೇ ಮಾಡಿಸಿದವು. ಊರಿನಲ್ಲಿ ಹುಡುಗಿಯನ್ನು ನಂಬಿಸಿ, ಗರ್ಭವತಿ ಮಾಡಿದ ನಂತರ ಜಾತಿ, ಅಂತಸ್ತಿನ ನೆಪ ಹೇಳಿ ಕೈ ಕೊಡುತ್ತಿದ್ದ ವಂಚಕ ಪ್ರಕರಣಗಳ ಮದುವೆ ಅವು. ಕಾನೂನು ಪ್ರಕಾರ ಸಿಗಬೇಕಾದ ನ್ಯಾಯ ಒದಗಿಸಿದ ತೃಪ್ತಿ ಅಷ್ಟೇ ಇದರಿಂದ ಸಿಕ್ಕಿದ್ದು. ಈ ಜೋಡಿಗಳ ಪೈಕಿ ಸುಖಿ ಸಂಸಾರ ಕಾಣುತ್ತಿರುವುದು ಕೆಲವೇ ಕೆಲವು ಅಂತಾರೆ.
ಹೇಳಿಕೊಳ್ಳಲು..
ನಮ್ಮ ಎಲ್ಲಾ ಆಚರಣೆಯಂತೆಯೇ 'ಪ್ರೇಮಿಗಳ ದಿನ'ವೂ ಒಂದು. ಅದು ಅಗತ್ಯ ಕೂಡ. ಆಕೆ ಅಥವಾ ಆತನ ಮೇಲೆ ಆಸೆ, ಪ್ರೀತಿ ಹುಟ್ಟಿದ್ದರೂ ಹೇಳಿಕೊಳ್ಳಲಾಗದೆ ಚಡಪಡಿಸುತ್ತಿರುತ್ತಾರೆ. ಪಿಸು ಮಾತಿನಲ್ಲಿ ಉಸುರಲೂ ಹೆದರುತ್ತಿರುತ್ತಾರೆ. ಕಡೇ ಪಕ್ಷ ಪ್ರೇಮಿಗಳ ದಿನವಾದರೂ ನೇರವಾಗಿ, ನಡುಗುತ್ತಲೋ, ಒಂದು ಸಣ್ಣ ಗಿಫ್ಟ್ ಮೂಲಕವೋ ತನ್ನ ಪ್ರೀತಿ ಹೇಳಿಕೊಳ್ಳುವ ಅವಕಾಶವಾಗುತ್ತದೆ. ಪ್ರೇಮಿಗಳ ದಿನ ತಪ್ಪಲ್ಲ. ನಡೀಬೇಕು ಎನ್ನೋದು ಇಸೆಬೆಲ್ಲಾ ಅವರ ವಾದ.
ಯಾವ ದಿನವಾದರೂ..,
ಆದರೆ, ಪ್ರೇಮಿಗಳ ದಿನದ ಮಹತ್ವ ಗೊತ್ತಿಲ್ಲದವರು ಮಾತ್ರ ಅದರ ಹೆಸರಲ್ಲಿ ಕಾಮಕೇಳಿ, ಕುಡಿತ, ಕುಣಿತ ಮಾಡುತ್ತಾರೆ. ಅವರನ್ನೇ ನೋಡಿ, ಅವರಷ್ಟೇ ಪ್ರೇಮಿಗಳು. ಅದೇ ಪ್ರೇಮಿಗಳ ದಿನ ಎಂದು ಭಾವಿಸಿ ಕೆಲವು ಸಂಘಟನೆಗಳು ವಿರೋಧದ ಕೂಗು ಎಬ್ಬಿಸಿವೆ. ಹೀಗೆ ಕುಡಿದು, ಕಾಮಕೇಳಿ ಆಡುವವರಿಗೆ ಅದು ಪ್ರೇಮಿಗಳ ದಿನವೇ ಆಗಬೇಕಿಲ್ಲ, ಹೊಸ ವರ್ಷದ ನೆಪದಲ್ಲೂ ಮಾಡುತ್ತಾರೆ. ಹುಟ್ಟಿದ ಹಬ್ಬಗಳಾದರೂ ಇವರಿಗೆ ಸಾಕು. ಅವರಿಂದಾಗಿ, ನಿಜವಾದ ಪ್ರೇಮಿಗಳಿಗೆ, ಮುಕ್ತವಾಗಿ ಹೇಳಿಕೊಳ್ಳಬಹುದಾದ ಅವಕಾಶವೂ ತಪ್ಪಿಸುವ ಕೆಲಸ ಆಗುವುದು ಬೇಡ. ಹೃದಯದ ಪಿಸು ಮಾತುಗಳು ಇಷ್ಟ ಪಟ್ಟ ಹೃದಯಕ್ಕೆ ಕೇಳಿಸುವ ಅವಕಾಶ ತಪ್ಪಿಸಬೇಡಿ ಎಂದೂ ಮನವಿ ಮಾಡುತ್ತಾರೆ.
ಕಾಮವಲ್ಲ..
ಪ್ರೀತಿ -ಪ್ರೇಮ ಎಂದರೆ ಬರಿಯ ಕಾಮವಲ್ಲ. ಕಾಮಕ್ಕಲ್ಲ. ಪ್ರೀತಿ ಎಂದರೆ ಅದೊಂದು ಪರಿಶುದ್ಧ ಸ್ನೇಹ. ಪ್ರೀತಿ ಆದ ಕೂಡಲೇ ಕಾಮಕ್ಕೆ ಇಳಿಯಬೇಡಿ. ಅದು ಪ್ರೀತಿಯ ಒಂದು ಭಾಗ ಅಷ್ಟೇ. ಇನ್ನು ಟೀನೇಜ್ ಜೋಡಿಗಳು ಸಾಕಷ್ಟು ಬರುತ್ತಾರೆ. ಅವರಿಗೆ ಕೌನ್ಸೆಲಿಂಗ್ ನಡೆಸಿ ಇದು ಪ್ರೀತಿ -ಪ್ರೇಮಕ್ಕೆ ಸಕಾಲವಲ್ಲ ಎಂದೂ ತಿಳುವಳಿಕೆ ನೀಡಿ ಕಳುಹಿಸುತ್ತೇವೆ. ಓಡಿ ಬಂದ ಕೂಡಲೇ ಅವರಿಗೆ ಆಪ್ತ ಸಮಾಲೋಚನೆ ನಡೆಸಿ, ಅದು ನಿಜವಾದ ಪ್ರೀತಿಯಾ ಎಂದು ಅರಿತೇ ಮದುವೆ ಮಾಡಿಸುತ್ತೇವೆ. ಕೆಲವರಿಗೆ ನಾವೇ ಕೆಲಸ ಕೊಡಿಸಿದ್ದೂ ಇದೆ. ಮನೆಯವರನ್ನೇ ಒಪ್ಪಿಸಿ ಮದುವೆ ಮಾಡಿಸಿದ ಅನುಭವವೂ ಇದೆ ಎಂದರು.
ನನ್ನ ಪ್ರೀತಿಯಂತಹ ದುರಂತ ಯಾರಿಗೂ ಆಗಬಾರದು. ನನ್ನ ಎಲ್ಲಾ ಹಿನ್ನೆಲೆ ಅರಿತು ನನ್ನ ಮದುವೆಯಾದ ಎಲ್.ಟಿ. ಪಾಟೀಲರು ಈ ಸಂಸ್ಥೆ ನಡೆಸಲು ನನ್ನ ಜೊತೆಗೆ ಬಂಬಲವಾಗಿ ನಿಂತಿದ್ದಾರೆ. ಪ್ರೀತಿಸಿದವರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಪ್ರೀತಿ ನಿಜವಾಗಿದ್ದರೆ ಅದನ್ನು ಅರ್ಥ ಮಾಡಿಸಿ, ಆಗದಿದ್ದರೆ ಇಲ್ಲಿಗೆ ಬನ್ನಿ ನಾವು ನೆರವಾಗುತ್ತೇವೆ ಎಂದು ಇಸೆಬೆಲ್ಲಾ ಅಭಯ ನೀಡುತ್ತಾರೆ.
ಅವರ ವಿಳಾಸ -ಇಸೆಬೆಲ್ಲಾ ಝೇವಿಯರ್ ಪಾಟೀಲ, ಸಾಧನಾ ಸಂಸ್ಥೆ, ತೇಜಸ್ವಿನಿನಗರ, ಧಾರವಾಡ, ದೂರವಾಣಿ 0836 - 6551190 ಅಥವಾ ಮೊಬೈಲ್ -99452 57473 ಸಂಪರ್ಕಿಸಬಹುದು.
Subscribe to:
Post Comments (Atom)
3 comments:
good article
nammalli intavara sankye hechchali... thanks AVI olle maahiti ge..
Premigala hrudayakke kivikottu
Premasandesha ravaaneyondige
Preethi vatsalyadinda salaheyannittu
"PREMA SANGAMA"kke
Daarideepavagiruva Sadhana samstheyavarige nanna preethipoorvaka pranamagalu,
Premi,
SharmilaNataraj
Post a Comment